ಗುಡ್ಡದಹಟ್ಟಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಕ್ಕೆ ಚಾಲನೆ ನೀಡಿದ ಸಂಸದೆ ಡಾ. ಪ್ರಭಾ
ಮಾಯಕೊಂಡ, ಸೆ.2- ರಸ್ತೆ, ಆಸ್ಪತ್ರೆ, ಅಂಗನವಾಡಿ ಅಭಿವೃದ್ಧಿಪಡಿಸಿ, ಆರೋಗ್ಯಕರ ಸಮಾಜ ನಿರ್ಮಿಸಲು, ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಂಸತ್ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದರು.
ಸಮೀಪದ ನರಗನಹಳ್ಳಿಯ ಗುಡ್ಡದಹಟ್ಟಿ ಗ್ರಾಮಕ್ಕೆ ಸೋಮವಾರ ಬಸ್ ಸಂಚಾರ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಚುನಾವಣಾ ಪ್ರಚಾರದಲ್ಲಿಯೇ ರಸ್ತೆ ಬೇಡಿಕೆ ಗಮನಿಸಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕೆ ನರಗನಹಳ್ಳಿಗೆ ನಡೆದು ಹೋಗುವುದು ನೋವು ತಂದಿದೆ. ದಾವಣಗೆರೆಲ್ಲಿಯೇ ಕೂರದೇ, ಹಳ್ಳಿಗಳ ಭೇಟಿ ಮಾಡುವೆ. ಆಂಗನವಾಡಿ, ಆಸ್ಪತ್ರೆ ಅಭಿವೃದ್ಧಿಪಡಿಸಿದರೆ ಸಮುದಾಯದ ಆರೋಗ್ಯ ಕಾಪಾಡಬಹುದು. ಹಳ್ಳಿಗಳ, ಬಡವರ ಉದ್ದಾರಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಪ್ರಾಥಮಿಕ ಶಾಲೆ ಇರುವ ಊರಿನಿಂದ ಕಾಲೇಜು, ಹೈಸ್ಕೂಲ್ ಇರುವ ಕಡೆಗೆ ಸಾರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಹಳೇ ವಿದ್ಯಾರ್ಥಿಗಳು ಸಂಘ ರಚಿಸಿಕೊಂಡು ತಾವು ಓದಿದ ಶಾಲೆಗಳ ಉದ್ದಾರಕ್ಕೆ ಶ್ರಮಿಸಬೇಕು. ಸರ್ಕಾರದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವಿದ್ದರೂ ಸೌಕರ್ಯದ ಕೊರತೆಯಿದೆ. ಅಭಿವೃದ್ಧಿಗಾಗಿ ಸರ್ಕಾರದ ಜತೆ ನಾಗರಿಕರು, ಯುವಕರು ಎಲ್ಲರೂ ಕೈಜೋಡಿಸಬೇಕು, ಎಂದು ಕರೆ ನೀಡಿದರು.
ಸಂಭ್ರಮ….ಸಮಸ್ಯೆಗಳ ಸರಮಾಲೆ
ಗ್ರಾಮಸ್ಥರು ಅಧಿಕಾರಿಗಳ ಜನಪ್ರತಿನಿಧಿಗಳ ಆಗಮನದಿಂದ, ಬಹುದಿನದ ಬಸ್ ಸಂಚಾರದ ಬೇಡಿಕೆ ಈಡೇರಿದ್ದರಿಂದ ಸಂಭ್ರಮಿಸಿದರು. ಊರನ್ನು ತಳಿರು ತೋರಣದಿಂದ ಸಿಂಗರಿಸಿದ್ದರು. ಊರಿಗೆ ಬಂದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಸಿಇಒ ಇಟ್ನಾಳ್ ಎದುರು ನಾಮುಂದು, ತಾಮುಂದು ಎಂದು ಸಮಸ್ಯೆ ವಿವರಿಸಲು ಮುಂದಾದರು.
ನರಗನಹಳ್ಳಿಗೆ ಪಿಎಚ್ಸಿ ಮಂಜೂರು ಮಾಡಿ, ಗೊಲ್ಲರಹಟ್ಟಿ ಶಾಲೆಯ ಛಾವಣಿ ಕುಸಿದಿದೆ, ಪಡಿತರ ಸಿಗೊಲ್ಲ, ಶಾಲೆ ಬೀಳುವಂತಿದೆ, ಚರಂಡಿ ಇಲ್ಲ, ಮನೆಗೆ ನೀರು ನುಗ್ಗುತ್ತೆ, ಬಂದು ನೋಡಿ ಎಂದು ಕೆಲವರು ಪದೇ ಪದೇ ದುಂಬಾಲುಬಿದ್ದರು. ವೇದಿಕೆ ಮುಂದೂ ಕಿರಿಕಿರಿ ಮಾಡಿದರು. ಕೆಲವರು ಗೃಹ ಲಕ್ಷ್ಮೀ ಹಣನೇ ಬಂದಿಲ್ಲ, ಆಶ್ರಯ ಮನೆ ಕೊಟ್ಟಿಲ್ಲ ಎಂದೂ ದೂರಿದರು.
