ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಿ.ಸಿ. ಮಾಧುಸ್ವಾಮಿ ಸಲಹೆ
ದಾವಣಗೆರೆ, ಆ. 25- ಸಮಾಜದಲ್ಲಿ ಉಳ್ಳವರನ್ನು ಗುರುತಿಸಿ, ಸಂಘಟಿಸಿ ಅವರ ಸಹಕಾರದಿಂದ ಅಶಕ್ತರಿಗೆ ನೆರವು ನೀಡುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಜಿ.ಸಿ. ಮಾಧುಸ್ವಾಮಿ ಸಲಹೆ ಹೇಳಿದರು.
ಭಾನುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ (ರಿ.)ದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾರ ವಿರುದ್ಧವೋ ಹೋರಾಡಲು ಅಥವಾ ಯಾರದ್ದೋ ಸಮಾಜದ ಪರ್ಯಾಯವಾಗಿ ಈ ಸಂಘಟನೆ ಎಂದು ತಿಳಿಯಬಾರದು. ಎಲ್ಲಾ ಸಮಾಜದವರೂ ನಮ್ಮ ಬಂಧುಗಳು. ಅವರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು ಎಂದರು.
ದೇವರು ಎಲ್ಲರಿಗೂ ಸಮಾನವಾಗಿ ಹಂಚಿರುವುದಿಲ್ಲ. ಸಮಾಜದಲ್ಲಿ ಇದ್ದವರ ಜೊತೆ ಇಲ್ಲದವರೂ ಇರುತ್ತಾರೆ. ಸಮಾಜದವರ ಪ್ರತಿ ಮನೆಗೂ ತೆರಳಿ ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿಯ ಸರ್ವೇ ನಡೆಸಬೇಕು. ಉಳ್ಳವರ ನೆರವು ಪಡೆದು ಬಡವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಕಿವಿ ಮಾತು ನೀಡಿದರು.
ಓದು-ಬರಹ ಬರದಿದ್ದರೂ ಹೆತ್ತವರ ತೃಪ್ತಿಗೆ ಮಕ್ಕಳಿಗೆ ಎ ಪ್ಲಸ್ ಗ್ರೇಡ್ ಕೊಟ್ಟರೆ ಮಕ್ಕಳ ಭವಿಷ್ಯವೇನು? ಎಂದು ಪ್ರಶ್ನಿಸಿದ ಅವರು, ಸಭ್ಯತೆ, ವಿನಯತೆ ಹೆಸರಿನಲ್ಲಿ ನಮ್ಮ ಮಕ್ಕಳ ಶಕ್ತಿ ಕುಂದಿಸುತ್ತಿದ್ದೇವೆ. ಪರಾವಲಂಬಿ ಜೀವನದಲ್ಲಿ ಬೆಳೆಯುವಂತಹ ಸ್ಥಿತಿ ನಿರ್ಮಿಸಿದ್ದೇವೆ. ಉತ್ತಮ ಶಿಕ್ಷಣದ ಮೂಲಕ ನಮ್ಮ ಪಾಲು ಪಡೆಯಲು ಸಮರ್ಥವಾಗಿ ಹೋರಾಡುವಂತೆ ಮಕ್ಕಳನ್ನು ಬೆಳೆಸಬೇಕಿದೆ ಎಂದರು.
ದೇಶ ಅಭಿವೃದ್ಧಿ ಹೊಂದಿದೆ ಎಂದು ನಾವೆಲ್ಲಾ ಭಾಷಣ ಮಾಡುತ್ತೇವೆ. ಆದರೆ ನಾವು ಪ್ರಗತಿ ಹೊಂದಿದ ರಾಷ್ಟ್ರಗಳಿಗಿಂತ 20 ವರ್ಷ ಹಿಂದಿದ್ದೇವೆ. ವೈಜ್ಞಾನಿಕ ಸಂಶೋಧನೆಗಳು ಭಾರತ ದಲ್ಲಿ ಸತ್ತು ಹೋಗಿವೆ. ತಾಂತ್ರಿಕವಾಗಿ ಪ್ರಗತಿ ಹೊಂದುತ್ತಿದ್ದೇವೆ. ಆದರೆ ಸಾಮಾನ್ಯ ವಿಜ್ಞಾನದ ಅರಿವಿಲ್ಲ. ಸಂಶೋಧನೆಗಳನ್ನು ಕೇವಲ ನಕಲು ಮಾಡಲಾಗುತ್ತಿದೆ. ಸಂಶೋಧನೆ ಇಲ್ಲದೆ ತಂತ್ರಜ್ಞಾನ ಸಮೃದ್ಧಿಯಾಗುವುದಿಲ್ಲ ಎಂದು ಹೇಳಿದರು.
ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದ ಕಾರ್ಯದರ್ಶಿ ಡಾ. ಇ. ವಿರೂಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಸಮಾಜವನ್ನು ಸಂಘಟಿತಗೊಳಿಸಿ, ಹಿಂದುಳಿದವರ ನ್ನು ಮುಖ್ಯವಾಹಿನಿಗೆ ತರಲು, ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸಂಘ ಸ್ಥಾಪಿಸಲಾಗಿದೆ ಎಂದರು.
ಹಳೇಬೀಡು ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಘದ ಜಿಲ್ಲಾಧ್ಯಕ್ಷ ಡಾ.ಅಶೋಕ್ ಕುಮಾರ್ ವೀ.ಪಾಳೇದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಎಸ್.ಎಸ್. ಕೆಂಪಗೌಡರ ಹಾಗೂ ಸಂಘದ ಪದಾಧಿಕಾರಿಗಳಾದ ಭವನೇಶ್ವರ ಎಂ.ಸಿ., ರಾಕೇಶ್ ಬಿ.ಸಿ., ಟಿ.ಎ. ಕುಸಗಟ್ಟಿ, ಮೌನೇಶಪ್ಪ ಎಸ್.ಪಿ., ಮಂಜುನಾಥ ಪಾಟೀಲ್, ಸಂತೀಶ್ ಸಣ್ಣಗೌಡ ಹಿಂಡೇರ್, ದಿನೇಶ್ ಕುಮಾರ್ ಎನ್.ಆರ್., ಪ್ರಕಾಶ್ ಎನ್.ಜಿ., ಶಾಂತರಾಜ್ ಕೆ.ಜಿ., ಹನುಮನಗೌಡ ಐ., ಕೆ.ಎಸ್. ನಾಗರಾಜ್, ನಿಜಲಿಂಗಸ್ವಾಮಿ ಬಿ.ಎಸ್., ಚನ್ನಪ್ಪಗೌಡ ಹೆಚ್.ಪಿ. ಇತರರು ಉಪಸ್ಥಿತರಿದ್ದರು. ಜಿ.ಎಂ. ರುದ್ರಗೌಡ ಸ್ವಾಗತಿಸಿದರು.
ಜ್ಯೋತಿ ದೇವರಮನೆ ಪ್ರಾರ್ಥಿಸಿದರು. ಹೆಚ್.ಎಸ್. ಪಾಟೀಲ್ ಸ್ವಾಗತ ಗೀತೆ ಹಾಡಿದರು.