ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ
ದಾವಣಗೆರೆ, ಆ. 25 – ದುಶ್ಚಟಗಳು ಹಾಗೂ ವ್ಯಸನಗಳಿಂದ ಮುಕ್ತವಾಗಲು ಕಂಕಣ ತೊಡುವುದೇ ರಕ್ಷಾಬಂಧನ ಎಂದು ಈಶ್ವ ರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರತಿಪಾದಿಸಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಶಿವಧ್ಯಾನ ಮಂದಿರದಲ್ಲಿ ಇಂದು ಆಯೋಜಿಸ ಲಾಗಿದ್ದ ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ಷಾ ಬಂಧನವು ಸಹೋದರ ಹಾಗೂ ಸಹೋದರಿಯರ ನಡುವಿನ ನಿರ್ಮಲ ಪ್ರೀತಿಯ ಹಬ್ಬವಾಗಿದೆ. ಅಲ್ಲದೇ, ಪರಮಾತ್ಮನ ರಕ್ಷಣೆ, ಆಶೀರ್ವಾದ ಹಾಗೂ ವರದಾನ ಎಲ್ಲರಿಗೂ ಸಿಗಲಿ ಎಂದು ರಕ್ಷಾಬಂಧನ ಆಚರಿಸಲಾಗುತ್ತದೆ. ರಕ್ಷಾಬಂಧನದ ಕಂಕಣ ಕಟ್ಟಿಸಿಕೊಳ್ಳುವವರು ವಚನ ಬದ್ಧರಾಗುತ್ತಾರೆ ಎಂದರು.
ಅಂತರಂಗದ ಚೈತನ್ಯ ಹಾಗೂ ಆತ್ಮಜ್ಯೋತಿಯನ್ನು ನೆನಪು ಮಾಡಿಕೊಳ್ಳುವ, ಯಾರಿಗೂ ನೋವು ನೀಡದೆ ಹೂವಿನ ಪರಿಮಳದಂತಿರುವ ಹಾಗೂ ದೈವೀ ಗುಣ ಹೊಂದುವುದರ ಸಂಕೇತ ರಕ್ಷಾಬಂಧನದಲ್ಲಿದೆ ಎಂದೂ ಅವರು ತಿಳಿಸಿದರು.
ಸಹೋದರ ಭಾವ ಕೇವಲ ಒಡಹುಟ್ಟಿ ದವರಿಗೆ ಸೀಮಿತವಲ್ಲ. ಮಹಾಭಾರತದಲ್ಲಿ ಕಂಸ ತನ್ನ ಸಹೋದರಿ ದೇವಕಿಯನ್ನೇ ಹಿಂಸಿಸಿದ್ದ. ಶ್ರೀಕೃಷ್ಣ ತನ್ನ ಸ್ವಂತ ತಂಗಿಯಲ್ಲದ ದ್ರೌಪದಿಗೆ ಅಕ್ಷಯ ವಸ್ತ್ರ ನೀಡಿ ನೆರವಾಗಿದ್ದ ಎಂದು ಲೀಲಾಜಿ ಹೇಳಿದರು.
ಬಂಧನ ಯಾರಿಗೂ ಇಷ್ಟವಾಗುವುದಿಲ್ಲ. ಪ್ರಾಪಂಚಿಕ ಬಂಧನದಿಂದ ಮುಕ್ತವಾಗಲು ಎಲ್ಲರೂ ಬಯಸುತ್ತಾರೆ. ಆದರೂ, ಸಂಯಮ ಹಾಗೂ ನಿಯಮಗಳ ಬಂಧನ ಅತ್ಯಗತ್ಯ. ಇಂತಹ ಬಂಧನಕ್ಕೆ ಧರ್ಮ ಎಂದು ಕರೆಯಲಾಗುತ್ತದೆ ಎಂದವರು ತಿಳಿಸಿದರು.
