ಪ್ರಶಸ್ತಿ ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ : ಅಧ್ಯಕ್ಷ ಬಿ.ಸಿ. ಉಮಾಪತಿ
ದಾವಣಗೆರೆ, ಆ. 28- ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಪ್ರಗತಿಯ ಮುಂಚೂಣಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿಯು ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜವಳಿ ಉದ್ಯಮಿಯೂ ಆಗಿರುವ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ಉಮಾಪತಿ ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ಶ್ರೀ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ 63ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ದೇಶದ ಸಹಕಾರ ಬ್ಯಾಂಕುಗಳ ಪ್ರಗತಿಯನ್ನು ಅವಲೋಕಿಸಿ ಕೊಲ್ಹಾಪುರದ ಅವೀಸ್ ಪಬ್ಲಿಕೇಷನ್ ಸಂಸ್ಥೆಯು ಪ್ರತಿ ವರ್ಷ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮ ಬ್ಯಾಂಕ್ 2022-23ನೇ ಸಾಲಿಗೆ ಪಡೆದಿದೆ. ಠೇವಣಾತಿ ವರ್ಗೀಕರಣದಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅತ್ಯುನ್ನತ ಸಾಧನೆಗೈದಿದೆ ಎಂದು ಗುರುತಿಸಿ, `ಬ್ಯಾಂಕೋ ಬ್ಲೂ ರಿಬ್ಬನ್-2023 ರಾಷ್ಟ್ರೀಯ ಪ್ರಶಸ್ತಿ’ ನೀಡಿದೆ ಎಂದು ಅವರು ತಿಳಿಸಿದರು.
ಪ್ರಗತಿಯ ಪಕ್ಷಿನೋಟ : ಬ್ಯಾಂಕಿನ ಪ್ರಗತಿಯನ್ನು ಪ್ರಸ್ತಾಪಿಸಿದ ಅವರು, 2024, ಮಾರ್ಚ್ ಅಂತ್ಯಕ್ಕೆ 13.55 ಕೋಟಿ ರೂ. ಲಾಭ ಗಳಿಸಿದ್ದು, ಇದು ಕಳೆದ ಸಾಲಿಗಿಂತ 1.54 ಕೋಟಿ ರೂ. ಹೆಚ್ಚಾಗಿರುತ್ತದೆ. 546 ಕೋಟಿ ರೂ.ಗಳಿಗೂ ಹೆಚ್ಚು ಠೇವಣಿ ಸಂಗ್ರಹಿಸಲಾಗಿದ್ದು, ಇಲ್ಲೂ ಕೂಡಾ ಕಳೆದ ವರ್ಷಕ್ಕಿಂತ 53 ಕೋಟಿ ರೂ. ಹೆಚ್ಚಾಗಿರುತ್ತದೆ ಎಂದು ಹೇಳಿದರು.
13.63 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 99 ಕೋಟಿ ರೂ. ಕಾಯ್ದಿಟ್ಟ ಮತ್ತು ಇತರೆ ನಿಧಿಗಳಾಗಿದ್ದು, ಇದು ಬ್ಯಾಂಕಿನ ಸದೃಢತೆಯನ್ನು ಬಿಂಬಿಸುತ್ತದೆ. 669 ಕೋಟಿ ರೂ. ದುಡಿಯುವ ಬಂಡವಾಳವಾಗಿದ್ದು, 206 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕುಗಳ ಖಾಯಂ ಠೇವಣಿಗಳಲ್ಲಿ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ಲಾಭದಾಯಕವಾಗಿ ತೊಡಗಣೆ ಮಾಡಲಾಗಿದೆ.
ಸಣ್ಣ – ಸಣ್ಣ ವ್ಯಾಪಾರಸ್ಥರು, ಸ್ವಾವಲಂಬಿಗಳು, ವರ್ತಕರು, ಉದ್ಯಮಿಗಳು, ಕೈಗಾರಿಕೆಗಳಿಗೆ ಅವರ ಅಗತ್ಯಗನುಗುಣವಾಗಿ 396 ಕೋಟಿ ರೂ. ಸಾಲ-ಸೌಲಭ್ಯ ಒದಗಿಸಲಾಗಿದ್ದು, ಈ ಮೂಲಕ ಅವರನ್ನು ಅವರ ಉದ್ಯಮಕ್ಕೆ ಪ್ರೋತ್ಸಾಹ ಕೊಡುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವಂತಾಗುವ ನಿಟ್ಟಿನಲ್ಲಿ ಸಹಕಾರ ನೀಡುವುದರ ಜೊತೆಗೆ ಬ್ಯಾಂಕಿಗೂ ಶ್ರೇಯಸ್ಸು ಸಿಕ್ಕಂತಾಗಿದೆ ಎಂದು ಉಮಾಪತಿ ಅಭಿಪ್ರಾಯಪಟ್ಟರು.
