ಅಹಿತಕರ ಘಟನೆ ಸಂಭವಿಸಿದರೆ ಕಾನೂನು ಕ್ರಮ ಖಚಿತ: ಡಿಸಿ
ದಾವಣಗೆರೆ, ಆ.28- ಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ವೇಳೆ ಸಣ್ಣ ಅಹಿತಕರ ಘಟನೆ ನಡೆದರೂ ಜಿಲ್ಲಾಡಳಿತ ಸಹಿಸಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿಯ ತುಂಗ ಭದ್ರಾ ಸಭಾಂಗಣದಲ್ಲಿ ಬುಧವಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ `ನಾಗರಿಕ ಸೌಹಾರ್ದ ಸಭೆ’ಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಸಂಪೂರ್ಣ ಚಲನವಲನವು 250ಕ್ಕೂ ಅಧಿಕ ಸಿಸಿಟಿವಿ ಕಣ್ಗಾವಲಿನಲ್ಲಿದೆ. ಈ ಎರಡೂ ಹಬ್ಬಗಳ ಸುರಕ್ಷತಾ ದೃಷ್ಟಿಯಿಂದ ಇನ್ನೂ ಹೆಚ್ಚಿನ ಸಿಸಿಟಿವಿ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ತಪ್ಪಿತಸ್ಥರು ತಲೆಮರೆಸಿ ಕೊಳ್ಳದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಸೂಚನೆಯಂತೆ ಧ್ವನಿವರ್ಧಕ ಬಳಸಬೇಕು. ಪರಿಸರ ಸ್ನೇಹಿ ಗಣೇಶ ವಿಗ್ರಹ ಬಳಸಬೇಕು. ಪಿಒಪಿ ವಿಗ್ರಹ ಬಳಸದಂತೆ ಎಚ್ಚರಿಕೆ ನೀಡಿದ ಅವರು, ಮಲೇಬೆನ್ನೂರಿನಲ್ಲಿ 21 ಪಿಒಪಿ ಗಣೇಶ ವಿಗ್ರಹ ಜಪ್ತಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಎರಡೂ ಧರ್ಮದವರು ಹಬ್ಬವನ್ನು ಖುಷಿಯಿಂದ ಆಚರಿಸುವ ಜತೆಗೆ ಸಮಾಜ, ಸಂವಿಧಾನ ಹಾಗೂ ಕಾನೂನು ವ್ಯವಸ್ಥೆಯನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.
ಚನ್ನಗಿರಿಯಲ್ಲಿ ಯುಜಿಡಿ ಕಾಮಗಾರಿಯಿಂದ ಉಂಟಾದ ಗುಂಡಿಗಳನ್ನು ಸರಿಪಡಿಸುವಂತೆ ಹಾಗೂ ಮಲೇಬೆನ್ನೂರಿನಲ್ಲಿ ಉಂಟಾಗುವ ರೋಡ್ ಬ್ಲಾಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಗಳಲ್ಲಿನ ಚಿಕ್ಕ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಪ್ರಮುಖ ಸರ್ಕಲ್ಗಳಲ್ಲಿ 30 ಮೊಬೈಲ್ ಟ್ಯಾಂಕರ್ಗಳನ್ನು ಅಳವಡಿಸಲಾಗುವುದು. ದೊಡ್ಡ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಶಿರಮಗೊಂಡನಹಳ್ಳಿಯಲ್ಲಿ ಟ್ಯಾಂಕರ್ಗಳನ್ನು ಅಳವಡಿಸಲಾಗಿದೆ.
ಪಾಲಿಕೆಯಲ್ಲಿ ಮೂವರು ಅಧಿಕಾರಿಗಳನ್ನು ನೇಮಿಸಿ, ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ಬೇಕಾದ ಎನ್.ಓ.ಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.
ಗುಡುಗಿದ ಜಿಲ್ಲಾಧಿಕಾರಿ..!
ಸಭೆಯಲ್ಲಿ ವ್ಯಕ್ತಿಯೋರ್ವ `ಬನಾಯೆಂಗೆ ಮಂದಿರ್’ ಹಾಡು ಬಳಸದಂತೆ ಮನವಿ ಮಾಡಿದಾಗ ಸಭೆಯಲ್ಲಿ ವಾಗ್ವಾದ ಶುರುವಾಯಿತು. ಈ ವೇಳೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಆ ವ್ಯಕ್ತಿಗೆ ಎಚ್ಚರಿಕೆ ನೀಡುವ ಮೂಲಕ ಸಭೆಯ ಶಾಂತಿ ಕಾಪಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಿತ ಪೋಸ್ಟ್ ಹಾಕಬಾರದು. ಸಮಾಜದ ಶಾಂತಿ ಕದಡಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
– ಎಸ್ಪಿ ಉಮಾ ಪ್ರಶಾಂತ್
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರಾಸ್ತಾವಿಕ ಮಾತನಾಡಿ, ಸಾರ್ವಜನಿಕ ಗಣಪತಿ ಕೂರಿಸಲು ಅನುಮತಿಗಾಗಿ ಏಕಗವಾಕ್ಷಿ (ಸಿಂಗಲ್ ವಿಂಡೊ) ಮಾದರಿ ತೆರೆಯಲಾಗಿದೆ. ಬಂಟಿಗ್ಸ್ ಹಾಗೂ ಬ್ಯಾನರ್ ಕಟ್ಟಲು ಎಲ್ಲರೂ ಕಡ್ಡಾಯವಾಗಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಿದರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಜೊತೆಯಾಗಿ ಬಂದಿದ್ದರಿಂದ ಬಂಟಿಗ್ಸ್ ಕಟ್ಟುವ ವಿಚಾರದಲ್ಲಿ ಸೌಹಾರ್ಧತೆ ಕಾಪಾಡಿಕೊಂಡು ಹಬ್ಬ ಆಚರಿಸುವಂತೆ ಹೇಳಿದರು.
