ನಗರದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಪ್ರತಿಭಟನೆ : ರಾಜ್ಯಪಾಲರ ನಡೆಗೆ ಆಕ್ರೋಶ
ದಾವಣಗೆರೆ, ಆ.29 – ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ದ ಮುಖಂಡರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ರಾಜ್ಯಪಾಲರು ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿಸಿದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಸಾಂವಿಧಾನಿಕ ರಾಜ್ಯಪಾಲರ ಹುದ್ದೆಯನ್ನು ಕೆಲವಾರು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸಾಂವಿಧಾನಿಕ, ಪ್ರಜಾತಾಂತ್ರಿಕ ಆಶಯಗಳು ಮೂಲೆ ಗುಂಪಾಗುತ್ತಿವೆ. ಹಾಗಾಗಿ ರಾಷ್ಟ್ರಪತಿ ಯವರು ರಾಜ್ಯಪಾಲರ ಹುದ್ದೆಯನ್ನೇ ರದ್ದು ಪಡಿಸಿ, ವಿಧಾನ ಸಭಾ ಮತ್ತು ವಿಧಾನ ಪರಿಷತ್ತು ಅಧ್ಯಕ್ಷರಿಗೆ ರಾಜ್ಯಪಾಲರ ಅಧಿಕಾರ ನೀಡುವಂತಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಆವರಗೆರೆ ವಾಸು, ಆವರಗೆರೆ ಚಂದ್ರು, ಐರಣಿ ಚಂದ್ರು, ಶಿವಕುಮಾರ್ ಡಿ. ಶೆಟ್ಟರ್, ನೇತ್ರಾವತಿ, ಸುರೇಶ್, ಲಕ್ಷ್ಮಣ್, ಸರೋಜ, ಯಲ್ಲಪ್ಪ, ನಾಗೇಂದ್ರಪ್ಪ, ಚಿನ್ನಪ್ಪ, ಗುಂಡಯ್ಯ, ಕೆ.ಹೆಚ್. ಹನುಮಂತಪ್ಪ, ಮೌನಾಚಾರಿ ಎಸ್., ಎನ್.ಟಿ. ತಿಪ್ಪೇಸ್ವಾಮಿ, ನರೇಗಾ ರಂಗನಾಥ್, ಗದಿಗೇಶ್ ಪಾಳೇದ, ಬಸವರಾಜಪ್ಪ, ಎ.ತಿಪ್ಪೇಶಿ ಆವರಗೆರೆ, ಕೃಷ್ಣಪ್ಪ, ಎನ್.ಹೆಚ್. ರಾಮಪ್ಪ, ಚಮನ್ ಸಾಬ್, ಆರ್.ತಿಮ್ಮಕ್ಕ, ಆವರಗೆರೆ ಬಾನಪ್ಪ, ಶಾರದಮ್ಮ, ಸರೋಜಾ ಇತರರು ಇದ್ದರು.