ನಾಳೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ, 21ಕ್ಕೆ ಶೋಭಾಯಾತ್ರೆ

ನಾಳೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ, 21ಕ್ಕೆ ಶೋಭಾಯಾತ್ರೆ

ಮಲೇಬೆನ್ನೂರು, ಸೆ. 5- ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ ನಾಡಿದ್ದು ಶನಿವಾರ 3ನೇ ವರ್ಷದ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದೆಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಅಶೋಕ್ ಯರೇಚಿಕ್ಕನಹಳ್ಳಿ ತಿಳಿಸಿದರು.

ಮಹಾಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಿಗ್ಗೆ 10 ಗಂಟೆಗೆ ಮಹಾಗಣಪತಿಯನ್ನು ಕಲ್ಲೇಶ್ವರ ದೇವಸ್ಥಾನದ ಬಳಿ ಇರುವ ಶಿಲ್ಪಿ ರಾಮಾಚಾರಿ ಅವರ ಮನೆಯಿಂದ ದುರ್ಗಾಂಬಿಕೆ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ನೀರಾವರಿ ಇಲಾಖೆ ಮೈದಾನಕ್ಕೆ ತಂದು ವಿಶೇಷ ಪೂಜೆಯೊಂದಿಗೆ ಪ್ರತಿಷ್ಠಾಪಿಸಲಾಗುವುದೆಂದರು.

ಎಂಟೂವರೆ ಅಡಿ ಎತ್ತರ ಇರುವ ಮಹಾಗಣಪತಿ ಯನ್ನು ಪುರಸಭೆ ಸದಸ್ಯ ಬಿ. ಮಂಜುನಾಥ್ ಅವರು ಕೊಡುಗೆಯಾಗಿ ನೀಡಿದ್ದು, ಮಹಾ ದ್ವಾರಕ್ಕೆ ವೀರ ಸಾವರ್ಕರ್, ವೇದಿಕೆಗೆ ಸನಾತನ ವೇದಿಕೆ, ಮಹಾಮಂಟಪಕ್ಕೆ ಬಾಲಗಂಗಾಧರ ತಿಲಕ್ ಅವರ ಹೆಸರನ್ನು ಇಡಲಾಗಿದೆ.

ನಾಡಿದ್ದು ದಿನಾಂಕ 7 ರಿಂದ ಇದೇ ದಿನಾಂಕ 20ರವರೆಗೆ ಪ್ರತಿದಿನ ಸಂಜೆ 8 ರಿಂದ ಮಲೇಬೆನ್ನೂರಿನ ಚೌಡೇಶ್ವರಿ ಭಜನಾ ಸಂಘ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.

ಇದೇ ದಿನಾಂಕ 14ರಂದು ಪಿಡಬ್ಲ್ಯೂಡಿ ಕ್ರಿಕೆಟರ್ಸ್ ವತಿಯಿಂದ ಮಧ್ಯಾಹ್ನ 2 ರಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಮತ್ತು ಸಾಯಂಕಾಲ 4 ರಿಂದ ಬೆಂಗಳೂರಿನ  ರವಿಕುಮಾರ್ ಅವರಿಂದ ಜಾದೂ ಪ್ರದರ್ಶನ, ಸಂಜೆ 5 ರಿಂದ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದಿನಾಂಕ 21ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಅಂದು ಬೆಳಿಗ್ಗೆ 10 ಕ್ಕೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 10 ರಿಂದ 15 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಅಂದು ವಿವಿಧ ದಾನಿಗಳಿಂದ ಅನ್ನ ಸಂತರ್ಪಣೆಯ ವ್ಯವಸ್ಥೆ ಇರುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳು, ಗೊಂಬೆ ಕುಣಿತ, ಕಹಳೆ ತಂಡಗಳು ಸೇರಿದಂತೆ ಬೆಂಗಳೂರಿನ ಖ್ಯಾತ ತಮಟೆ ಮೇಳ, ನಾಸಿಕ್ ಡೋಲ್, ಹಲಗೆ ಮತ್ತಿತರೆ ಕಲಾ ಮೇಳಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ ಎಂದು ಅಶೋಕ್ ಮಾಹಿತಿ ನೀಡಿದರು. ಹಿಂದೂ ಮಹಾಗಣೇಶೋತ್ಸವದ ಬಗ್ಗೆ ಮಲೇಬೆನ್ನೂರು ಹೋಬಳಿಯ 48 ಹಳ್ಳಿಗಳಿಗೂ ತೆರಳಿ ಗ್ರಾಮಸ್ಥರಿಗೆ ಕರ ಪತ್ರಗಳನ್ನು ನೀಡಿ ಆಮಂತ್ರಿಸಿದ್ದೇವೆ.

ಈ ಉತ್ಸವಕ್ಕೆ ಪಕ್ಷಾತೀತವಾಗಿ ಬೆಂಬಲ, ಸಹಕಾರ ಸಿಕ್ಕಿದ್ದು, ಶೋಭಾಯಾತ್ರೆ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್. ರಾಮಪ್ಪ. ಹೆಚ್.ಎಸ್. ಶಿವಶಂಕರ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಬಿ.ಎಂ. ವಾಗೀಶ್ ಸ್ವಾಮಿ, ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ. ಚಿದಾನಂದಪ್ಪ, ಸಿರಿಗೆರೆ ನಾಗನಗೌಡ್ರು, ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಹನಗವಾಡಿ ಕುಮಾರ್, ನಿಖಿಲ್ ಕೊಂಡಜ್ಜಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆಂದು ಸಮಿತಿಯ ಖಜಾಂಚಿ ಪಿ.ಆರ್. ರಾಜು ತಿಳಿಸಿದರು.

ಪುರಸಭೆ ಸದಸ್ಯರಾದ ಕೆ.ಜಿ. ಲೋಕೇಶ್, ಭೋವಿ ಶಿವು, ಚಿಟ್ಟಕ್ಕಿ ನಾಗರಾಜ್, ಎಕ್ಕೆಗೊಂದಿ ಕರಿಯಪ್ಪ, ಸುಬ್ಬಿ ರಾಜಪ್ಪ, ಎ.ಕೆ. ಲೋಕೇಶ್, ಎ.ಕೆ. ನಾಗರಾಜ್, ಜಿಗಳಿ ಹನುಮಗೌಡ,  ಗೌಡ್ರ ನಿವಾಸ್, ಮೇದಾರ್ ರವಿ, ದೊರೆ, ಧೀರಜ್, ಸಂಜು, ಚಂದ್ರು, ಮಂಜು ಕಡೇಮನಿ, ದೇವರಾಜ್, ಹನುಮೇಶಿ, ಎ.ಕೆ. ಕಿರಣ್, ಸುನೀಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!