ಮಳೆ ಹಾನಿಗೆ ತ್ವರಿತ ಪರಿಹಾರ, ಕಾಲಮಿತಿಯಲ್ಲಿ ಸಕಾಲ

ಮಳೆ ಹಾನಿಗೆ ತ್ವರಿತ ಪರಿಹಾರ, ಕಾಲಮಿತಿಯಲ್ಲಿ ಸಕಾಲ

ಆಧಾರ್ ಜೋಡಣೆಯಲ್ಲಿ ಜಿಲ್ಲೆ ರಾಜ್ಯಕ್ಕೇ ಪ್ರಥಮ

ಆರ್.ಟಿ.ಸಿ. ಹಾಗೂ ಆಧಾರ್ ಜೋಡಣೆ ವಿಷಯದಲ್ಲಿ ದಾವಣಗೆರೆ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಶೇ.91.95ರಷ್ಟು ಆರ್.ಟಿ.ಸಿ.ಗಳು ಆಧಾರ್‌ಗೆ ಜೋಡಣೆಯಾಗಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಜಿಲ್ಲೆಯಲ್ಲಿ 8,65,233 ಆರ್.ಟಿ.ಸಿ.ಗಳಿದ್ದು, ಈ ಪೈಕಿ 7,79,583 ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಸೂಚನೆ

ದಾವಣಗೆರೆ, ಆ. 26 –  ಮಳೆ ಹಾನಿಗೆ ತ್ವರಿತವಾಗಿ ಪರಿಹಾರ ನೀಡಬೇಕು, ಶಾಲೆ – ಅಂಗನವಾಡಿ ಕಟ್ಟಡಗಳನ್ನು ಭದ್ರಪಡಿಸಲು ಕ್ರಮ ತೆಗೆದುಕೊಳ್ಳಬೇಕು ಹಾಗೂ ಕಾಲಮಿತಿ ಯಲ್ಲಿ ಸಕಾಲ ಅರ್ಜಿಗಳನ್ನು ಇತ್ಯರ್ಥಪಡಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಶಮ್ಲಾ ಇಕ್ಬಾಲ್ ಸೂಚನೆ ನೀಡಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು ಹಾಗೂ ಸಂಸದರ ಕ್ಷೇತ್ರಾ ಭಿವೃದ್ಧಿ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಲ್ಲಿ ಕೆಲವು ವಿಳಂಬವಾಗಿವೆ. ಇವುಗಳನ್ನು ತ್ವರಿತವಾಗಿ ಪೂರ್ಣಗೊಳಿಸ ಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಕಾಲದಲ್ಲಿ ಸಲ್ಲಿಸಲಾದ 768 ಅರ್ಜಿಗಳು ಬಾಕಿ ಇರುವ ಬಗ್ಗೆ ಪ್ರಸ್ತಾಪಿಸಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೇ ಅತಿ ಹೆಚ್ಚು ಅರ್ಜಿಗಳು ಬಾಕಿ ಇವೆ. ಎಲ್ಲ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಬೇಕು ಎಂದು ತಿಳಿಸಿದರು.

