ರಾಜ್ಯಕ್ಕೆ ಅರಸು ಕೊಡುಗೆ ಅಪಾರ : ಸಂಸದೆ ಪ್ರಭಾ

ರಾಜ್ಯಕ್ಕೆ ಅರಸು ಕೊಡುಗೆ ಅಪಾರ : ಸಂಸದೆ ಪ್ರಭಾ

ದಾವಣಗೆರೆ, ಆ.20- ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಪರಿವರ್ತನೆಯ ಹರಿಕಾರ ದಿ. ಡಿ. ದೇವರಾಜ್ ಅರಸು ಅವರು ಸರಳ, ಸಜ್ಜನಿಕೆ ವ್ಯಕ್ತಿತ್ವದ, ಹಿಂದುಳಿದ ವರ್ಗಗಳ ಆಶಾಕಿರಣ. ಭೂ ಸುಧಾರಣೆ ಹಾಗೂ ಉಳುವವನೇ ಭೂಮಿ ಒಡೆಯ ಎನ್ನುವ ಕಾನೂನು ಜಾರಿಗೆ ತಂದಿದ್ದರಿಂದ ಹಿಂದುಳಿದ ವರ್ಗದ ಜನರಿಗೆ ಅನುಕೂಲವಾಯಿತು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸುರವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗದವರಿಗೆ ಮೀಸಲಾತಿ ಜಾರಿ ಮಾಡಿದರು. ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳಿಗೆ  ಶೈಕ್ಷಣಿಕ ಅರಿವು ಸಾಲ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್ ಬಸವಂತಪ್ಪ ಮಾತನಾಡಿ,  ಇಂದಿರಾಗಾಂಧಿ ಅವರ ಅನುಯಾಯಿಯಾಗಿದ್ದ ಡಿ. ದೇವರಾಜು ಅರಸು ದಕ್ಷ, ಪ್ರಾಮಾಣಿಕ ಆಡಳಿತಗಾರರಾಗಿ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು.

ರಾಜಕೀಯದಲ್ಲಿ ಮೀಸಲಾತಿ ಜಾರಿಗೆ ತಂದಿದ್ದರಿಂದ ನನ್ನಂತಹ ಬಡ ವರ್ಗದ ವ್ಯಕ್ತಿ ಕೂಡ ಶಾಸಕನಾಗಲು ಸಾಧ್ಯವಾಯಿತು. ದೇವರಾಜ ಅರಸು ಅವರಂತೆ ದಕ್ಷ ಆಡಳಿತವನ್ನು ಸಿದ್ಧರಾಮಯ್ಯ ನಡೆಸುತ್ತಾ ಬರುತ್ತಿದ್ದಾರೆ. ಅರಸು ಹಾಗೂ ಸಿದ್ಧರಾಮಯ್ಯ ಎರಡು ಕಣ್ಣುಗಳಿದ್ದಂತೆ ಎಂದರು. ಉತ್ತಮ ಆಡಳಿತಗಾರರಾಗಿ ಎಸ್.ಸಿ, .ಎಸ್.ಟಿ ಹಾಗೂ ಹಿಂದುಳಿದ ವರ್ಗದ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರು. ಎಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕೆಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ದೇವರಾಜ ಅರಸು ಅವರು ಅನುಷ್ಠಾನಕ್ಕೆ ತಂದ ಜನಪರ ಯೋಜನೆಗಳನ್ನು ಯಾರೂ ಮರೆಯುವಂತಿಲ್ಲ. ಆರ್ಥಿಕ ಸಮಾನತೆಯನ್ನು ತಂದವರು. ಭೂ ಸುಧಾರಣೆ, ಜೀತ ಪದ್ಧತಿ ನಿರ್ಮೂಲನೆ, ಸಮಸಮಾಜ ನಿರ್ಮಾಣಕ್ಕಾಗಿ ಅನೇಕ  ಕಾನೂನುಗಳನ್ನು ಜಾರಿಗೆ ತಂದಿದ್ದರಿಂದ ರಾಜ್ಯದ ಎಲ್ಲ ವರ್ಗದವರಿಗೆ ಅನುಕೂಲವಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಕಲಮರಳ್ಳಿ ಡಿ. ದೇವರಾಜ ಅರಸು ಕುರಿತು ಉಪನ್ಯಾಸ ನೀಡಿದರು.

ವಿವಿಧ ಸಮುದಾಯಗಳ ಮುಖಂಡರಾದ ಎಸ್. ಮಲ್ಲಿಕಾರ್ಜುನ್, ಕತ್ತಲಗೆರೆ ತಿಪ್ಪಣ್ಣ, ಏಕಾಂತಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳಾದ ನವೀನ್ ಮಠದ್, ನಾಗರಾಜ್, ಕೆ.ಹೆಚ್. ಗಾಯತ್ರಿ, ಜಿ. ಕೊಟ್ರೇಶ್, ಹುಲ್ಮನಿ ತಿಮ್ಮಣ್ಣ  ಸೇರಿದಂತೆ ಅನೇಕರಿದ್ದರು. 

error: Content is protected !!