ಎಸ್ಸಿಪಿ – ಟಿಎಸ್ಪಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿಸಿ ಸೂಚನೆ
ದಾವಣಗೆರೆ, ಆ. 22 – ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಸಮಾಜಕ್ಕೆ ಆಸ್ತಿಯಾಗಬೇಕು. ಕಟ್ಟಡಗಳ ಕಾಮಗಾರಿಗಳು ಅರೆಬರೆಯಾಗಿ ಬಾರಾ ಕಮಾನ್ನಂತೆ ಆಗುವುದು ಬೇಡ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಎಸ್ಸಿಪಿ – ಟಿಎಸ್ಪಿ ಯೋಜನೆಯ ಪ್ರಗತಿ ವಿವರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸಿಪಿ – ಟಿಎಸ್ಪಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಪೂರ್ಣ ಗೊಂಡ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲು ಅಧಿಕಾರಿಗಳು ಕ್ರಮ ತೆಗೆದು ಕೊಳ್ಳಬೇಕು ಎಂದು ತಿಳಿಸಿದರು.
ಪರಿಶಿಷ್ಟರ ವೈಯಕ್ತಿಕ ಅನುದಾನ ಸಂಪೂರ್ಣ ಬಳಕೆಯಾಗುತ್ತದೆ. ಆದರೆ, ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಟೆಂಡರ್ ವಿಳಂಬ, ಕಾಮಗಾರಿ ವಿಳಂಬ, ಜಾಗದ ಸಮಸ್ಯೆ, ಅನುದಾನ ವಿಳಂಬ ಇತ್ಯಾದಿಗಳ ಕಾರಣದಿಂದ ಕಾಮಗಾರಿಗಳು ತಡವಾಗುತ್ತಿವೆ. ಅವು ಬಾರಾ ಕಮಾನ್ನಂತೆ ನಿಂತು ಬಿಡುತ್ತವೆ. ಈ ರೀತಿ ಆಗದೇ, ಕಾಮಗಾರಿಗಳು ಸಮಾಜಕ್ಕೆ ಆಸ್ತಿಯಾಗಿ ಬಳಕೆಯಾಗಬೇಕು ಎಂದು ಹೇಳಿದರು.
ರಂಗಮಂದಿರ ಕಾಮಗಾರಿ ಪೂರ್ಣಗೊಳಿಸಲು ಕ್ರಮ
ನಾನು ಕೆ.ಆರ್.ಐ.ಡಿ.ಎಲ್.ನಲ್ಲಿದ್ದಾಗ ದಾವಣಗೆರೆ ಜಿಲ್ಲಾ ರಂಗಮಂದಿರ ನಿರ್ಮಾಣ ಅಪೂರ್ಣವಾಗಿತ್ತು. ಈಗ ಜಿಲ್ಲಾಧಿಕಾರಿಯಾಗಿ ಬಂದರೂ ಕಾಮಗಾರಿ ಅರ್ಧಕ್ಕೇ ನಿಂತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಕಾಮಗಾರಿ ಗಳು ಬಾರಾ ಕಮಾನ್ ರೀತಿ ಅರೆಬರೆಯಾಗಿ ನಿಲ್ಲುವುದಕ್ಕೆ ರಂಗಮಂದಿರವೂ ಒಂದು ಉದಾಹರಣೆ ಎಂದರು. ಈ ಕಾಮಗಾರಿಗೆ ಅನುದಾನದ ಅಗತ್ಯವಿದೆ. ಈ ಕಾಮಗಾರಿ ಯನ್ನು ಪೂರ್ಣಗೊಳಿಸಲು ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ವೈಯಕ್ತಿಕ ಫಲಾನುಭವಿಗಳನ್ನು ತ್ವರಿತವಾಗಿ ಆಯ್ಕೆ ಮಾಡಿದರೆ, ನಿಗದಿತ ಸಮಯದಲ್ಲಿ ಅನುದಾನ ಬಳಸಿಕೊಳ್ಳಲು ಸಾಧ್ಯ. ಹೀಗಾಗಿ ಫಲಾನುಭವಿಗಳ ಆಯ್ಕೆಗೆ ತ್ವರಿತವಾಗಿ ಅರ್ಜಿ ಕರೆಯಬೇಕು ಹಾಗೂ ಆಯ್ಕೆಯನ್ನು ಸಂಬಂಧಿಸಿದವರ ಜೊತೆ ಚರ್ಚಿಸಿ ಅಂತಿಮಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಪರಿಶಿಷ್ಟರ ಹಣ ಬಳಕೆ ಮಾಡದೇ ಇರುವುದು ಕಾಯ್ದೆಯ ಪ್ರಕಾರ ಅಪರಾಧ. ಪರಿಶಿಷ್ಟರ ಕಾಮಗಾರಿಗಳಿಗೆ ಹಣ ಬಳಕೆ ಮಾಡದೇ ಇರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಹೀಗಾಗಿ ಕಾಲಮಿತಿಯಲ್ಲಿ ಅನುದಾನ ಬಳಕೆ ಮಾಡಬೇಕು. ಒಂದು ವೇಳೆ ಅನುದಾನ ಬಂದಿಲ್ಲ ಎಂದರೆ, ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಗಂಗಾಧರಸ್ವಾಮಿ ಹೇಳಿದರು.
ಎಸ್ಸಿಪಿ – ಟಿಎಸ್ಪಿ ಯೋಜನೆಯ ಪ್ರಗತಿ ವರದಿಯನ್ನು ಸಂಬಂಧಿಸಿದ ವೆಬ್ ತಾಣಗಳಲ್ಲಿ ದಾಖಲಿಸಬೇಕು. ವೈಯಕ್ತಿಕ ಫಲಾನುಭವಿಯ ಮಾಹಿತಿಯನ್ನು ಆಪ್ಗಳ ಮೂಲಕ ಅಪ್ಡೇಟ್ ಮಾಡಬೇಕು ಎಂದವರು ತಿಳಿಸಿದರು.
ಎಸ್.ಸಿ.ಪಿ, ಟಿ.ಎಸ್.ಪಿ. ಕ್ರಿಯಾ ಯೋಜನೆಯನ್ವಯ ಜಿಲ್ಲೆಗೆ 345.5 ಕೋಟಿ ರೂ.ಗಳಷ್ಟು ಅನುದಾನ ನಿಗದಿ ಮಾಡಿದ್ದು ಇದರಲ್ಲಿ 125.31 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿ 98.82 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಡಾ. ಮಹಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಡಿಡಿಪಿಐ ಜಿ. ಕೊಟ್ರೇಶ್ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.