ದಾವಣಗೆರೆ, ಸೆ.4- ಫುಡ್ ಕೋರ್ಟ್ನಲ್ಲಿ ಸಾರ್ವಜನಿಕರಿಗೆ ನೀಡುವ ಆಹಾರ ಸಂಪೂರ್ಣ ಉತ್ತಮ ಗುಣಮಟ್ಟದ್ದಾಗಿರಬೇಕು. ಶುದ್ಧತೆ ಜೊತೆ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ನಗರದ ಡಾ. ಎಂ.ಸಿ.ಮೋದಿ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆಯ ಪಾದಚಾರಿ ವ್ಯಾಪಾರಿಗಳ ನಗರ ಘಟಕದಿಂದ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫುಡ್ ಕೋರ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ಜಾಗದಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳು ಆಗಬೇಕಾಗಿದೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡ ಬೇಕು. ಮಳೆ ನೀರು ಬಾರದಂತೆ ಫುಡ್ ಕೋರ್ಟಿಗೆ ಶೆಲ್ಟರ್ ಹೊದಿಕೆ ಮಾಡಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಇದಲ್ಲದೇ ಗುತ್ತಿಗೆದಾರ ಉತ್ತಮ ಕೆಲಸ ಮಾಡಬೇಕು. ನಾನು ಯಾವುದೇ ಕಾರಣಕ್ಕೂ ರಾಜೀ ಆಗುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ಈಗಾಗಲೇ ಫುಡ್ ಕೋರ್ಟ್ ಮಾಡಲು ಎಲ್ಲಾ ರೀತಿಯ ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರು ತಕ್ಷಣ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ನಗರದಲ್ಲಿ ಒಟ್ಟು ನಾಲ್ಕು ಭಾಗದಲ್ಲಿ ಡಾ. ಎಂ.ಸಿ. ಮೋದಿ ವೃತ್ತ, ಎಸ್ ಓ ಜಿ ಕಾಲೋನಿ, ಜಯದೇವ ವೃತ್ತ. ಈ ಭಾಗಗಳಲ್ಲಿ 80 ರಷ್ಟು ಕೆಲಸ ಕಾರ್ಯ ಮುಗಿದಿದೆ. ಗಡಿಯಾರ ಕಂಬದ ಹತ್ತಿರ ಕೆಲಸ ಪ್ರಾರಂಭ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಗಡಿಗುಡಾಳು ಮಂಜುನಾಥ್ ಮಾತನಾಡಿ, ಒಳ್ಳೆಯ ಕಾರ್ಯ ಮಾಡಿದಾಗ ಸಾರ್ವಜನಿಕರು ಪ್ರಶಂಸೆ ನೀಡಬೇಕು. ಈ ಭಾಗದಲ್ಲಿ ಅಭಿವೃದ್ಧಿ ಕೆಲಸ ಸರಾಗವಾಗಿ ನಡೆಯುತ್ತಿದೆ. ಸಾರ್ವಜನಿಕರು ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚಿನದಾಗಿ ಕೆಲಸ ನಿರ್ವಹಿ ಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಫುಡ್ ಕೋರ್ಟಿನ ಉಳಿದ ಎಲ್ಲಾ ಕೆಲಸಗಳನ್ನು ಶೀಘ್ರದಲ್ಲಿ ಪೂರೈಸುವುದಾಗಿ ತಿಳಿಸಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಪಾಮೇನಹಳ್ಳಿ ನಾಗರಾಜ್, ಉಮೇಶ್, ಚಮನ್ ಸಾಬ್, ಎ.ನಾಗರಾಜ್ ಮಾತನಾಡಿದರು. ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಾದಚಾರಿ ವ್ಯಾಪಾರಿಗಳ ಘಟಕದ ಅಧ್ಯಕ್ಷ ಸುರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಶಾಂತಮ್ಮ, ನಾಗಮ್ಮ, ಮಂಜುಳ ಗಣೇಶ್, ಉದ್ದಿಮೆದಾರರ ಘಟಕ ಉಪಾಧ್ಯಕ್ಷ ಓ.ಮಹೇಶ್ವರಪ್ಪ, ಬಿ.ಎಸ್.ಸಂತೋಷ್, ರಾಜಣ್ಣ, ರವಿಕುಮಾರ್, ಜಬಿವುಲ್ಲಾ, ಆಟೋ ರಫೀಕ್, ಅಯೂಬ್, ಅನ್ವರ್, ದಾದಾಪೀರ್, ಎಂ.ಡಿ.ರಫೀಕ್, ದಾದೇಶ್, ಧೀರೇಂದ್ರ, ರಾಘವೇಂದ್ರ, ಚಂದ್ರು, ತುಳಸಿರಾಮ್, ಸಂಜು, ಕರಿಬಸಪ್ಪ, ರಮೇಶ್, ರಾಕಿ, ಅಕ್ಷಯ್, ಹನುಮಂತಪ್ಪ, ಬಸವರಾಜ್, ದಾದಾಪೀರ್, ನಾಗರಾಜ್, ರವಿ, ಕಾಲುಲಾಲ್ ಚೌದ್ರಿ, ಮಂಜುನಾಥ್, ನಾಗಪ್ಪ ಇತರರು ಇದ್ದರು.