ಹೊನ್ನಾಳಿ: ಭಾರೀ ಮಳೆಗೆ ಆಸ್ಪತ್ರೆ ವಾರ್ಡ್‌ ಜಲಾವೃತ

ಹೊನ್ನಾಳಿ: ಭಾರೀ ಮಳೆಗೆ ಆಸ್ಪತ್ರೆ ವಾರ್ಡ್‌ ಜಲಾವೃತ

ಹೊನ್ನಾಳಿ, ಆ.20- ಮಂಗಳವಾರ ಸಂಜೆ 6.30ರ ವೇಳೆ ಸುರಿದ ಭಾರೀ ಮಳೆಗೆ ಪಟ್ಟಣದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ವಾರ್ಡ್‍ಗಳು ಜಲಾವೃತವಾಗಿದೆ.

 ಈ ಹಿಂದೆ ಮಳೆ ಬಂದ ಸಂದರ್ಭಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ನೀರು ಹೋಗುವ ಜಾಗದಲ್ಲಿ ಆಸ್ಪತ್ರೆಯ ಹಿಂಭಾಗದಲ್ಲಿ 250 ಹಾಸಿಗೆಗಳ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದ್ದು ನೀರು ಸರಾಗವಾಗಿ ಹರಿದುಹೋಗುವ ಜಾಗದಲ್ಲಿ ಹೊಸ ಆಸ್ಪತ್ರೆಯ ಕಟ್ಟಡ ಅಡ್ಡವಾಗಿರುವುದರಿಂದ ಐಸಿಯು ವಾರ್ಡ್‍ನ ಬಾತ್ ರೂಂನಿಂದ ನೀರು ಆಸ್ಪತ್ರೆ ವಾರ್ಡ್‌ಗಳಿಗೆ ನುಗ್ಗಿ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಐಸಿಯು ವಿಭಾಗದಲ್ಲಿ 6 ರೋಗಿಗಳು, ಹೆರಿಗೆ ವಾರ್ಡ್‍ನಲ್ಲಿದ್ದ 4 ರೋಗಿಗಳನ್ನು ಬೇರೆ ವಾರ್ಡ್‍ಗೆ ಆಸ್ಪತ್ರೆಯ ಸಿಬ್ಬಂದಿಗಳು ಸ್ಥಳಾಂತರಿಸಿದರು. ಆಸ್ಪತ್ರೆಯ ಹಿಂಭಾಗ ಟ್ರೆಂಚ್ ಹೊಡೆಸಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆಯಾದರೆ ನೀರು ಎಂದಿಗೂ ಆಸ್ಪತ್ರೆಯ ಒಳಗೆ ನುಗ್ಗುವುದಿಲ್ಲ. ನೀರು ಆಸ್ಪತ್ರೆಯ ಒಳಗೆ ನುಗ್ಗಿ ಕೆಲ ಹೊತ್ತು ಅವಾಂತರ ನಿರ್ಮಾಣವಾಗಿತ್ತು. ಆದರೆ ಆಸ್ಪತ್ರೆಯ ಸಿಬ್ಬಂದಿ ನೀರನ್ನು ಹೊರಹಾಕಿದರು ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಸಂತೋಷ್ ಪತ್ರಿಕೆಗೆ ಮಾಹಿತಿ ನೀಡಿದರು.

ಆದರೆ ರಾತ್ರಿ ಮತ್ತೆ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಐಸಿಯು ಮತ್ತು ಹೆರಿಗೆ ವಾರ್ಡ್‍ಗಳಿಗೆ ನೀರು ನುಗ್ಗಿ ಸಮಸ್ಯೆ ಎದುರಿಸಿದ್ದೇವೆ ಎಂದು ರೋಗಿಗಳ ಕಡೆಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಡರಾತ್ರಿಯವರೆಗೂ ನೀರನ್ನು ಆಸ್ಪತ್ರೆಯ ವಾರ್ಡ್‍ಗಳಿಂದ ಹೊರ ಹಾಕಲು ಸಿಬ್ಬಂದಿ ಶ್ರಮಪಡಬೇಕಾಯಿತು.

            

  

error: Content is protected !!