ಮುಡಾ ವಿಚಾರದಲ್ಲಿ ಹಾದಿಬೀದಿಗಳಲ್ಲಿ ಮೂಡರಂತೆ ವರ್ತಿಸುತ್ತಿರುವ ಬಿಜೆಪಿ

ಮುಡಾ ವಿಚಾರದಲ್ಲಿ ಹಾದಿಬೀದಿಗಳಲ್ಲಿ ಮೂಡರಂತೆ  ವರ್ತಿಸುತ್ತಿರುವ ಬಿಜೆಪಿ

ಕಿಡಿಕಾರಿದ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ, ಆ.23- ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ ಶಾಸಕ ಡಿ.ಜಿ. ಶಾಂತನಗೌಡ, ಮುಡಾ ಆರೋಪ ಮಾಡುತ್ತಿರುವವರು ಹಾದಿ – ಬೀದಿಗಳಲ್ಲಿ ಹೋರಾಟ ನಡೆಸುತ್ತಾ ಮೂಡರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹೊನ್ನಾಳಿ ತಾಲ್ಲೂಕು ಕಾಂಗ್ರೆಸ್ ಪಕ್ಷ ಹಾಗೂ ಅಹಿಂದ ವರ್ಗ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಇಂದು ಬಿಜೆಪಿ ನಾಯಕರು ಸಿದ್ದರಾಮಯ್ಯ ನವರ ಬಗ್ಗೆ ಮಾಡುತ್ತಿರುವ ಆರೋಪವನ್ನು ಖಂಡಿಸಿ, ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಪ್ರಭಾವಳಿಗೆ ಜನತೆ ಮರಳಾಗುವುದಿಲ್ಲ ಎಂದರು.

ಸಿದ್ದರಾಮಯ್ಯನವರ ಬಗ್ಗೆ ಒಂದು ಖಾಸಗಿ ದೂರಿಗೆ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ ರಾಜೀನಾಮೆ ಕೇಳಿಲ್ಲ. ಬಿಜೆಪಿ ನಾಯಕರು ಏಕೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ ? ಇದರಲ್ಲಿ ಕೇಂದ್ರ ಸರ್ಕಾರದ ಏನು ಸಂಚಿದೆ. ರಾಜ್ಯ ಬಿಜೆಪಿ ನಾಯಕರು ಕುಮ್ಮಕ್ಕಿನ ಕಾರಣವನ್ನು ವಿವರಿಸಿ, ಮುಡಾದ ವಿಷಯವನ್ನು ಸುದೀರ್ಘವಾಗಿ ವಿವರಿಸಿದ ಶಾಸಕರು, ಇದರಲ್ಲಿ ಸಿದ್ದರಾಮಯ್ಯನವರ ತಪ್ಪಿಲ್ಲ. ರಾಜೀನಾಮೆ ನೀಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಮುಡಾ ಸೈಟು ವಿಚಾರ ಚರ್ಚೆ ಬಿಜೆಪಿ ಅವಧಿಯದ್ದಾಗಿದ್ದು ಅಂದು
ಸುಮ್ಮನಿದ್ದು, ಇದೀಗ ಇವರ ಹೋರಾಟಕ್ಕೆ ಅರ್ಥವಿಲ್ಲ ಎಂದರು.

ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಮೋಹನ್ ಮಾತನಾಡಿದರು. 

ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಹೆಚ್.ಎ ಉಮಾಪತಿ ಮಾತನಾಡಿ, ಬಿಜೆಪಿ ಮುಖಂಡ ರಾದ ಯಡಿಯೂರಪ್ಪನವರು ಹೊನ್ನಾಳಿಯ ಮಿಲ್ ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದ್ದು ಅವರ ಅವಧಿಯಲ್ಲಿ  ಕೆಲಸ ಮಾಡಿದ ಇತರರು ಈಗಲೂ ಕೂಲಿ ಕೆಲಸ ಮಾಡುತ್ತಲೇ ಇದ್ದಾರೆ. ಭ್ರಷ್ಟಾಚಾರ ಎಂದರೆ ಏನು ಎಂಬುದು ಬಿಜೆಪಿ ನಾಯಕರಿಂದಲೇ ತಿಳಿಯಬೇಕಿದೆ ಎಂದು ಮಾರ್ವಿಕವಾಗಿ ಹೇಳಿದರು.

ಹೊನ್ನಾಳಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗಪ್ಪ, ಮಹಿಳಾ ತಾಲ್ಲೂಕು ಅಧ್ಯಕ್ಷರಾದ ಪುಷ್ಪಾ ರವೀಶ್, ಮುಖಂಡರಾದ ಆರ್.ಚಂದ್ರಶೇಖರ್, ವಾಜಿದ್, ಡಿ.ಜೆ.ವಿಶ್ವನಾಥ್, ಶಿವರಾಜ್ ನಾಯಕ್, ಶೇಖರಪ್ಪ, ಅರಕೆರೆ ಮಧು ಗೌಡ ಇನ್ನಿತರರು ಮಾತನಾಡಿದರು. 

ತಹಶೀಲ್ದಾರ್ ಪಟ್ಟರಾಜೇಗೌಡ‌ ಅವರಿಗೆ ಮನವಿ ಸಲ್ಲಿಸಲಾಯಿತು.

error: Content is protected !!