ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಆದರ್ಶಗಳು ಯುವ ಪೀಳಿಗೆಗೆ ತಲುಪಲಿ

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಆದರ್ಶಗಳು ಯುವ ಪೀಳಿಗೆಗೆ ತಲುಪಲಿ

ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಆಶಯ

ಜಗಳೂರು, ಆ. 20 – ಸಾಮಾಜಿಕ‌ ನ್ಯಾಯಕ್ಕೆ ಅಡಿಪಾಯ ಹಾಕಿದ ದೂರದೃಷ್ಟಿಯ ನಾಯಕ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ  ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಸ್ಥಿರದಲ್ಲಿ ಶೋಷಿತ ಮತ್ತು ಮೇಲ್ವರ್ಗದವರ ಮಧ್ಯೆ ಅಸಮಾನತೆ, ಶೋಷಣೆ, ಅಸ್ಪೃಶ್ಯತೆ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಶೋಷಿತ, ಹಿಂದುಳಿದ ವರ್ಗದವರಿಗೆ ಸಮಾನತೆ, ಮೀಸಲಾತಿ ಒದಗಿಸಿದ ಧೀಮಂತ ರಾಜಕಾರಣಿ ದೇವರಾಜ್ ಅರಸು ಅವರ ಕೊಡುಗೆಯನ್ನು ಭಾಷಣದಲ್ಲಿ ಆಲಿಸಿ ಮರೆತರೆ ಪ್ರಯೋಜನವಿಲ್ಲ.ಪ್ರತಿನಿತ್ಯ ಸ್ಮೃತಿ ಪಟಲದಲ್ಲಿ ಪುನರಾವರ್ತನೆಗೊಳ್ಳಬೇಕಿದೆ ಎಂದರು.

ಕಳೆದ 50 ವರ್ಷಗಳ‌ ಹಿಂದೆ ತಾಲ್ಲೂಕಿನಲ್ಲಿ ಜೀವಂತವಾಗಿದ್ದ ಮನುಕುಲವೇ ತಲೆತಗ್ಗಿಸುವಂತಹ ದಲಿತರು ಮಲಹೋರುವ ಪದ್ದತಿಯನ್ನು ನಾನು ಬಾಲ್ಯಾವಸ್ಥೆಯಲ್ಲಿ ಕಣ್ಣಾರೆ ಕಂಡಿರುವೆ. ಇಂತಹ ಅನಿಷ್ಠ ಪದ್ದತಿ ನಿಷೇಧಗೊಳಿಸಿದ ದೇವರಾಜ ಅರಸು ಅವರ ಆಡಳಿತ ವೈಖರಿಯನ್ನು ಮನಗಂಡು ಪ್ರಸಕ್ತ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಲಿತ, ಹಿಂದುಳಿದ ಸಮುದಾಯಗಳು ಜಾಗೃತರಾಗಿ ಮೀಸಲಾತಿ ಸದುಪಯೋಗ ಪಡೆದುಕೊಂಡು ಭವಿಷ್ಯರೂಪಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಖಡ್ಗಕ್ಕಿಂತ ಲೇಖನಿ ಹರಿತವಾದದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಡಿ ಲೇಖನಿಯಿಂದ  ಗುರಿ ಸಾಧಿಸಬೇಕಿದೆ. ಬಡತನದಲ್ಲಿ ಜನಿಸಿದ ನಾನು ಪ್ರೌಢಹಂತದಲ್ಲಿರುವಾಗಲೇ ಕಷ್ಟ‌ಅನುಭವಿಸಿದೆ. ಖಡ್ಗಕ್ಕಿಂತ ಹರಿತವಾದ ಲೇಖನಿ ನನ್ನನ್ನು ಶಾಸಕನನ್ನಾಗಿ ಆಯ್ಕೆಗೊಳಿಸಿತು ಎಂದು ಮಾರ್ಮಿಕವಾಗಿ ನುಡಿದರು.

ಜಗಳೂರು ಉತ್ಸವ ಆಚರಣೆ : ಐತಿಹಾಸಿಕ ಜಗಳೂರು ಕೆರೆ 50 ವರ್ಷದ ಹಿಂದೆ ಕೋಡಿ ಬಿದ್ದಿದ್ದ ನೆನಪಿದೆ. ಇದೀಗ ಕೋಡಿ ಬೀಳುವ ಹಂತದಲ್ಲಿದೆ.ಕೋಡಿ ಬಿದ್ದ ನಂತರ ಸ್ಮರಣೆಗಾಗಿ ಜಗಳೂರು ಉತ್ಸವ ಆಚರಿಸಲಾಗುವುದು ಎಂದರು.

ವಕೀಲ ಹಾಗೂ ಪತ್ರಕರ್ತ   ಡಿ.ಶ್ರೀನಿವಾಸ್ ಉಪನ್ಯಾಸ ನೀಡಿ, ಮೈಸೂರು ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿದ ದೇವರಾಜ ಅರಸು ಅವರು ಮೈಸೂರು ಅರಸರ ಸಂಬಂಧಿಗಳಾಗಿದ್ದರೂ ಕೂಡ ವೈಭೋಗದ ಜೀವನ ಸಾಗಿಸದೆ ಸರಳ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಜಾತ್ಯತೀತ, ನಿಷ್ಪಕ್ಷಪಾತ ಸೇವೆಯನ್ನು ಗುರುತಿಸಿ ಅವಿರೋಧವಾಗಿ ಶಾಸಕರಾಗಿ ಆಯ್ಕೆಯಾದರು.ನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮುತ್ಸದ್ದಿ ರಾಜಕಾರಣಿ ಎಂದು ಪ್ರಶಂಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ, ತಾ.ಪಂ‌. ಇಓ ಕೆಂಚಪ್ಪ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಪ.ಪಂ‌.ಸದಸ್ಯರಾದ ರಮೇಶ್ ರೆಡ್ಡಿ, ಲಲಿತ ಶಿವಣ್ಣ, ನಿರ್ಮಲಕುಮಾರಿ, ಲುಕ್ಮಾನ್ ಖಾನ್, ನಾಯಕ‌ ಸಮಾಜದ ತಾಲ್ಲೂಕು ಅಧ್ಯಕ್ಷ ಬಡಯ್ಯ, ಮುಖಂಡರಾದ ಬಿ.ಮಹೇಶ್ವರಪ್ಪ, ಪಲ್ಲಾ ಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಕುಬೇಂದ್ರಪ್ಪ, ಇಂದಿರಾ, ಹಿಂದುಳಿದ ವರ್ಗಗಳ‌ಕಲ್ಯಾಣ ಅಧಿಕಾರಿ ಶಿವಬಸಪ್ಪ ಬಳ್ಳಾರಿ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪೋಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

error: Content is protected !!