ಇತಿಹಾಸ ಪ್ರಸಿದ್ಧ ಆನೆಕೊಂಡದಲ್ಲಿ ಕಾರಣಿಕ ಸಂಭ್ರಮ

ಇತಿಹಾಸ ಪ್ರಸಿದ್ಧ ಆನೆಕೊಂಡದಲ್ಲಿ ಕಾರಣಿಕ ಸಂಭ್ರಮ

ರಾಮ ರಾಮ ಎಂದು ನುಡಿದೀತಲೇ..

ನರ ಲೋಕದ ಜನಕೆ ಆನೆ ತಣ್ಣೀರು ಉಗ್ಗಿತಲೇ..

ಮುತ್ತೈದರ ಭೂತಾಯಿ ಉಡಿ ತುಂಬಿರಲೆ..

ನರ ಲೋಕದ ಜನಕೆ ದೃಷ್ಟಿ ಹುಚ್ಚಾದಿತಲೇ..

ದಾವಣಗೆರೆ, ಆ.26-  ಇಲ್ಲಿನ ಇತಿಹಾಸ ಪ್ರಸಿದ್ಧ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ನಡೆದ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶ್ರಾವಣ ಮಾಸದ ಕಡೇ ಸೋಮವಾರವಾದ ಇಂದು ಸಂಜೆ ನೆರವೇರಿತು.

ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಬಾತಿ ಸಮೀಪದ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯೊಂದಿಗೆ ಸಂಜೆ ಕುದುರೆ ಮೆರವಣಿಗೆ ಮೇಲೆ, ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ, ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ಒಳಗೊಂಡು ಸುತ್ತಮುತ್ತಲ ದೇವರನ್ನು ಕರೆ ತರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಇನ್ನು ಪ್ರತಿ ವರ್ಷದ ಪದ್ಧತಿಯಂತೆ ಆನೆಕೊಂಡದ ಪುರಾತನ ಬಾವಿಯಲ್ಲಿ ಸ್ನಾನ ಮಾಡಿ, ದೇವಸ್ಥಾನ ಬಳಿ ಸಿದ್ಧಗೊಂಡ ವೇದಿಕೆಯಲ್ಲಿ ದಾಸಪ್ಪನವರು ಈ ಕಾರಣಿಕ ನುಡಿದಿದ್ದನ್ನು
ನೆರೆದಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಅಲ್ಲದೇ  ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು. 

ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ ಭಕ್ತರು ದೇವರಿಗೆ ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ಕಾರಣಿಕ ಮಹೋತ್ಸವಕ್ಕೆ ಬಂದ ದೇವರುಗಳಿಗೆ ಕೈಮುಗಿದು ಭಕ್ತಿಯಿಂದ ಪ್ರಾರ್ಥಿಸಿದರು. ಕುಟುಂಬದವರು ಮಕ್ಕಳೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಜಾತ್ರೆ ಪ್ರಯುಕ್ತ ಬಂಬೂಬಜಾರ್ ರಸ್ತೆಯಲ್ಲಿ ಇರಿಸಲಾಗಿದ್ದ ಅಂಗಡಿಗಳಲ್ಲಿ ಖಾರಾ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ ಮೈಸೂರು ಪಾಕ್ ಮೊದಲಾದ ತಿನಿಸುಗಳು ಹಾಗೂ ಬಳೆ, ಸರ, ಕಿವಿಯೋಲೆ ಮೊದಲಾದ ವಸ್ತುಗಳು, ಚಿಕ್ಕಮಕ್ಕಳ ಆಟಿಕೆಗಳ ಖರೀದಿಯೂ ಜೋರಾಗಿತ್ತು.

ವೆಂಕಾಭೋವಿ ಕಾಲೋನಿಯ ಕನಕದುರ್ಗದೇವಿ, ಕೊರಮರ ಕಾಲೋನಿಯ ವೆಂಕಟೇಶ್ವರ ದೇವರು, ಕೊರಚರಹಟ್ಟಿಯ ಬಸವಪಟ್ಟಣದ ದುರುಗಮ್ಮ, ಎಸ್‌.ಎಂ. ಕೃಷ್ಣ ನಗರದ ಗಾಳಿ ದುರ್ಗಮ್ಮ, ಕುರುಬರಕೇರಿಯ ಅರಿಕೇರಮ್ಮ, ಗಾಂಧಿನಗರದ ಮಲ್ಲಾಡಿ ಚೌಡೇಶ್ವರಿ ದೇವರು, ಮುದ್ದಾಭೋವಿ ಕಾಲೊನಿಯ ನೀರುಮನೆ ಎಲ್ಲಮ್ಮದೇವರು, ಎಸ್‌ಪಿಎಸ್‌ ನಗರದ ಕುಕ್ಕುವಾಡೇಶ್ವರಿ ದೇವಿ, ಹುಲಿಗೆಮ್ಮ ದೇವಿ, ಎಸ್.ಎಸ್.ಬಡಾವಣೆಯ ಭೂತಪ್ಪ ದೇವರು. ಎಲೆಬೇತೂರಿನ ದೇವಿದುರ್ಗಮ್ಮ, ಮುದ್ಧಾಭೋವಿ ಕಾಲೋನಿಯ ವೆಂಕಟೇಶ್ವರ ದೇವರು, ಬಸಾಪುರದ ಗೋಚಂದ್ರ ಮಾರೆಮ್ಮ ದೇವರುಗಳು ಭಾಗವಹಿಸಿದ್ದವು.

error: Content is protected !!