ಸನಾತನ ಹಿಂದೂ ಧರ್ಮ ಗಟ್ಟಿಗೊಳಿಸುವ ಅಗತ್ಯವಿದೆ

ಸನಾತನ ಹಿಂದೂ ಧರ್ಮ ಗಟ್ಟಿಗೊಳಿಸುವ ಅಗತ್ಯವಿದೆ

ಹೊಳೆಸಿರಿಗೆರೆ : ಬನಶಂಕರಿ ದೇವಿ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಭುಲಿಂಗ ಶ್ರೀ 

ಮಲೇಬೆನ್ನೂರು, ಆ. 19- ಇತರೆ ಧರ್ಮಗಳಿಗಿಂತಲೂ ಹಿಂದೂ ಧರ್ಮಕ್ಕೆ ಅತಿ ದೊಡ್ಡ ಇತಿಹಾಸವಿದೆ. ಅನಾದಿ ಕಾಲ ದಿಂದಲೂ ಹಿಂದೂ ಧರ್ಮ ಬೆಳೆದು ಬಂದಿದ್ದು, ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ ಹಿಂದೂ ಧರ್ಮಕ್ಕೆ ಇದೆ ಎಂದು ತುಮ್ಮಿನಕಟ್ಟೆಯ ಪದ್ಮಸಾಲಿ ಗುರುಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಹೇಳಿದರು.

ಹೊಳೆಸಿರಿಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶಾಂತಿ, ಸಾಮರಸ್ಯ ಬಯಸುವ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದ್ದು, ಈ ಬಗ್ಗೆ ಹಿಂದೂಗಳಾದ ನಾವು ಒಗ್ಗಟ್ಟಾಗಬೇಕು. ಹಿಂದೂ ಧರ್ಮವನ್ನು ಗಟ್ಟಿಗೊಳಿಸುವ ಜೊತೆಗೆ ಸನಾತನ ಧರ್ಮವನ್ನು ಬೆಳೆಸಬೇಕೆಂದು ಸ್ವಾಮೀಜಿ ಕರೆ ನೀಡಿದರು.

ಲಿಂಗದಹಳ್ಳಿ ಮಠದ ಶ್ರೀ ವೀರಭದ್ರ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಜನರು ಗುರು ಭಕ್ತರು ಅಷ್ಟೇ ಅಲ್ಲ. ದೈವೀ ಭಕ್ತರೂ ಆಗಿದ್ದಾರೆ. ಹೊಳೆಸಿರಿಗೆರೆ ಗ್ರಾಮಸ್ಥರಿಂದ ಧರ್ಮಾನುಷ್ಠಾನವಾಗಿದ್ದು, ಈ ಊರಿನ ಹಿರಿಯರು ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದರು.

ಬನಶಂಕರಿ ದೇವಸ್ಥಾನಕ್ಕೆ ಕಳಸ ಪ್ರತಿಷ್ಠಾಪನೆ ನೆರವೇರಿಸಿದ ಕೋಡಿಯಾಲ-ಹೊಸಪೇಟೆಯ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿ, ಹೊಳೆಸಿರಿಗೆರೆಯಲ್ಲಿ ಹೃದಯವಂತ ಶ್ರೀಮಂತ ಭಕ್ತರಿದ್ದಾರೆ ಎಂದು ಶ್ಲ್ಯಾಘಿಸಿದರು.

ಬನಶಂಕರಿ ದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಪರಧರ್ಮ ಸಹಿಷ್ಣುತೆಗೆ ಮಿತಿ ಇರಲಿ. ನಮ್ಮ ತನಕ್ಕೆ ಧಕ್ಕೆ ಬಂದಾಗ ನಾವು ಒಂದಾಗಲೇಬೇಕು ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಮಾತನಾಡಿ, ತಂದೆ-ತಾಯಿಗಳ ಜೊತೆಗೆ ಗುರುಗಳ, ದೇವರ ಆಶೀರ್ವಾದ ಇದ್ದರೆ ಎಂತಹ ಸಮಸ್ಯೆಯನ್ನು ಬೇಕಾದರೂ ಎದುರಿಸಬಹುದೆಂಬುದನ್ನು ಉದಾಹರಣೆ ಸಮೇತ ಹೇಳಿದರು.

ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ರಾಜಕೀಯದಲ್ಲಿ ಹೆಚ್ಚಾಗುತ್ತಿ ರುವ ಅರಾಜಕತೆಗೆ ಕಡಿವಾಣ ಹಾಕಲು ಮಠಾಧೀಶರು ಮುಂದಾಗಬೇಕೆಂದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಜನರಿಗೆ ಧರ್ಮದ ಹಾದಿಯಲ್ಲಿ ಸನ್ಮಾರ್ಗ ತೋರಿಸುವ ಕೆಲಸವನ್ನು ಧರ್ಮ ಗುರುಗಳು ಮಾಡಬೇಕೆಂದು ಮನವಿ ಮಾಡಿದರು.

ಗ್ರಾಮದ ಹಿರಿಯ ಮುತ್ಸದ್ಧಿ ಎನ್.ಜಿ. ನಾಗನಗೌಡ್ರು ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಮತ್ತು ದೇವಸ್ಥಾನದ ಶಿಲ್ಪಿಗಳನ್ನು, ಶಿಲಾಮೂರ್ತಿ ಶಿಲ್ಪಿಯನ್ನು ಅಭಿನಂದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮದ ಮುಖಂಡ ಎಂ.ಜಿ. ಪರಮೇಶ್ವರಗೌಡ, ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದು, ರುದ್ರಪ್ಪ ಲಮಾಣಿ 15 ಲಕ್ಷ ರೂ., ಜಿ.ಎಂ. ಸಿದ್ದೇಶ್ವರ 13 ಲಕ್ಷ ರೂ., ಹೆಚ್.ಎಸ್. ಶಿವಶಂಕರ್ ಮತ್ತು ಎಸ್. ರಾಮಪ್ಪ ತಲಾ 10 ಲಕ್ಷ ರೂ ಸೇರಿದಂತೆ ಇನ್ನೂ ಅನೇಕ ದಾನಿಗಳು ನೆರವು ನೀಡಿದ್ದಾರೆಂದು ಸ್ಮರಿಸಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಗ್ರಾಮದ ಶ್ರೀ ಮುರುಗೇಂದ್ರಯ್ಯ ಸ್ವಾಮಿ, ಗ್ರಾ.ಪಂ. ಅಧ್ಯಕ್ಷ ಎನ್.ಜಿ. ಮಂಜನಗೌಡ, ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬಿ. ಹಾಲೇಶಪ್ಪ, ಕುಂದೂರು ಮಲ್ಲೇಶಪ್ಪ, ಮಾಳಗಿ ಮಲ್ಲೇಶಪ್ಪ, ಕೆ.ಜಿ. ಸಿದ್ದಪ್ಪ, ಹರಳಹಳ್ಳಿ ಬಸವನಗೌಡ್ರು, ದೇವಸ್ಥಾನ ಕಮಿಟಿ ಅಧ್ಯಕ್ಷ ಕೆ.ಜಿ. ಕೊಟ್ರೇಶ್‌ಗೌಡ, ಉಪಾಧ್ಯಕ್ಷ ಕೆ.ಜಿ. ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಕೆ.ಜಿ. ಸದಾಶಿವಪ್ಪ, ಖಜಾಂಚಿ ಕೆ.ಜಿ. ನಾಗರಾಜಪ್ಪ ಸೇರಿದಂತೆ, ಎಲ್ಲಾ ನಿರ್ದೇಶಕರು, ಪೂಜಾರ್ ಗಂಗಾಧರ್, ಕುಂದೂರು ಮಂಜಪ್ಪ, ಕೆ. ಕುಮಾರ್, ನಿವೃತ್ತ ಯೋಧ ಪರಶುರಾಮ್ ಮತ್ತಿತರರು ಭಾಗವಹಿಸಿದ್ದರು.

ಕೆ.ಜಿ. ಕೊಟ್ರೇಶ್‌ಗೌಡ ಸ್ವಾಗತಿಸಿದರು. ಪ್ರವಚನಕಾರ ಬಿ. ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಸಾಕ್ಷರತಾ ಸಂಯೋಜಕ ಎಂ. ಶಿವಕುಮಾರ್ ವಂದಿಸಿದರು.

ಈ ವೇಳೆ ದೇವಸ್ಥಾನದ ಶಿಲ್ಪಿ ಎಂ.ಎಂ. ಮಣಿ ತಪದಿ ಮತ್ತು ಮೂರ್ತಿ ಶಿಲ್ಪಿಗಳಾದ ನಾಗೇಂದ್ರಚಾರಿ, ಅರ್ಕಾಚಾರಿ ಅವರನ್ನು ಸನ್ಮಾನಿಸಲಾಯಿತು.

error: Content is protected !!