ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್
ದಾವಣಗೆರೆ, ಆ. 29 – ಒಳಗಿನ ಬಡತನವನ್ನು ಹೊರಗಿನ ಐಶ್ವರ್ಯದಿಂದ ತುಂಬಲು ಸಾಧ್ಯವಿಲ್ಲ. ಸ್ವಾರ್ಥಕ್ಕೆ ಕಡಿವಾಣ ಹಾಕಿ ದೈವತ್ವ ಬೆಳೆಸಿಕೊಳ್ಳು ವುದರಿಂದ ಮಾತ್ರ ಉನ್ನತಿ ಸಾಧ್ಯ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾ ರಾಜ ಹೇಳಿದರು.
ಶ್ರೀ ವಾಸವಿ ಸೇವಾ ಸಂಘದಿಂದ ನಗರದ ಡಿಸಿಎಂ ಟೌನ್ಶಿಪ್ನಲ್ಲಿ ಗುರು ವಾರ ಹಮ್ಮಿ ಕೊಳ್ಳಲಾಗಿದ್ದ ಶ್ರೀಮತಿ ಪ್ರೇಮಾ ರಾಜನಹಳ್ಳಿ ಶ್ರೀ ರಮಾನಂದ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಶುತ್ವ, ಮನುಷ್ಯತ್ವ ಹಾಗೂ ದೈವತ್ವ ಎಂಬ ಮೂರು ಹಂತಗಳಿರುತ್ತವೆ. ಪಶುಗಳು ಸಹ ಆಹಾರ, ಗೂಡು ಹಾಗೂ ಮರಿಗಳ ನಿರ್ವಹಿಸುತ್ತವೆ. ಮನುಷ್ಯ ಜೀವನದ ಉದ್ದೇಶ ಇಷ್ಟಕ್ಕೇ ಇದ್ದರೆ, ಪಶುತ್ವದ ಗುಣಕ್ಕೆ ಸೀಮಿತವಾದಂತಾ ಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಪ್ರಾಣಿ ಗುಣಗಳಿಂದ ಮೇಲೆದ್ದು ಬಂದಾಗ ಮನುಷ್ಯತ್ವ ಹಾಗೂ ದೈವತ್ವಕ್ಕೆ ತಲುಪಲು ಸಾಧ್ಯವಾಗುತ್ತದೆ. ಆತ್ಮೀಯತೆ, ಸಹಜತೆ, ಪ್ರೀತಿ, ನಿಸ್ವಾರ್ಥ ಮುಂತಾದವು ದೈವತ್ವದಲ್ಲಿ ಕಂಡು ಬರುತ್ತವೆ ಎಂದವರು ತಿಳಿಸಿದರು.
ಅಪರಿಚಿತರಿಂದ ಗೌರವ ಪಡೆಯುವುದು ಸುಲಭ. ಆದರೆ, ನಮ್ಮ ಸ್ವಭಾವ ಗೊತ್ತಿರುವ ವರಿಂದ ಗೌರವ ಪಡೆಯುವುದು ಕಷ್ಟ. ಹೀಗಾ ಗಿಯೇ ಕುಟುಂಬದಲ್ಲಿ ಗೌರವ ಪಡೆಯುವುದು ಸುಲಭವಲ್ಲ. ನಮ್ಮ ವ್ಯಕ್ತಿತ್ವ ಉತ್ತಮವಾಗಿದ್ದಾಗ ಮಾತ್ರ ಕುಟುಂಬದಲ್ಲಿ ಗೌರವ ಸಿಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಯಾವ ಕುಟುಂಬ ಜೊತೆಯಾಗಿ ಪ್ರಾರ್ಥಿಸುವ, ಭೋಜನ ಸೇವಿಸುವ ಹಾಗೂ ಅಧ್ಯಯನ ಮಾಡುವ ಪದ್ಧತಿ ಹೊಂದಿರುತ್ತದೆಯೋ ಅಲ್ಲಿ ಸಂಬಂಧಗಳು ಗಟ್ಟಿಯಾಗುತ್ತವೆ. ತಂದೆ – ತಾಯಿಗಳು ಮಕ್ಕಳಿಗೆ ಆದರ್ಶವಾಗುವಂತೆ ಇರಬೇಕು ಹಾಗೂ ಮಕ್ಕಳೂ ಸಹ ತಂದೆ – ತಾಯಿಗಳಿಗೆ ಆದರ್ಶವಾಗುವಂತಹ ಬದುಕು ಬದುಕಬೇಕು ಎಂದವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಭಾರತೀಯ ಹಿಂದೂ ಸಂಸ್ಕೃತಿ ಹಾಗೂ ಗುರು ಪರಂಪರೆಯನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಪಾರಂಪರಿಕ ಹೆಗ್ಗಳಿಕೆಯನ್ನು ತಿಳಿಸುವ ಹೊಣೆ ಹಿರಿಯರ ಮೇಲಿದೆ. ಇದರಿಂದ ಸಮಾಜವನ್ನು ಗಟ್ಟಿಗೊಳಿಸಬಹುದು ಎಂದು ಹೇಳಿದರು.
ಶ್ರೀ ವಾಸವಿ ಸೇವಾ ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ವಾಸವಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ವೈ. ತಿಪ್ಪೇಸ್ವಾಮಿ ಶ್ರೇಷ್ಠಿ, ವೈ. ಅನಂತ ಶ್ರೇಷ್ಠಿ, ಮಾಜಿ ಖಜಾಂಚಿ ಬಿ.ಹೆಚ್. ಕೃಷ್ಣಮೂರ್ತಿ ಶ್ರೇಷ್ಠಿ, ಸಂಘದ ಗೌರವಾಧ್ಯಕ್ಷ ಹೆಚ್. ಪ್ರಹ್ಲಾದಶ್ರೇಷ್ಠಿ, ನಿವೃತ್ತ ಕೃಷಿ ಅಧಿಕಾರಿ ಎಸ್. ನಾಗರಾಜ್ ಶ್ರೇಷ್ಠಿ, ಮುಖಂಡರಾದ ಯುಟಿಐ ಮಂಜುನಾಥ, ಹೆಚ್.ವಿ. ರಮೇಶ್, ಎಸ್.ಆರ್. ಮಂಜುನಾಥ, ಬಿ.ಹೆಚ್. ಭಾಸ್ಕರ ಶ್ರೇಷ್ಠಿ, ಮೀನಾಕ್ಷಮ್ಮ ಶ್ರೀಧರ ಶ್ರೇಷ್ಠಿ, ಲಕ್ಷ್ಮಿದೇವಮ್ಮ ರಾಘವೇಂದ್ರ ಶ್ರೇಷ್ಠಿ ಮತ್ತಿತರರು ಉಪಸ್ಥಿತರಿದ್ದರು.