ದಾವಣಗೆರೆ, ಸೆ. 9- ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ, ಪರಿಶಿಷ್ಟ ಜಾತಿಗಳ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಪರಿಶಿಷ್ಟರ ಮೀಸಲಾತಿಯನ್ನು ನಾಲ್ಕು ಗುಂಪುಗಳನ್ನಾಗಿ ವರ್ಗೀಕರಣ ಮಾಡಲು ಆಗ್ರಹಿಸಿ ಮೂರು ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2004 ರಲ್ಲಿ ಎಜೆ ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ 2012 ಜೂ. 14 ರಂದು ವರದಿ ಸಲ್ಲಿಸಿತು ಎಂದರು.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸಹ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡುವ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿತು. 2024 ಮಾರ್ಚ್ 17 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು ಎಂದು ಹೇಳಿದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ವಿವಿಧ ರಾಜ್ಯಗಳ ಆಯೋಗದ ವರದಿಗಳು ಮತ್ತು ಕೋರ್ಟ್ನ ಹಲವು ತೀರ್ಪುಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್ ನ ಏಳು ನ್ಯಾಯಾಧೀಶರ ಸಂವೀಧಾನ ಪೀಠ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದರು.
ಪರಿಶಿಷ್ಟ ವರ್ಗದ ಎಸ್ಸಿಪಿ / ಟಿಎಸ್ಪಿ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಕೂಡಲೇ ಸಮಾಜದ ಅಭಿವೃದ್ಧಿಗೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪತ್ರಿಭಟನೆಯಲ್ಲಿ ಹೆಚ್. ಕೊಟ್ರೇಶ್, ಹರೀಶ್ ಅಜ್ಜಂಪುರ, ಹೆಚ್. ಅಣ್ಣಪ್ಪ ಸ್ವಾಮಿ, ಕೊಟ್ರೇಶ್ ಮತ್ತಿತರರು ಪಾಲ್ಗೊಂಡಿದ್ದರು.