ಜಗಳೂರು ಪಂ.ಪಂ.ಅಧ್ಯಕ್ಷರಾಗಿ ನವೀನ್ ಕುಮಾರ್
ಜಗಳೂರು, ಸೆ.4- ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿತ್ತಾದರೂ ಬಿಜೆಪಿ ತನ್ನ ಗದ್ದುಗೆ ಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಟ್ಟಣ ಪಂಚಾಯ್ತಿಯಲ್ಲಿ 11 ಜನರ ನಿಚ್ಚಳ ಬಹುಮತ ಹೊಂದಿರುವ ಬಿಜೆಪಿಗೆ ಎರಡನೇ ಬಾರಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ತೀವ್ರ ಪೈಪೋಟಿ ಉಂಟಾಗಿತ್ತು. ಕೆಲವು ಬಿಜೆಪಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ಅನುಮಾನಗಳು ವ್ಯಾಪಕವಾಗಿ ಹರಡಿದ್ದವು.
ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ಅವರು ಎಲ್ಲಾ ಸದಸ್ಯರ ಮನವೊಲಿಸುವ ಮೂಲಕ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಿಗದಿತ ಸಮಯದ ಒಳಗಾಗಿ 15ನೇ ವಾರ್ಡಿನ ಕೆಎಸ್ ನವೀನ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಎರಡನೇ ವಾರ್ಡಿನ ಲೋಕಮ್ಮ ಓಬಳೇಶ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಪರಿಶೀಲನೆ ನಂತರ ಚುನಾವಣೆ ಅಧಿಕಾರಿಗಳಾದ ತಹಸಿಲ್ದಾರ್ ಸೈಯದ್ ಕಲೀಮ್ ಉಲ್ಲಾ ಅಧ್ಯಕ್ಷರಾಗಿ ಕೆ.ಎಸ್. ನವೀನ್ ಕುಮಾರ್ ಉಪಾಧ್ಯಕ್ಷರಾಗಿ ಲೋಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ 11 ಸದಸ್ಯರು ಮತ್ತು ಜೆಡಿಎಸ್ ಇಬ್ಬರು ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ನಾಲ್ಕು ಜನ ಸದಸ್ಯರು ಗೈರು ಹಾಜರಾಗಿದ್ದರು.
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಎಚ್.ಪಿ. ರಾಜೇಶ್ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೆಬಾಳು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಜೆಡಿಎಸ್ ನ ಕೆ.ಬಿ. ಕಲ್ಲೇರುದ್ರೇಶ್ ಮುಂತಾದವರು ಅಭಿನಂದಿಸಿದರು.