ಹಿರಿಯರ ಮಾರ್ಗದರ್ಶನದಿಂದ ಸದೃಢ ದೇಶ

ಹಿರಿಯರ ಮಾರ್ಗದರ್ಶನದಿಂದ ಸದೃಢ ದೇಶ

ಹಿರಿಯ ನಾಗರಿಕರ ಕ್ರೀಡಾಕೂಟ ಉದ್ಘಾಟಿಸಿದ ನ್ಯಾ.ಮಹಾವೀರ ಮ. ಕರೆಣ್ಣನವರ್

ದಾವಣಗೆರೆ, ಸೆ.8- ಯುವಕರು, ಹಿರಿಯರನ್ನು ಕಡೆಗಣಿಸದೇ ಅವರ ಮಾರ್ಗದರ್ಶನ ಪಡೆದು ಸದೃಢ ದೇಶ ಹಾಗೂ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣನವರ್ ತಿಳಿಸಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಎಂಸಿಸಿ `ಬಿ’ ಬ್ಲಾಕ್‌ನ ಬಾಪೂಜಿ ಶಾಲೆಯ ಮೈದಾನದಲ್ಲಿ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ `ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ’ಯ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ನಮ್ಮ ಮನೆಯ ಹಿರಿಯರು ಸೇರಿದಂತೆ ಸಮಾಜದಲ್ಲಿನ ಎಲ್ಲ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು ಮತ್ತು ಅವರ ಬಗ್ಗೆ ಅವಹೇಳನಕಾರಿ, ನಿಷ್ಕಾಳಜಿ ಹಾಗೂ ನಿರ್ಲಕ್ಷ್ಯ ಭಾವದಿಂದ ಕಾಣಬಾರದು ಎಂದು ಹೇಳಿದರು.

ವೃದ್ಧರ ಅನುಕೂಲ ಹಾಗೂ ಸುರಕ್ಷತೆಗಾಗಿ ಹಿರಿಯ ನಾಗರಿಕರ ಸಹಾಯ ಯೋಜನೆ ಮತ್ತು ರಕ್ಷಣಾ ಕಾಯ್ದೆಯಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನ್ಯಾಯಾಲಯ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು. ಸರ್ಕಾರವು ಹಿರಿಯ ನಾಗರಿಕರ ಹಿತ ಕಾಪಾಡುವ ದೃಷ್ಟಿಯಿಂದ ವೃದ್ಧಾಪ್ಯ ವೇತನ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಮಾನಸಿಕ ಹಾಗೂ ಬೌದ್ಧಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ನಾಗರಿಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಿವೃತ್ತ ಪೊಲೀಸ್‌ ಅಧಿಕಾರಿ ರವಿ ನಾರಾಯಣ ಮಾತನಾಡಿ, ಸಮಾಜ ಸೇವೆಗೈದ ಅನೇಕ ಹಿರಿಯ ನಾಗರಿಕರಿಗೆ ಸಿಗುವ ಅಲ್ಪ ಸಂಭಾವನೆಯಲ್ಲಿ ಈ ದಿನಮಾನಗಳಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರವು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.  ರೈಲ್ವೆ ಇಲಾಖೆಯಲ್ಲಿ ಈ ಮೊದಲು ಹಿರಿಯ ನಾಗರಿಕರಿಗಾಗಿ ಶೇ.30 ಸೌಲಭ್ಯಗಳಿದ್ದವು. ಕೊರೊನಾ ನೆಪದಲ್ಲಿ ಇದನ್ನು ಕಡಿತಗೊಳಿಸಿದ್ದಾರೆ ಎಂದು ದೂರಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಹಿರಿಯರನ್ನು ಗೌರವದಿಂದ ಕಾಣುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.  ಸಮಾಜದಲ್ಲಿನ ಎಲ್ಲ ಹಿರಿಯ ನಾಗರಿಕರು ಭ್ರಷ್ಟಾಚಾರ, ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನಿಲ್ಲಬೇಕು ಎಂದು ಹೇಳಿದರು.

ಈ ವೇಳೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ.ಕೆ.ಕೆ ಪ್ರಕಾಶ್, ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಎಸ್ ಗುರುಮೂರ್ತಿ, ಎನ್ ಮಹೇಶ್ವರಪ್ಪ ಮತ್ತಿತರರಿದ್ದರು.

error: Content is protected !!