ಸಾಲ ವಸೂಲಾತಿ ಕಾರ್ಯವನ್ನು ಯೋಜನಾಬದ್ಧವಾಗಿ ನಡೆಸಿದ್ದರಿಂದ ಅನುತ್ಪಾದಕ ಸಾಲಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಿದೆ. ಇದು, ಬ್ಯಾಂಕಿನ ಪ್ರಶಂಸಾರ್ಹ ಪ್ರಗತಿಗೆ ಕಾರಣವಾಗಿದೆ. ಕಟ್ಟುಬಾಕಿ ಪ್ರಮಾಣ ಶೇ. 0.89 ರಷ್ಟಿದ್ದು, ಬ್ಯಾಂಕು ಸತತವಾಗಿ ಶೇ. ಶೂನ್ಯ ನಿವ್ವಳ ಎನ್‌ಪಿಎ (ಅನುತ್ಪಾದಕ ಆಸ್ತಿ) ಹೊಂದಿರುವುದು ಬ್ಯಾಂಕಿನ ಮತ್ತೊಂದು ಸದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
13.55 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಆದಾಯ ತೆರಿಗೆ ಹಾಗೂ ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ 8.51 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದ ಅವರು, ಬ್ಯಾಂಕಿನ ಸದಸ್ಯರಿಗೆ ಶೇ. 15ರಂತೆ ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ಷೇರುದಾರರ ಚಪ್ಪಾಳೆಗಳ ಮಧ್ಯೆ ಘೋಷಿಸಿದರು.
ಬ್ಯಾಂಕಿನ ಪ್ರಗತಿ ಕುರಿತಂತೆ ಸದಸ್ಯರು ಕೊಟ್ಟ ಸಲಹೆ-ಸೂಚನೆಗಳನ್ನು ಆಲಿಸಿದ ಉಮಾಪತಿ ಅವರು, ಕೆಲವರಿಂದ ಕೇಳಿ ಬಂದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕೃತಜ್ಞತೆ : ಬ್ಯಾಂಕಿನ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್ ಮಾತನಾಡಿ, ಬ್ಯಾಂಕಿನ ಹಿತೈಷಿಗಳ ಶುಭಾಶೀರ್ವಾದ, ಷೇರುದಾರರ-ಗ್ರಾಹಕರ ಪ್ರೋತ್ಸಾಹ-ಸಹಕಾರ, ಆಡಳಿತ ಮಂಡಳಿಯವರ ಇಚ್ಛಾಶಕ್ತಿ, ಸಿಬ್ಬಂದಿ ವರ್ಗದವರ ಪರಿಶ್ರಮ-ಕಾಳಜಿಯಿಂದಾಗಿ ತಮ್ಮ ಬ್ಯಾಂಕ್ ಪ್ರಗತಿಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದರಲ್ಲದೇ, ಸಹಕಾರ ನೀಡುತ್ತಿರುವ ಪ್ರತಿಯೊಬ್ಬರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
ವಿಷಯ ಮಂಡನೆ : ಕಳೆದ ಸಾಲಿನ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಹಿರಿಯ ನಿರ್ದೇಶಕ ಅಜ್ಜಂಪುರ ಶೆಟ್ರು ವಿಜಯಕುಮಾರ್ ಸಭೆಗೆ ತಿಳಿಸಿದರು. ಕಾರ್ಯನಿರ್ವಾಹಕ ಮಂಡಳಿಯು ತಯಾರಿಸಿದ ವಾರ್ಷಿಕ ವರದಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರೂ ಆಗಿರುವ ವೃತ್ತಿಪರ ನಿರ್ದೇಶಕ ಮುಂಡಾಸ್ ವೀರೇಂದ್ರ ವಿವರಿಸಿದರು. ನಿರ್ದೇಶಕ ಮಂಡಳಿಯು ನೂತನ ಸಾಲಿಗೆ ರೂಪಿಸಿದ ಕಾರ್ಯ ಚಟುವಟಿಕೆಗಳನ್ನು ನ್ಯಾಯವಾದಿಯೂ ಆಗಿರುವ ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಣವಿ ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ದಾವಣಗೆರೆ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಹಿರಿಯ ನಿರ್ದೇಶಕ ಕೋಗುಂಡಿ ಬಕ್ಕೇಶಪ್ಪ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ದೂಡಾ ಮಾಜಿ ಸದಸ್ಯ ಮೋತಿ ಟಿ. ಶಂಕ್ರಪ್ಪ ಮಾತನಾಡಿ, ಬ್ಯಾಂಕಿನ ಪ್ರಗತಿಯನ್ನು ಮೆಲುಕು ಹಾಕಿದರು. ಬಿ.