ಸಂಸತ್ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ, ಶಾಸಕ ಬಸವಂತಪ್ಪ, ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿ, ಬಸ್ಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಬಸ್ಸಿನಲ್ಲಿ ಕೂತು ಪ್ರಯಾಣಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಮಸ್ಯೆ ಆಲಿಸಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಬಸ್ ಇಲ್ಲದೇ ಪರದಾಡುತ್ತಿದ್ದ ಗುಡ್ಡದಹಟ್ಟಿ ಗ್ರಾಮಸ್ಥರ ಸಂಕಷ್ಟ ಬಗೆಹರಿದಿದೆ. ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಪ್ರಯಾಣ ನೀಡಿದೆ. ಈ ಊರಿನ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಶಾಲೆಗೆ ಕಾಂಪೌಂಡ್, ದೇವಸ್ಥಾನ ನಿರ್ಮಾಣ ಮಾಡಲಾಗುತ್ತದೆ. ಸಿರಿಗೆರೆ ಶ್ರೀಗಳಿಗೆ ನೀಡಿದ ಮಾತಿನಂತೆ 8 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ಮಾಯಕೊಂಡ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ರಸ್ತೆ ಹಾಳಾಗಿದ್ದು, ಶೀಘ್ರ ಸರಿಪಡಿಸುತ್ತೇನೆ. ಪಡಿತರ ವಿತರಣೆ, ಮತಗಟ್ಟೆ ವ್ಯವಸ್ಥೆ ಮಾಡಿಸುತ್ತೇವೆ. ಮಾಯಕೊಂಡ ಬುಳ್ಳಾಪುರದ ಕೆರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಹಿಂದಿನ ಸರ್ಕಾರದಲ್ಲಿ ನಿರ್ಮಿಸಿದ 22 ಕೆರೆ ಏತ ನೀರಾವರಿ ಯೋಜನೆ ಕಳಪೆಯಾಗಿದೆ. ಹೊಸ ಪೈಪ್ ಲೈನ್ ಮಾಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಗ್ರಾಮಸ್ಥರ ಕೋರಿಕೆ ಗಮನಿಸಲಾಗಿದೆ. ಬೇಡಿಕೆಗೆ ಒತ್ತಯಿಸಿ ದಂತೆ ಊರನ್ನೂ ಸ್ವಚ್ಛವಿರಿಸಬೇಕು. ದೇಗುಲದಂತೆ ಶಾಲೆಗಳೂ ಸ್ವಚ್ಚವಾಗಿರಬೇಕು. ಸ್ವಚ್ಛತೆ ಗ್ರಾಮಸ್ಥರ ಸ್ವಂತ ಜವಾಬ್ದಾರಿಯಾಗಬೇಕು ಎಂದರು.
ಕೆಎಸ್ಆರ್ಟಿಸಿ ಜಿಲ್ಲಾ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳು, ಡಿಡಿಪಿಐ ಕೊಟ್ರೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ನಾಗರಾಜ್, ಉಪಾಧ್ಯಕ್ಷೆ ಆಶಾ ಸಂತೋಷ್, ಮಾಜಿ ಉಪಾಧ್ಯಕ್ಷ ಚಂದ್ರಶೇಖರ್, ತಹಶೀಲ್ದಾರ್ ಅಶ್ವಥ, ಇ. ಒ.ರಾಮಬೋವಿ, ಉಪ ತಹಶಿಲ್ದಾರ ರಾಮಸ್ವಾಮಿ, ಪಿಎಸ್ ಐ ಅಜ್ಜಪ್ಪ, ಮುಖಂಡರಾದ ಕುಮಾರ್, ದೇವೆಂದ್ರಪ್ಪ, ಹನುಮಂತಪ್ಪ, ಸಿದ್ದೇಶ್, ಮಾಯಕೊಂಡ ಹನುಮಂತಪ್ಪ, ರುದ್ರೇಶ್ ಮತ್ತಿತರರಿದ್ದರು.
ಮಲ್ಲೇಶ್ ಸ್ವಾಗತಿಸಿದರು. ಶಿಕ್ಷಕ ಉಮಾಪತಿ ನಿರೂಪಿಸಿದರು.