ಒಳ ಮೀಸಲಾತಿಯಿಂದ ಬಂಜಾರ ಸಮುದಾಯಕ್ಕೆ ಕಷ್ಟದ ದಿನಗಳು

ಒಳ ಮೀಸಲಾತಿಯಿಂದ ಬಂಜಾರ ಸಮುದಾಯಕ್ಕೆ ಕಷ್ಟದ ದಿನಗಳು

ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ ಕಳವಳ 

ದಾವಣಗೆರೆ, ಆ.18- ಒಳ ಮೀಸಲಾತಿ ಅನುಷ್ಠಾನವಾದರೆ, ಬಂಜಾರ ಸಮುದಾಯಕ್ಕೆ ಕಷ್ಟದ ದಿನಗಳು ಬರಬಹುದು ಎಂದು ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ ಕಳವಳ ವ್ಯಕ್ತಪಡಿಸಿದರು.

ನಗರ ಜಿಲ್ಲಾ ಬಂಜಾರ ಭವನದಲ್ಲಿ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದಿಂದ ಭಾನುವಾರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಷ್ಟದ ದಿನಗಳಲ್ಲೂ ನಾವೆಲ್ಲಾ ಬದುಕುವುದು ಅನಿವಾರ್ಯ. ಆದ್ದರಿಂದ ಸಮಾಜದ ಮಕ್ಕಳು ಆತ್ಮ ವಿಶ್ವಾಸದಿಂದ ಹಾಗೂ ಉತ್ತಮ ಗುರಿಯೊಂದಿಗೆ ಓದಬೇಕು. ಹೆಚ್ಚು ಅಂಕ ಗಳಿಸಿ ಪಡೆದು ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳುವ ದೃಢಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ನಾವೂ ಸಹ ರಾಜ್ಯಾದ್ಯಂತ ಪ್ರವಾಸ ನಡೆಸಿ ಜನಜಾಗೃತಿ ಗೊಳಿಸಿ, ಸರ್ಕಾರದ ಮುಂದೆ ನಮ್ಮ ಬೇಡಿಕೆ ಇಡುತ್ತೇವೆ. ಸಮಾಜದ ಸಂಘದವರು ಐದು ಎಕರೆ ಜಾಗ ನೀಡಿದರೆ ಲಂಬಾಣಿ ಕಾಲೋನಿ ನಿರ್ಮಿಸಲು ನಿಗಮದಿಂದ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡುವುದಾದರೆ ಅದಕ್ಕೂ ಮುನ್ನ ಜನಗಣತಿ ನಡೆಸಬೇಕು ಎಂದು ಎನ್.ಜಯದೇವ ನಾಯ್ಕ ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ 7 ಜನರ ಸಂವಿಧಾನ ಪೀಠವು ಒಳ ಮೀಸಲಾತಿ ಜಾರಿಗೆ ತರುವ ಅಕಾರವನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಅಲ್ಲದೇ, ಪರಿಶಿಷ್ಟರಲ್ಲಿ ಈಗಾಗಲೇ ಮೀಸಲಾತಿಯಡಿ ಉದ್ಯೋಗ ಸೇರಿ ಇತರೆ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಯಾಗಿರುವ ಕೆನೆಪದರ ವ್ಯಕ್ತಿಗಳನ್ನು ಪಟ್ಟಿ ಮಾಡಿ ಎಂದು ತಿಳಿಸಿದೆ. ಕೆಲ ಸಂಸದರು, ಕೇಂದ್ರ ಮಂತ್ರಿಗಳು ಪ್ರಧಾನಿಯವರನ್ನು ಭೇಟಿಯಾಗಿ, ಒಳ ಮೀಸಲಾತಿ ಜಾರಿ ಇರಲಿ. ಆದರೆ, ಸಂವಿಧಾನ ಬಾಹಿರವಾಗಿರುವ ಕೆನೆಪದರವನ್ನು ರದ್ದು ಪಡಿಸಿ ಎಂದು ಮನವಿ ಮಾಡಿದ್ದಾರೆ. ಹಾಗಾದರೆ, ಒಳ ಮೀಸಲಾತಿ ಜಾರಿ ಬಗ್ಗೆ ಸಂವಿಧಾನದ ಯಾವ ಅನು ಚ್ಛೇದನದಲ್ಲಿ ಉಲ್ಲೇಖವಿದೆ ಎಂಬುದನ್ನು ತೋರಿಸಬೇಕು ಎಂದು ಸವಾಲು ಹಾಕಿದರು.

ನಿಗಮದ ನೂತನ ಅಧಕ್ಷರು ಸೇರಿ ಕಾಂಗ್ರೆಸ್‌ನಲ್ಲಿರುವ ಮುಖಂಡರು ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಬೇಕು ಎಂದು ಮಾಜಿ ಶಾಸಕ  ಎಂ.ಬಸವರಾಜನಾಯ್ಕ ಸಲಹೆ ನೀಡಿದರು.

ಸಮುದಾಯದ ಮಕ್ಕಳು ಕೇವಲ ಉತ್ತಮ ಅಂಕಪಡದೇ ಜೀವನದಲ್ಲಿ ಯಶಸ್ಸು ಕಾಣುವುದು ಕಷ್ಟ ಸಾಧ್ಯ. ಬುದ್ಧಿಶಕ್ತಿಯಿಂದ ಬದುಕು ಕಟ್ಟಿಕೊಳ್ಳುವ ಕೌಶಲ್ಯಹೊಂದಬೇಕು. ಐಎಎಸ್, ಕೆಎಎಸ್ ಪರೀಕ್ಷೆ ಬರೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ  ದೂಡಾದಿಂದ ಸಿಎ ನಿವೇಶನಕ್ಕೆ ಅರ್ಜಿ ಆಹ್ವಾನಿಸಲಾಗುವುದು. ಆಗ ನೀವು ಅರ್ಜಿ ಸಲ್ಲಿಸಿದರೆ ರಿಯಾಯಿತಿ ದರದಲ್ಲಿ ನಿವೇಶನ ನೀಡಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಭರವಸೆ ನೀಡಿದರು. ಬಂಜಾರ ಸಮಾಜದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ 43 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದಾವಣಗೆರೆ ಜಿಲ್ಲೆ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷ ಎಸ್.ನಂಜಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಹೀರಾ ನಾಯ್ಕ, ಭೋಜ್ಯಾ ನಾಯ್ಕ, ಬಾಂಬೆ ಕುಮಾರ್ ನಾಯ್ಕ, ಡಾ.ವಿಷ್ಣುವರ್ಧನ ದೇವ್ಲಾ ನಾಯ್ಕ, ಜಿ.ಆರ್.ದೇವೇಂದ್ರ ನಾಯ್ಕ, ತಾವರ ನಾಯ್ಕ, ಗಾಯಕ್ ಕುಬೇರ್ ನಾಯ್ಕ, ಲಕ್ಷ್ಮಣ ರಾಮಾವತ್, ಕವಿತಾ ಚಂದ್ರಶೇಖರ್, ಮಲ್ಲೇಶ ನಾಯ್ಕ, ಲಿಂಗರಾಜ್ ನಾಯ್ಕ, ಮಂಜು ನಾಯ್ಕ, ಬಸವರಾಜ ನಾಯ್ಕ ಮತ್ತಿತರರಿದ್ದರು.

error: Content is protected !!