ಪ್ರಸಕ್ತ ಮುಂಗಾರಿನಲ್ಲಿ 65 ಮನೆಗಳಿಗೆ ಪೂರ್ಣ ಹಾನಿಯಾಗಿದೆ ಹಾಗೂ 80 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 78 ಕಿ.ಮೀ. ಉದ್ದದ ಗ್ರಾಮೀಣ ರಸ್ತೆ ಹಾಗೂ 4 ಸೇತುವೆಗಳಿಗೆ ಹಾನಿಯಾಗಿದೆ. ಅಲ್ಲದೇ 89 ಶಾಲಾ ಕಟ್ಟಡಗಳು ಹಾಗೂ 38 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 287 ವಿದ್ಯುತ್ ಕಂಬಗಳು ಹಾಗೂ ಎರಡು ಟ್ರಾನ್ಸ್‌ ಪಾರ್ಮರ್‌ಗಳಿಗೆ ಹಾನಿಯಾಗಿದೆ. 425 ಹೆಕ್ಟೇರ್ ಕೃಷಿ ಹಾಗೂ ಏಳು ಹೆಕ್ಟೇರ್ ತೋಟಗಾರಿಕೆ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಬೆಳೆ ಹಾನಿಗೆ ತ್ವರಿತವಾಗಿ ಪರಿಹಾರ ನೀಡಬೇಕು. ಹಲವಾರು ಇಲಾಖೆಗಳಿಂದ ಲಭ್ಯವಿರುವ ಅನುದಾನ ಬಳಸಿಕೊಂಡು ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಪಡಿಸಬೇಕು. ಅಂಗನವಾಡಿಗಳಿಗೆ ನೀರು – ಶೌಚಾಲಯ ಇತ್ಯಾದಿ ಮೂಲಭೂತ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಅಂಗನ ವಾಡಿ ಕಟ್ಟಡಗಳು ಸುಭದ್ರವಾಗಿರುವ ಬಗ್ಗೆ ಪ್ರಮಾಣ ಪತ್ರ ಪಡೆಯಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಸೂಚನೆ ನೀಡಿದರು.

ತಾವು ಭೇಟಿ ನೀಡಿದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಪಠ್ಯ ಪೂರೈಕೆಯಾಗಿರಲಿಲ್ಲ. ಮಕ್ಕಳು ಕನ್ನಡದ ಪುಸ್ತಕದಲ್ಲೇ ಪಾಠ ಕಲಿಯುತ್ತಿದ್ದರು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಕೊಟ್ರೇಶ್, 17 ಶಾಲೆಗಳಿಗೆ ಇಂಗ್ಲಿಷ್ ಪಠ್ಯ ಪೂರೈಕೆಯಾಗಿಲ್ಲ. ಜೆರಾಕ್ಸ್ ಪ್ರತಿಗಳ ಮೂಲಕ ಪಾಠ ಕಲಿಸಲಾಗುತ್ತಿದೆ ಎಂದು ಹೇಳಿದರು. ಸಾಕಷ್ಟು ಶಾಲೆಗಳಲ್ಲಿ ಬೆಂಚ್‌ಗಳ ಕೊರತೆ ಇರುವುದು ಕಂಡು ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಂಡು ಬೆಂಚ್‌ಗಳನ್ನು ಪೂರೈಸ ಬೇಕು. ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ನ್ಯಾಮತಿಯ ಬಸವನಹಳ್ಳಿಯಲ್ಲಿ ತುಂಗಾ ಮೇಲ್ದಂಡೆಯ ಎಡ ಕಾಲುವೆ ಒಡೆದು ಹೊಲಗಳಿಗೆ ನೀರು ನುಗ್ಗಿದೆ. ಕಾಲುವೆ ದುರಸ್ತಿಪಡಿಸಲು ಹಾಗೂ ಸಮೀಕ್ಷೆ ನಡೆಸಿ ಬೆಳೆ ಹಾನಿಯ ಅಂದಾಜು ವಿವರ ಪಡೆಯಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಸೂರ್ಯಕಾಂತಿ ಹಾಗೂ ಹೆಸರುಕಾಳು ಖರೀದಿ ಕೇಂದ್ರವನ್ನು ಜಿಲ್ಲೆಯಲ್ಲೂ ತೆರೆಯುವಂತೆ ರೈತರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುರೇಶ್ ಇಟ್ನಾಳ್, ಕಲಪನಹಳ್ಳಿಯಲ್ಲಿ ಮೆಗಾ ಡೈರಿ ಸ್ಥಾಪಿಸಲು ಸರ್ಕಾರದಿಂದ 150 ಕೋಟಿ ರೂ. ನೆರವಿನ ಅಗತ್ಯವಿದೆ. ಐದು ಪ್ರಮುಖ ಬಹುಗ್ರಾಮ ಯೋಜನೆಗಳಿಗೆ 498 ಕೋಟಿ ರೂ.ಗಳ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!