ನಗರಸಭೆ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಶಾಸಕ ಬಿ.ಪಿ. ಹರೀಶ್
ಹರಿಹರ, ಸೆ. 2- ನಗರದ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಕೋರಿ ನಗರಸಭೆ ಸದಸ್ಯರೆಲ್ಲಾ ಮುಖ್ಯ ಮಂತ್ರಿಗಳ ಬಳಿಗೆ ನಿಯೋಗ ಹೋಗೋಣ ಎಂದು ಶಾಸಕ ಬಿ.ಪಿ. ಹರೀಶ್ ಸಲಹೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ನೂತನ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು.
ನಗರಸಭೆ ವ್ಯವಸ್ಥೆ ಹದಗೆಟ್ಟು ಹೋಗಿದೆ. ಸಾರ್ವಜನಿಕರು ನಗರಸಭೆ ಆಡಳಿತ ವ್ಯವಸ್ಥೆ ನೋಡಿ ಬಹಳಷ್ಟು ಬೇಸರವಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವುದರಿಂದ, ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಅಧೋಗತಿಯತ್ತ ಸಾಗಿದೆ.
ಹರಿಹರದಿಂದ ಹಲವಾರು ಕೆರೆಗಳಿಗೆ ನೀರು ಸರಬರಾಜಾಗುತ್ತದೆ. ಆದರೆ, ಇಲ್ಲಿನ ಜನತೆಗೆ ಬೇಸಿಗೆ ಕಾಲದಲ್ಲಿ ಕುಡಿಯಲು ನೀರು ಇಲ್ಲದೇ ಪರದಾಡುವಂತಾಗಿದೆ. ಮೊದಲು ಇಲ್ಲಿನ ಜನರಿಗೆ ನೀರು ಕೊಟ್ಟು ನಂತರ ಮುಂದೆ ಜಗಳೂರು ಸೇರಿದಂತೆ ಇತರೆ ಕೆರೆಗಳಿಗೆ ಸರಬರಾಜು ಆಗುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೋರಾಟ ಮಾಡಬೇಕಿದೆ. ಕೆರೆಗಳಿಗೆ ನೀರು ಸರಬರಾಜು ಆಗುವ ಜಾಕ್‌ವೆಲ್ ಹತ್ತಿರ ಪ್ರತ್ಯೇಕವಾದ ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಂಡು ಆ ಮೂಲಕ ನಗರದ ಜನತೆಗೆ ನೀರು ಸರಬರಾಜು ಮಾಡಬೇಕಿದೆ ಎಂದು ಹೇಳಿದರು.
ನಗರದಲ್ಲಿ ಹರಿಹರ – ದಾವಣಗೆರೆ ವಾಟರ್ ಹೌಸ್ ಬಳಿ ಇರುವ ಸ್ಥಳದಲ್ಲಿ ನೀರು ಶೇಖರಣಾ ಘಟಕದ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ನೀಲ ನಕ್ಷೆಯನ್ನು ತಯಾರಿಸಿದ್ದು, ಅದು ಸಮಂಜಸವಾದ ಸ್ಥಳವಲ್ಲ ಎಂದು ತಜ್ಞರು ನನಗೆ ವರದಿ ನೀಡಿದ್ದಾರೆ. ನಗರಸಭೆಯ ಸರ್ವ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಿ.ಎಂ ಬಳಿ ನಿಯೋಗ ಹೋಗಿ ಕುಡಿಯುವ ನೀರಿನ ಶೇಖರಣಾ ಘಟಕ ಸ್ಥಾಪನೆ ಸೇರಿದಂತೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಬಗೆಯ ಸಹಕಾರವನ್ನು ಕೇಳೋಣ ಎಂದರು.
ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಶಾಸಕರು ಹೇಳಿರುವ ವಿಚಾರಗಳನ್ನು ಈಗಾಗಲೇ ಮುಖ್ಯಮಂತ್ರಿಗಳವರ ಗಮನಕ್ಕೆ ತರಲಾಗಿದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಅವುಗಳನ್ನು ಕಾರ್ಯರೂಪಕ್ಕೆ ತರಲು ವಿಳಂಬವಾಗಿದೆ. ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಅವರು ನಿನ್ನೆ ನಗರಕ್ಕೆ ಆಗಮಿಸಿದಾಗ ಒಂದು ಕೊಠಡಿ ವ್ಯವಸ್ಥೆ ಮಾಡಲು ಮತ್ತು ವಿಶಾಲವಾದ ಜಮೀನನ್ನು ಖರೀದಿಸಿ ಬಡವರಿಗೆ ನಿವೇಶನ ಹಂಚಿಕೆಯ ವಿಚಾರಗಳನ್ನು ಹೇಳಿದ್ದಾರೆ. ಜಮೀನನ್ನು ಖರೀದಿಸಲು ಮುಂದಾಗುವುದರ ಜೊತೆಗೆ ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸವನ್ನು ಪೌರಾಯುಕ್ತರು ಮಾಡುವಂತೆ ಹೇಳಿದರು.
ಈ ವೇಳೆ ನಗರಸಭೆ ಹಿರಿಯ ಸದಸ್ಯ ಎ. ವಾಮನಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ನೂತನ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮತ್ತು ಇತರರು ಹಾಜರಿದ್ದರು.