ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಆದೇಶಕ್ಕೆ ವಿರೋಧ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಆದೇಶಕ್ಕೆ ವಿರೋಧ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣದ ಪ್ರತಿಭಟನೆ

ದಾವಣಗೆರೆ, ಸೆ. 4- ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯ ಆದೇಶವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಯಿಂದ ಮೆರವಣಿಗೆ ಹೊರಟು, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಕಾರ್ಡ್ ಜೋಡಣೆಯ ಆದೇಶ ಪ್ರತಿಯನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.

ರೈತರು ಕೇವಲ ತಮ್ಮ ಮನೆಗಳಿಗೆ ಬೆಳೆ ಬೆಳೆಯುವುದಿಲ್ಲ. ಇಡೀ ಸಮಾಜಕ್ಕೆ ಅನ್ನ ಹಾಕುವ ಅನ್ನದಾತರ ವಿರೋಧಿ ಕ್ರಮವನ್ನು ಸರ್ಕಾರ ಅನುಸರಿಸುತ್ತಿರುವುದು ಸರಿಯಲ್ಲ. ಮೀಟರ್ ಅಳವಡಿಕೆ ಶುಲ್ಕ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ವಿದ್ಯುತ್ ವಲಯವನ್ನೇ ಖಾಸಗೀಕರಣ ಮಾಡಲು ಹೊರಟಿದೆ. ಈ ಕೂಡಲೇ ಆಧಾರ್ ಜೋಡಣೆ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಸಹ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿನ ರೈತ ವಿರೋಧಿ ಕಾನೂನು ರದ್ದುಪಡಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಈಗ ಅವರೇ ರೈತ ವಿರೋಧಿ ನೀತಿ ಜಾರಿಗೆ ತರುತ್ತಿದ್ದಾರೆ. ವಿದ್ಯುತ್ ಉತ್ಪಾದಕ ಖಾಸಗಿ ಕಂಪನಿಗಳ ಗುಲಾಮಗಿರಿಯ ಪ್ರತೀಕವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆಗೆ ಆದೇಶ ನೀಡಿದ್ದಾರೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಶೇ. 90 ರಷ್ಟು ಆಧಾರ್ ಜೋಡಣೆ ಮಾಡಲಾಗಿದೆ. ಕೂಡಲೇ ಆದೇಶವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಅಕ್ರಮ-ಸಕ್ರಮ ಯೋಜನೆಯಡಿ ದಾವಣಗೆರೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೆಸ್ಕಾಂ ಅಧಿಕಾರಿಗಳು ಕೆಲ ಗುತ್ತಿಗೆದಾರರ ಮೂಲಕ ಹಣ ಪಡೆದು, ಯಾವುದೇ ಸೌಕರ್ಯ ನೀಡದೇ ಇರುವುದು ತಿಳಿದುಬಂದಿದ್ದು, ಅಕ್ರಮ-ಸಕ್ರಮ ಯೋಜನೆಯಡಿ ರೈತರಿಂದ ಹಣ ವಸೂಲಿ ಮಾಡಬಾರದು. ಅಕ್ರಮ-ಸಕ್ರಮ ಯೋಜನೆಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ಕೃಷಿ ಕೊಳವೆ ಬಾವಿಗಳಿಗೆ ಬೇಕಾದ ವಿದ್ಯುತ್ ವೈರ್, ಟ್ರಾನ್ಸ್‌ಫಾರ್ಮರ್, ಕಂಬಗಳನ್ನು ರೈತರೇ ಖರೀದಿ ಮಾಡಬೇಕೆಂದು ಸರ್ಕಾರ ಆದೇಶ ಮಾಡಿರುವುದು ರೈತ ವಿರೋಧಿ ನೀತಿಯಾಗಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಹಿಂದಿನಂತೆ ಸರ್ಕಾರವೇ ರೈತರಿಗೆ ಅಗತ್ಯವಾದ ವೈರ್, ಟ್ರಾನ್ಸ್‌ಫಾರ್ಮರ್, ಕಂಬಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಬರುವಂತಹ ಬೆಸ್ಕಾಂ ಸಿಬ್ಬಂದಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕುವ ಹೋರಾಟವನ್ನು ದಾವಣಗೆರೆ ಜಿಲ್ಲೆಯಿಂದಲೇ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಮಹಾದೇವಿ ಎಸ್. ಬೇವಿನಾಳ ಮಠ್, ಶತಕೋಟಿ ಬಸಪ್ಪ, ಎನ್. ಬಸವರಾಜ್ ದಾಗಿನಕಟ್ಟೆ, ಹುಚ್ಚವ್ವನಹಳ್ಳಿ ಗಣೇಶ್, ರಂಗನಾಥ್ ಬಸಾಪುರ, ವೀರನಗೌಡ ಪಾಟೀಲ್, ಸಂತೋಷ್ ದಾಗಿನಕಟ್ಟೆ, ಚೇತನ್‌ ಕುಮಾರ್, ಬಾಬುರಾವ್, ಕಾಳೇಶ್, ದಾಗಿನಕಟ್ಟೆ ಯೋಗೇಶ್, ನಿರಂಜನಗೌಡ, ವಿಶ್ವನಾಥ್ ಮಂಡ್ಲೂರು ಮತ್ತಿತರರು ಭಾಗವಹಿಸಿದ್ದರು. 

error: Content is protected !!