ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ವಿಶ್ವಕ್ಕೆ ಮಾದರಿ

ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ವಿಶ್ವಕ್ಕೆ ಮಾದರಿ

`ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಇಸ್ರೋ ಹಿರಿಯ ನಿವೃತ್ತ ನಿರ್ದೇಶಕ ಡಾ. ಹೆಚ್.ಡಿ ಆನಂದ್

ದಾವಣಗೆರೆ, ಆ. 23- ಬಾಹ್ಯಕಾಶ ಕ್ಷೇತ್ರದಲ್ಲಿನ ಭಾರತದ ಸಾಧನೆ ವಿಶ್ವಕ್ಕೆ ಮಾದರಿ. ಇಸ್ರೋದ ಬಹುತೇಕ ಸಾಧನೆಗಳು ಭಾರತದ ಕೀರ್ತಿಯನ್ನು ಹೆಚ್ಚಿಸಿವೆ ಎಂದು ಇಸ್ರೋದ ನಿವೃತ್ತ ಹಿರಿಯ ನಿರ್ದೇಶಕ ಡಾ. ಹೆಚ್.ಡಿ. ಆನಂದ್ ಹೇಳಿದರು.

ನಗರದ ಶ್ರೀ ತರಳಬಾಳು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಜಿಲ್ಲಾ ಪಂಚಾಯತ್ ದಾವಣಗೆರೆ ಇವರ ಸಹಯೋಗದಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ದಿನದ ಅಂಗವಾಗಿ ಏರ್ಪಡಿಸಿದ್ದ `ರಾಷ್ಟ್ರೀಯ ಬಾಹ್ಯಾಕಾಶ ದಿನ-2024′ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸಿದ ನಂತರ ಭಾರತದ ವಿಜ್ಞಾನಿಗಳು ಬಾಹ್ಯಾ ಕಾಶ ಸಂಶೋಧನೆಗಳ ಮೇಲೆ ಹೆಚ್ಚು ನಿಗಾವಹಿಸಲು ಸಾಧ್ಯವಾಗಿದೆ ಎಂದರು.

ಖಾಸಗಿಯವರು ಮುಂದೆ ಬಂದರೆ ಮಾತ್ರ ಸಂವಹನ ಸ್ಯಾಟಲೈಟ್ ಗಳ ಉಡಾವಣೆ ಮಾಡಲಾಗುತ್ತದೆ. ಈ ಹಿಂದೆ ಒಂದು ಉಪಗ್ರಹ ಸಿದ್ಧಪಡಿಸಿ, ಉಡಾವಣೆ ಮಾಡಲು 800 ಕೋಟಿ ರೂ. ವೆಚ್ಚ ತಗುಲುತ್ತಿತ್ತು. ಉಡಾವಣೆಗೆ ಸಾರ್ವಜನಿಕರ ಹಣ ಬಳಕೆ ಮಾಡಲಾಗುತ್ತಿತ್ತು ಎಂದು ಹೇಳಿದರು.

ಇಸ್ರೋ ಮೊದಲಿನಂತೆ ಇಲ್ಲ. ಈ ಸಂಸ್ಥೆ ಖಾಸಗಿಯವರ ಸಂಶೋಧನೆಗಳಿಗೂ ಮುಕ್ತವಾಗಿದೆ. ಖಾಸಗೀಕರಣ ಮಾಡಿದ ನಂತರ ಇಸ್ರೋದ ಸಾಂಸ್ಥಿಕ ಸೌಲಭ್ಯಗಳನ್ನು ಬಳಸಿಕೊಂಡು ಖಾಸಗಿಯವರು ಸಹ ತಮ್ಮ ಉಪಗ್ರಹಗಳನ್ನು ಉಡಾವಣೆ ಮಾಡಬಹುದಾಗಿದೆ ಎಂದು  ತಿಳಿಸಿದರು.

ಖಾಸಗಿ ಸಹಭಾಗಿತ್ವ ಪ್ರಾರಂಭವಾದ ನಂತರ ಭಾರತದ ಎಲ್ಲಾ ಸ್ಯಾಟಲೈಟ್ ಗಳ ಮರು ನಾಮಕರಣ ಆಗಿದೆ. ಇಸ್ರೋ ಬೇರೆ ದೇಶಗಳ ಉಪಗ್ರಹಗಳ ಸಿದ್ಧಪಡಿಸುವಿಕೆ ಮತ್ತು ಉಡಾವಣೆಗೆ ನೆರವಾಗುತ್ತಿದೆ ಎಂದು ಹೇಳಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆದು ಬಂದ ದಾರಿ ಮತ್ತು ವಿಜ್ಞಾನಿಗಳ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇಸ್ರೋದ ಸಾಧನೆಗಳು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದು, ಕೇವಲ ಬಾಹ್ಯಾಕಾಶ ಸಂಶೋಧನೆಗೆ ಸೀಮಿತ ವಾಗಿದ್ದ ಇಸ್ರೋ ಇದೀಗ ಆರ್ಥಿಕವಾಗಿ ದೇಶವನ್ನು ಬಲಾಢ್ಯಗೊಳಿಸಲು ಮುಂದಾಗಿದೆ ಎಂದರು.

ತರಳಬಾಳು ಜಗದ್ಗುತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಸ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್. ಜಗದೀಶ್, ತರಳಬಾಳು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶ್ರೀಕುಮಾರ ಹಿಂಡಸಗಟ್ಟೆ, ಜಿಲ್ಲಾ ಪಂಚಾಯತಿ ಯೋಜನಾ ಸಹಾಯಕ ಎ.ಜೆ.ಆನಂದ್, ಶಿಕ್ಷಕ ವಾಗೀಶ ಪಂಡಿತಾರಾಧ್ಯ , ಆರ್. ಶರತ್ ಮತ್ತಿತರರು ಭಾಗವಹಿಸಿದ್ದರು.

error: Content is protected !!