ಗಣಪತಿ ಕೂರಿಸುವ ಆಯೋಜಕರು ಸೂಕ್ತ ಲೈಟಿಂಗ್ ವ್ಯವಸ್ಥೆಯ ಜತೆಗೆ ಸಿಸಿಟಿವಿ ಅಳವಡಿಸಿಕೊಳ್ಳಬೇಕು ಮತ್ತು ಅವರೇ ಸಂಪೂರ್ಣ ಜವಾಬ್ದಾರಿ ಹೊಂದಬೇಕು. ನ್ಯಾಯಾಲಯದ ಸೂಚನೆಯಂತೆ ಸೌಂಡ್ ಸಿಸ್ಟಮ್ ಬಳಕೆಯನ್ನು ನಿಗದಿತ ಸಮಯದೊಳಗೆ ಬಂದ್ ಮಾಡಬೇಕು. ಕೋಮು ಪ್ರಚೋದಿತ ಹಾಡು ಬಳಸದಂತೆ ತಿಳಿಸಿದರು.
ಪೊಲೀಸ್ ಇಲಾಖೆ ಹಾಕಿದ ಮೆರವಣಿಗೆ ರಸ್ತೆ ಮಾರ್ಗ ಪಾಲಿಸಬೇಕು. ಬದಲಾವಣೆಗಾಗಿ ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ಹರಿಹರದಲ್ಲಿ ಈದ್ ಮಿಲಾದ್ ಹಾಗೂ ಗಣಪತಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿಕೊಂಡು ಬಂದಿದ್ದೇವೆ ಎಂದು ಹರಿಹರದ ಮಹಮ್ಮದ್ ಫೈರೋಜ್ ಅನಿಸಿಕೆ ತಿಳಿಸಿದರು.
ರಾಷ್ಟ್ರ ಭಕ್ತಿಗಾಗಿ ಗಣೇಶೋತ್ಸವ ಆಚರಿಸೋಣ. ಪರಿಸರದ ರಕ್ಷಣೆ ದೃಷ್ಟಿಯಿಂದ ಹರಿಹರದ ನದಿ ಬಳಿ ಗಣಪತಿ ವಿಸರ್ಜನೆಗೆ ದೊಡ್ಡ ಗುಂಡಿ ತೆರೆಸುವಂತೆ ಸತೀಶ್ ಪೂಜಾರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಾಸ್ವಿಹಳ್ಳಿಯಲ್ಲಿ 13ನೇ ದಿನಕ್ಕೆ ಗಣಪತಿ ವಿಸರ್ಜನೆ ಮಾಡುತ್ತೇವೆ. ಇದಾದ ಬಳಿಕ ಮಿಲಾದ್ ಮೆರವಣಿಗೆ ನಡೆಯುತ್ತದೆ. ಯಾವ ಸಮಸ್ಯೆಯು ಇಲ್ಲದಂತೆ ಶಾಂತಿಯುತವಾಗಿ ಹಬ್ಬ ಮಾಡುತ್ತೇವೆ ಎಂದು ನರಸಿಂಹಪ್ಪ ಅನಿಸಿಕೆ ತಿಳಿಸಿದರು.
ಪ್ರತಿಯೊಂದು ಗಣಪತಿ ಮೆರವಣಿಗೆಗೂ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ನೀಡಬೇಕು. ನಗರದ ಬಸವರಾಜ ಪೇಟೆಯಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸಬೇಕೆಂದು ರಾಜನಹಳ್ಳಿ ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಗಾಂಜಾ, ಮಧ್ಯಪಾನ ಸೇವಿಸಿ ಹಬ್ಬ ಮಾಡುವುದರಿಂದ ಅನಾಹುತ ಸಂಭವಿಸಲಿವೆ. ಹಾಗಾಗಿ ಅಂದು ಮಾದಕ ವಸ್ತು ಮಾರಾಟ ನಿಷೇಧ ಮಾಡುವಂತೆ ಸೈಯದ್ ರಿಯಾಜ್ ಅನಿಸಿಕೆ ಹಂಚಿಕೊಂಡರು.
ಆವರಗೆರೆ ಉಮೇಶ್, ಹಳೇ ಬಾತಿ ಸಿದ್ದೇಶ್, ಜೊಳ್ಳಿಗುರು, ಸಿದ್ದೇಶ್, ಗೌಡ್ರ ಚನ್ನಬಸಪ್ಪ ಸೇರಿದಂತೆ ಇತರರು ಅನಿಸಿಕೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ಕುಮಾರ್ ಎಂ. ಸಂತೋಷ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಂಜುನಾಥ್, ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.