ಡಿಸಿ ಗಂಗಾಧರ ಸ್ವಾಮಿ
ಜಗಳೂರು, ಸೆ. 2 – ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ವಿಸ್ತರಣೆಗೆ ಸರ್ಕಾರದ ನಿಯಮಗಳಡಿ ಅಗಲೀಕರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ರಸ್ತೆ ವಿಸ್ತರಣೆ ಕುರಿತು ಶಾಸಕ ಬಿ.ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯ ನಂತರ ಅವರು ಮಾತನಾಡಿದರು.
ಪಟ್ಟಣದ ಅಭಿವೃದ್ದಿಗೆ ಜಾರಿಗೊಂಡಿರುವ ಸ್ಥಳೀಯ ಅಭಿವೃದ್ದಿ ಪ್ರಾಧಿಕಾರಗಳ ಮಾಸ್ಟರ್ ಪ್ಲಾನ್ ಪ್ರಕಾರ ಮಹಾ ಯೋಜನೆ 2008ರ ನೋಟಿಫಿಕೇಶನ್ ಅಡಿಯಲ್ಲಿ ರಾಜ್ಯ ಹೆದ್ದಾರಿ ಮಧ್ಯ ಭಾಗದಿಂದ ಎರಡೂ ಬದಿಯಲ್ಲಿ 21 ಮೀಟರ್ ಅಗಲ ವಿಸ್ತರಣೆ ಕಡ್ಡಾಯವಾಗಿದ್ದು, ಯಾವುದೇ ರಾಜಿ ಇಲ್ಲಾ, ರಿಯಾಯ್ತಿ ಇಲ್ಲಾ ಎಂದು ಹೇಳಿದರು.
ನ್ಯಾಷನಲ್ ರೋಡ್ ಅಫೆಕ್ಷನ್ ಬಾಡಿ ಅನ್ವಯ ಚಳ್ಳಕೆರೆ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ 1.3 ಕಿ.ಮೀ ಉದ್ದದ ರಸ್ತೆ ಅಗಲೀಕರಣದ ಮಾರ್ಕಿಂಗ್ ಮಾಡಲಾಗಿದ್ದು, ಯಾವುದೇ ಮಾರ್ಜಿನ್ ಇಲ್ಲ. ಪ್ರಾಥಮಿಕ ಆಕ್ಷೇಪಣಾ ಸಭೆ ಕರೆಯಲಾಗಿತ್ತು.ಇದೀಗ ಸ್ಥಳೀಯ ಹಿರಿಯರಿಂದ ಹಾಗೂ ಶಾಸಕರಿಂದ ಸಲಹೆ ಪಡೆಯಲಾಗಿದೆ. ರಾಜಕಾಲುವೆ, ಕೆರೆ ಪಕ್ಕ 30 ಅಡಿ ಅಂತರದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡುವಂತಿಲ್ಲ. ಸರ್ಕಾರದ ನಿಯಮಾನುಸಾರ ಪರಿಶೀಲನೆ ನಡೆಸಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದರು.
ಕೋರ್ಟ್ ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಬೇಕಿದೆ. ಪಟ್ಟಣದಲ್ಲಿ ಈ ರಸ್ತೆಯ ಲ್ಲಿ ಇರುವ ವಿದ್ಯುತ್ ಕಂಬಗಳು ಸ್ಥಳಾಂತರಿ ಸಲು, ಟೆಲಿಫೋನ್, ಕುಡಿಯುವ ನೀರಿನ ಪೈಪ್ ಲೈನ್ ಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಅನುಸರಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಇತ್ತೀಚೆಗೆ ನಡೆದ ಭೀಕರ ಅಪಘಾತ, ಅಮಾಯಕರ ಸಾವು ನೋವುಗಳು ಸಾರ್ವಜನಿಕರನ್ನು ಆಕ್ರೋಶ ಭರಿತರನ್ನಾಗಿಸಿವೆ.ರಸ್ತೆ ಅಗಲೀಕರಣಕ್ಕೆ ನನ್ನ ಸಹಮತವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅತಿಕ್ರಮಣಗೊಳಿಸಿದ ಭೂಕಳ್ಳರು, ತೆರಿಗೆ ವಂಚಿತರ ವಿರುದ್ದ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಕೀಲರ ಸಂಘ ಮನವಿ: ದಶಕಗಳ ಕಾಲ ಒತ್ತುವರಿ ಜಾಗದಲ್ಲಿ ಸಾಕಷ್ಟು ವ್ಯವಹಾರಿಕ ಲಾಭಿ ನಡೆಸುತ್ತಿರುವವರು ರಸ್ತೆ ವಿಸ್ತರಣೆ ವಿಷಯವಾಗಿ ತಡೆಯಾಜ್ಞೆಗೆ ಮುಂದಾಗಿದ್ದಾರೆ. ಇದು ಸರಿಯಲ್ಲಾ .ಸಾರ್ವಜನಿಕರ ಅನುಕೂಲಕ್ಕೆ ರಸ್ತೆ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದ ಪಧಾದಿಕಾರಿಗಳು ಮನವಿಮಾಡಿದರು.
ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ಸಾರ್ವಜನಿಕರು ಸಂಘಟನೆಗಳು: ರಸ್ತೆ ವಿಸ್ತರಣೆಗೆ ಶೀಘ್ರ ಕ್ರಮಕೈಗೊಳ್ಳಲು ಒತ್ತಾಯಿಸಿ ಕರವೇ, ರೈತಸಂಘಗಳು, ಸಾರ್ವಜನಿಕರು ಒಂದೆಡೆ ಜಮಾಯಿಸಿದರೆ. ರಸ್ತೆ ಬದಿಯ ಬಡ ನಿವಾಸಿಗಳು ಮನೆಗಳನ್ನು ತೆರವುಮಾಡದಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ಅಪರ ಜಿಲ್ಲಾ ರಕ್ಷಣಾಧಿಕಾರಿ ಜಿ.ಮಂಜುನಾಥ್, ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ, ಪಿಡಬ್ಲೂಡಿ ಇ ಇ ನರೇಂದ್ರ ಬಾಬು, ಎಇಇ ನಾಗರಾಜ್, ಜಿ.ಪಂ ಎಇಇ ಶಿವಮೂರ್ತಿ, ಬೆಸ್ಕಾಂ ಎಇಇ ಸುಧಾಮಣಿ, ಪಿಐ ಶ್ರೀನಿವಾಸ್ ರಾವ್, ಮುಖ್ಯಾದಿಕಾರಿ ಲೋಕ್ಯಾ ನಾಯ್ಕ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಬಸವರಾಜ್, ಮುಖಂಡರಾದ ಎಂ.ಡಿ. ಕೀರ್ತಿಕುಮಾರ್, ಕೆ.ಪಿ.ಪಾಲಯ್ಯ, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ ಇದ್ದರು.