ಹೆಚ್. ಪರಶುರಾಮಪ್ಪ, ವೀರಶೈವ ಸಮಾಜದ ಹಿರಿಯ ಮುಖಂಡ ಜೆ. ಸೋಮನಾಥ್, ಪಲ್ಲಾಗಟ್ಟೆ ವೀರಣ್ಣ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ಬಾದಾಮಿ ಮಲ್ಲಿಕಾರ್ಜುನ್, ಟಿ.ಎಂ. ಪರಮೇಶ್ವರಯ್ಯ, ಸಿದ್ದಲಿಂಗೇಶ್, ಮಾಗಿ ಜಯಪ್ರಕಾಶ್, ಎಂ.ಎನ್. ನಾಗರಾಜ್, ಅರುಣಾಚಲ ಶೆಟ್ಟಿ, ಕೋಗುಂಡಿ ಅಖಿಲೇಶ್, ಗುರುಶಾಂತೇಶ್ ವಿ. ಸೋಗಿ, ಲಿಂಗರಾಜ್, ಐನಳ್ಳಿ ನಿಧಿರಾಜ್, ಯಾಸೀನ್ ಪಿ. ರಜ್ವಿ ಮತ್ತಿತರರು ಸಲಹೆ-ಸೂಚನೆ ನೀಡಿದರಲ್ಲದೇ, ಹಲವಾರು ಪ್ರಶ್ನೆಗಳನ್ನು ಕೇಳಿದರು.
ನಿರ್ದೇಶಕರುಗಳಾದ ಅಂದನೂರು ಮುಪ್ಪಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಕಂಚಿಕೇರಿ ಮಹೇಶ್, ವಿ. ವಿಕ್ರಮ್, ಶ್ರೀಮತಿ ಅರ್ಚನಾ ಡಾ. ಅಂದನೂರು ರುದ್ರಮುನಿ, ಸೋಗಿ ಮುರುಗೇಶ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಎಂ. ಅನುಶ್ರೀ ಮತ್ತು ಶ್ರೀಮತಿ ತೇಜಸ್ವಿನಿ ಅವರಿಂದ ಪ್ರಾರ್ಥನೆಯ ನಂತರ ನಿರ್ದೇಶಕ ಹೆಚ್.ಎಂ. ರುದ್ರಮುನಿಸ್ವಾಮಿ ಸ್ವಾಗತಿಸಿದರು. ಹಿರಿಯ ನಿರ್ದೇಶಕ ಎಂ. ಚಂದ್ರಶೇಖರ್ ಅವರಿಂದ ವಂದನಾರ್ಪಣೆ, ನಿರ್ದೇಶಕ ಇ.ಎಂ. ಮಂಜುನಾಥ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪ ಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ ಅವರುಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಬ್ಯಾಂಕಿನ ಪ್ರಧಾನ ಕಛೇರಿ ವ್ಯವಸ್ಥಾಪಕ ಕೆ.ಎಸ್. ಮಹೇಶ್, ಚೌಕಿಪೇಟೆ ಶಾಖೆ ವ್ಯವಸ್ಥಾಪಕ ಜಿ.ಕೆ. ವಿಜಯಕುಮಾರ್, ಎನ್.ಆರ್. ರಸ್ತೆ ಶಾಖೆ ವ್ಯವಸ್ಥಾಪಕ ಹೆಚ್.ವಿ. ರುದ್ರೇಶ್, ಪಿ.ಜೆ. ಬಡಾವಣೆ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಎಲ್.ಎಸ್. ಗೀತಾ, ಡಿ. ದೇವರಾಜ ಅರಸು ಬಡಾವಣೆ ವ್ಯವಸ್ಥಾಪಕ ಸಾನಂದ ಗಣೇಶ್, ಹೊನ್ನಾಳಿ ಶಾಖೆ ಪ್ರಭಾರ ವ್ಯವಸ್ಥಾಪಕ ಹೆಚ್. ಕುಮಾರ್, ಆಡಳಿತ ಕಛೇರಿ ಡಿಬಿಎ ಬಿ.ಎಸ್. ಪ್ರಶಾಂತ್ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.
ಜಾನಪದ ಗಾಯಕರಾದ ದಾವಣಗೆರೆ ತಾಲ್ಲೂಕಿನ ಚಿನ್ನಸಮುದ್ರದ ಸಿ. ಉಮೇಶ್ ನಾಯಕ್ ಅವರು ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.