ಕಲ್ಯಾಣವೃಷ್ಟಿ ಮಹಾಭಿಯಾನ-ಸ್ತೋತ್ರ ಸಮರ್ಪಣೆ

ಕಲ್ಯಾಣವೃಷ್ಟಿ ಮಹಾಭಿಯಾನ-ಸ್ತೋತ್ರ ಸಮರ್ಪಣೆ

ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆ

ದಾವಣಗೆರೆ, ಆ.20- ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮಂಗಳವಾರ ಕಲ್ಯಾಣವೃಷ್ಟಿ ಮಹಾಭಿಯಾನ-ಸ್ತೋತ್ರ ಸಮರ್ಪಣೆ ಕಾರ್ಯ ನಡೆಯಿತು. ನೂರಾರು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಸ್ತೋತ್ರ ಪಠಿಸಿದರು.

ಶೃಂಗೇರಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರು ಸಂನ್ಯಾಸ ಸ್ವೀಕಾರ ಮಾಡಿ ಐವತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ  ಐವತ್ತನೇಯ ವರ್ಷದ ಸ್ವರ್ಣ ಮಹೋತ್ಸವವನ್ನು `ಸುವರ್ಣಭಾರತೀ’ ಎಂಬ ಹೆಸರಿನಲ್ಲಿ ವರ್ಷಪೂರ್ತಿ ಆಚರಿಸಲು ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಕ್ಷೇಮಾರ್ಥವಾಗಿ ಪಂಚಾಯತನ ದೇವತಾರಾಧನೆ ಮೊದಲಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಅವುಗಳಲ್ಲಿ ಸ್ತೋತ್ರ ಸಮರ್ಪಣೆಯೂ ಒಂದಾಗಿದೆ.

ಶ್ರೀಮಠದ ಶ್ರೀಶಾಂಕರ ತತ್ತ್ವಪ್ರಸಾರ ಅಭಿ ಯಾನ ಮತ್ತು ವೇದಾಂತ ಭಾರತೀ ಸಂಸ್ಥೆಗಳು ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರನಕ್ಷತ್ರಮಾಲಾ ಸ್ತೋತ್ರ ಮತ್ತು ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಎಂಬ ಈ ಮೂರು ಸ್ತೋತ್ರಗಳ ವಿಶೇಷ ಮಹಾಭಿಯಾನವನ್ನು ರಾಜ್ಯದಾದ್ಯಂತ ಕೈಗೊಂಡಿವೆ. ದಾವಣಗೆರೆ ಜಿಲ್ಲೆಯಲ್ಲೂ ಸಹ ಸಾವಿರಾರು ಮಹಿಳೆಯರು ಸ್ತೋತ್ರಗಳನ್ನು ಕಲಿತಿದ್ದರು. ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ ಈ ಮೂರು ಸ್ತೋತ್ರಗಳು ಪ್ರತಿಯೊಬ್ಬರಿಗೂ  ಪುಣ್ಯ, ಫಲಗಳನ್ನು ನೀಡುತ್ತವೆ ಎನ್ನಲಾಗಿದೆ.

ಕಲ್ಯಾಣವೃಷ್ಟಿಸ್ತವದಲ್ಲಿ ಶ್ರೀವಿದ್ಯಾ ಪಂಚದಶಾಕ್ಷರೀ ಮಹಾಮಂತ್ರದ ಅಕ್ಷರಗಳಿಂದ ಪ್ರತಿ ಶ್ಲೋಕವೂ ಪ್ರಾರಂಭವಾಗುತ್ತದೆ. ಜಗನ್ಮಾತೆಯನ್ನು ಸ್ತುತಿಸುವ ಈ ಸ್ತೋತ್ರವು ಕಲ್ಯಾಣವೃಷ್ಟಿಯನ್ನು ಸುರಿಸಬಲ್ಲದು. ಲಕ್ಷ್ಮೀನೃಸಿಂಹಸ್ವಾಮಿಯನ್ನು ಸ್ತುತಿಸುವ ಕರಾವಲಂಬಸ್ತೋತ್ರವು ಸಂಸಾರ ದುಃಖವನ್ನು ದಾಟಿಸುತ್ತದೆ. ಪ್ರತಿ ಶ್ಲೋಕದ ನಾಲ್ಕು ಪಂಕ್ತಿಗಳಲ್ಲಿ ಶಿವಪಂಚಾಕ್ಷರೀ ಮಂತ್ರವನ್ನು ಹೊಂದಿರುವ ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರದಲ್ಲಿ 108 ಬಾರಿ ಶಿವಪಂಚಾಕ್ಷರೀ ಮಂತ್ರವನ್ನು ಉಲ್ಲೇಖಿಸಿ, ಸರಳವಾಗಿ ಶಿವತತ್ತ್ವವನ್ನು ಆಚಾರ್ಯರು ಉಪದೇಶಿಸಿದ್ದಾರೆ. ಈ ಮಂತ್ರದ ಉಚ್ಚಾರಣೆಯಿಂದ ಸಾಧಕನ ಮನೋಭೀಷ್ಟೆಗಳು ನೆರವೇರುತ್ತವೆ ಎನ್ನಲಾಗಿದೆ.

error: Content is protected !!