ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು
ಬಸವಾಪಟ್ಟಣ, ಆ. 25 – `ಲೋಕಾ ಸಮಸ್ತ ಸುಖಿನೋ ಭವಂತು’ ಎಂಬ ಭಾವವನ್ನು ಸರ್ವರು ತಮ್ಮ ಬಾಳಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದ ಮೌಲ್ಯಗಳು ವಿಕಸಿಸಬಲ್ಲವು. ಬದುಕು ಬದಲಾಗಬೇಕಾದರೆ ನಮ್ಮ ಜೀವನದ ಹೆಜ್ಜೆಗಳ ದಾರಿಯು ಉತ್ತಮ ರೀತಿಯಲ್ಲಿ ಬದಲಾಗಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಬಸವಾಪಟ್ಟಣ ಗ್ರಾಮದಲ್ಲಿ 12 ಕೋಟಿ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಸಮುದಾಯ ಭವನದ ಲೋಕಾರ್ಪಣೆ ಹಾಗೂ ಲಿಂಗೈಕ್ಯ ಶ್ರೀಗಳ 4 ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಮನುಷ್ಯನ ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯಬಲ್ಲವು.ಸಾಮಾನ್ಯವಾಗಿ ಕೆಲಸವನ್ನು ಅತ್ಯುತ್ತಮವಾಗಿ ಮಾಡುವ ಮೂಲಕ ಅದರಿಂದ ಶ್ರೇಷ್ಠ ಪ್ರತಿಫಲವನ್ನು ಪಡೆಯಬಹುದು. ಅದಕ್ಕೆ ಉತ್ತಮವಾದ ನಿದರ್ಶನ ಈ ಹಾಲಸ್ವಾಮಿ ಸಮುದಾಯ ಭವನ ಎಂದು ವಿಶ್ಲೇಷಿಸಿದರು.
ಚನ್ನಗಿರಿಯ ಕೇದಾರಲಿಂಗ ಶಿವಶಾಂತವೀರ ಶ್ರೀಗಳು ಮಾತನಾಡಿ ಆಧುನಿಕತೆ ಬೆಳೆದಂತೆ ನಮ್ಮ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಬದುಕಿನಲ್ಲಿ ಉತ್ತಮ ಗುಣ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾಗಿದ್ದು, ನಮ್ಮ ಬದುಕಿನಲ್ಲಿ ಭಕ್ತಿ, ಶ್ರದ್ಧೆ ಮತ್ತು ಕಾಯಕ ತತ್ವಗಳನ್ನು ಬೆಳೆಸಿಕೊಂಡು ಆದರ್ಶ ಸಮಾಜವನ್ನು ನಿರ್ಮಿಸಲು ಮುಂದಾಗುವಂತೆ ತಿಳಿಸಿದರು.
ಗವಿಮಠದ ಶ್ರೀ ಶಿವಕುಮಾರ ಹಾಲಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಸವಂತಪ್ಪ, ಮಾಜಿ ಸಚಿವ ರೇಣುಕಾಚಾರ್ಯ, ಗ್ರಾ.ಪಂ.ಅಧ್ಯಕ್ಷ ಬಿ.ಜಿ.ಸಚಿನ್, ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಕಾಂಗ್ರೆಸ್ ಮುಖಂಡ ಬಿ.ಜಿ. ನಾಗರಾಜ್, ಗವಿಮಠದ ಸಂಚಾಲಕ ಕೆ.ಎಂ. ವೀರಯ್ಯ, ಉಪಾಧ್ಯಕ್ಷ ಕೆ. ರುದ್ರಪ್ಪ, ರೈತ ಮುಖಂಡ ತೇಜಸ್ವಿ ಪಟೇಲ್, ನಿವೃತ್ತ ಸಿಟಿಓ ಅನ್ವರ್ ಪಾಷಾ, ಶಿಕ್ಷಕ ಎಂ.ಬಿ. ನಾಗರಾಜ್, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ ಬಸವರಾಜ್, ಸದಸ್ಯರಾದ ಡಿ.ಆರ್. ಹಾಲೇಶ್, ಎಂ.ಎಸ್. ರಮೇಶ್, ರಫೀಕ್ ಅಹಮದ್, ಶೋಭಾ , ಮರಗಾಲ್ ಜಯಣ್ಣ, ಕೋಗಲೂರು ಜಗದೀಶ್‌ಗೌಡ, ಹರಲೀಪುರ ಸತೀಶ್ ಪಟೇಲ್, ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರಗೌಡ, ಎಂ. ಬಸವಲಿಂಗಯ್ಯ, ಕೆ.ಎಂ. ಅಜ್ಜಯ್ಯ, ಮಂಜುನಾಥ್ ಪೂಜಾರ್, ಬಿ.ಕೆ. ಕುಮಾರಸ್ವಾಮಿ, ಕೆ.ಶಾಂತರಾಜ್ ಮತ್ತಿತರರು ಇದ್ದರು.