ಕೇವಲ ಕುರುಕ್ಷೇತ್ರದಲ್ಲಿ ಮಾತ್ರ ಮಹಾಭಾರತದ ಯುದ್ಧ ಸಂಭವಿಸಿತ್ತು ಎಂದು ಭಾವಿಸಬಾರದು. ಪ್ರತಿಯೊಬ್ಬರ ಮನಸ್ಸಿನಲ್ಲಿ ಪ್ರತಿದಿನ ಸದ್ಗುಣ ಹಾಗೂ ದುರ್ಗಣಗಳ ನಡುವೆ ಯುದ್ಧ ನಡೆಯುತ್ತದೆ. ಪಾಂಡವರಂತೆ ಸದ್ಗುಣಗಳನ್ನು ಬೆಳೆಸಿಕೊಂಡಾಗ, ನಮ್ಮ ಮನಸ್ಸಿನಲ್ಲಿ ನಡೆಯುವ ಯುದ್ಧದಲ್ಲಿ ಒಳ್ಳೆಯ ವಿಚಾರಗಳೇ ಸದಾ ಗೆಲ್ಲುತ್ತವೆ ಎಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಕಣ್ಣುಗಳಿಗೆ ನೈತಿಕತೆಯ ಪರದೆ ಹಾಕಿಕೊಂಡಾಗ ಸಮಾಜದಲ್ಲಿ ಒಳ್ಳೆಯವರಾಗಿ ನಡೆದುಕೊಳ್ಳಲು ಸಾಧ್ಯ ಎಂದರು.
ಸಂಸಾರದ ಬಂಧನದಲ್ಲಿ ನಾವೆಲ್ಲ ಇದ್ದೇವೆ. ಆದರೂ, ಸಹೋದರತ್ವ, ಸ್ನೇಹ ಹಾಗೂ ಅಧ್ಯಾತ್ಮಗಳಂತಹ ಗುಣಗಳು ನಮ್ಮನ್ನು ಬಂಧಮುಕ್ತಗೊಳಿಸುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿಟ್ಟುವಳ್ಳಿ ಶಾಖೆ ಸಂಚಾಲಕರಾದ ಬ್ರಹ್ಮಾಕುಮಾರಿ ರಾಜೇಶ್ವರಿ, ಬ್ರಹ್ಮಾಕುಮಾರಿ ಸಂಸ್ಥೆಯು ಅಧ್ಯಾತ್ಮಿಕ ಜ್ಞಾನವನ್ನು ಶಿಕ್ಷಣ ರೂಪದಲ್ಲಿ ನೀಡುತ್ತಿದೆ. ಜ್ಞಾನ, ಯೋಗ, ಧಾರಣೆ ಹಾಗೂ ಸೇವೆಗಳನ್ನು ಕಲಿಸುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಕಡೂರಿನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಞಾನೇಶ್ವರಿ, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಡಾ. ಸಂಪನ್ನ ಮುತಾಲಿಕ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಂತ ವೈದ್ಯ ಡಾ. ಎಂ.ಸಿ. ಶಶಿಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅವರುಗಳು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದರು.
ದಂತವೈದ್ಯೆ ಹಾಗೂ ಲೇಖಕಿ ಡಾ. ರೂಪಶ್ರೀ ಶಶಿಕಾಂತ್ ಉಪನ್ಯಾಸ ನೀಡಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಕೂಟದ ಖಜಾಂಚಿ ಪವನ್ ಐರಣಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಎಸ್. ಲೋಕೇಶ್ ಹಾಗೂ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳಿಗೆ ಗೌರವ ರಕ್ಷೆ ನೀಡಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಸ್ವಾಗತಿಸಿದರು. ಡಾ. ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು. ರಾಜಯೋಗ ಶಿಕ್ಷಕಿ ಬ್ರಹ್ಮಾಕುಮಾರಿ ಶಾಂತಾ ವಂದಿಸಿದರು.