ಮಕ್ಕಳು ಅಂಕಗಳಿಕೆಯ ಯಂತ್ರಗಳಾಗದಿರಲಿ

ಮಕ್ಕಳು ಅಂಕಗಳಿಕೆಯ ಯಂತ್ರಗಳಾಗದಿರಲಿ

ಸಂಸ್ಕೃತಿ, ಸಂಸ್ಕಾರ ಕಲಿಸುವಂತೆ ಪೋಷಕರಿಗೆ ವಿಖ್ಯಾತಾನಂದ ಶ್ರೀಗಳ ಕರೆ

ದಾವಣಗೆರೆ, ಆ. 19- ನಾರಾಯಣ ಗುರು ಗಳ ಸಿದ್ಧಾಂತವನ್ನು ಎಲ್ಲರೂ ಮೈಗೂಡಿಸಿಕೊ ಳ್ಳೊಣ, ಸಮಾಜದ ಗುರು ಪರಂಪರೆಯನ್ನು ಯಾರೂ ಕೂಡ ಮರೆಯಬಾರದು. ಮಕ್ಕಳನ್ನು ಕೇವಲ ಅಂಕಗಳಿಕೆಯ ಯಂತ್ರಗಳನ್ನಾಗಿ ಮಾಡದೇ ಅವರಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿ ಕೊಡಿ ಎಂದು ಸೋಲೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದರು.

ನಗರದ ಪಿ.ಬಿ. ರಸ್ತೆಯಲ್ಲಿನ ಜಿಲ್ಲಾ ಆರ್ಯ ಈಡಿಗರ ಸಂಘದ ಆವರಣದಲ್ಲಿ ಸಂಘದ ವತಿಯಿಂದ ನಿರ್ಮಾಣಗೊಂಡಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಸಮಾಜ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆಯುತ್ತಿರುವ ಶ್ರೇಷ್ಠ ಸಮಾಜವಾಗಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಜೊತೆಗೆ ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹಿತ ನುಡಿದರು.

ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುಗೆೆ ಕೊಟ್ಟಿದ್ದೇವೆ ಎನ್ನುವುದರ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯವಿದೆ. ಸಮಾಜದ ಬಗ್ಗೆ ಅತೀವ ಕಾಳಜಿ ಹೊಂದಬೇಕಾಗಿದೆ. ಆದರೆ ಬಹುತೇಕರಲ್ಲಿ ಅಂತಹ ಮನೋಭಾವನೆ ಕಂಡು ಬರದಿರುವುದು ವಿಷಾದದ ಸಂಗತಿ ಎಂದರು.

ಕಾಣದ ದೇವರಿಗೆ ಪೂಜೆ, ಪುನಸ್ಕಾರ ಮಾಡುವುದು ನಮ್ಮ ಸಂಸ್ಕೃತಿ ಆದರೆ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕೆಂದರು.

ಕಾರ್ಕಳದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಶಿಕ್ಷಣ ನೀಡಲಾಗುತ್ತಿದೆ. ಈ ಭಾಗದ ಬಡ ವಿದ್ಯಾರ್ಥಿಗಳಿದ್ದರೆ ಕಳುಹಿಸಿ ಕೊಡಿ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘದ ಸಮಾಜ ಸೇವಾ ಕಾರ್ಯ ಶ್ಲಾಘನೀಯ. ಇವರ ಸೇವಾ ಕಾರ್ಯಗಳು ಇನ್ನು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಆರ್ಯ ಈಡಿಗರ ಸಮಾಜಕ್ಕೆ ಸಿಎ ನಿವೇಶನ ಮಂಜೂರು ಮಾಡುವ ಭರವಸೆ ನೀಡಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಸಮಾಜದ ವಿದ್ಯಾರ್ಥಿ ನಿಲಯಗಳಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಂತವರು ಸಮಾಜದ ಬಗ್ಗೆ ಕಾಳಜಿ ವಹಿಸಿ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಆ. 20 ರಂದು ಬೆಂಗಳೂರಿನಲ್ಲಿ ನಡೆಯುವ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಬೆಂಗಳೂರಿನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ 400 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ರಾಜ್ಯ ಸಂಘದಲ್ಲಿ ಐದು ಕೋಟಿ ರೂ.ಗಳನ್ನು ಸಂಗ್ರಹಿಡಲಾಗಿದ್ದು, ಸರ್ಕಾರ ಮತ್ತು ದಾನಿಗಳ ನೆರವಿನಿಂದ ನಿರ್ಮಾಣ ಕಾಮಗಾರಿ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ತೀರ್ಥಹಳ್ಳಿ ತಾಲ್ಲೂಕಿನ ಗರ್ತಿಕೆರೆ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್. ಶಂಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್. ಜೀವನ್,ಜೆ.ಪಿ. ಫೌಂಡೇಶನ್ ಅಧ್ಯಕ್ಷ ಜೆ.ಪಿ. ಸುಧಾಕರ್ ಮಾತನಾಡಿದರು.

ದಾವಣಗೆರೆ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎ. ನಾಗರಾಜ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸಂಘದ ಪದಾಧಿಕಾರಿಗಳಾದ ಇ. ದೇವೇಂದ್ರಪ್ಪ,ಟಿಜಿ. ಜಯಪ್ರಕಾಶ್, ಎಸ್. ಭರಮಪ್ಪ, ಬಿ. ಸೋಮಶೇಖರ್, ಎಸ್.ವಿ. ರಾಮದಾಸ್, ಎಂ. ಅಂಜಿನಪ್ಪ, ಎಂಸ್.ಮಂಜಪ್ಪ, ಇ. ಪದ್ಮನಾಭ, ಶಿವಕುಮಾರ್, ಲಕ್ಷ್ಮೀ ತಿಮ್ಮಪ್ಪ, ಸುಮ ಭರಮಪ್ಪ, ಹೆಚ್. ರಮೇಶ್, ಆೃ್.ನಾಗರಾಜ್, ಭೀಮರಾಜ್, ಜಿ.ಎ. ಪ್ರಕಾಶ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!