ಮುಷ್ಕರ ಹಿನ್ನೆಲೆ : ರೋಗಿಗಳಿಗೆ ತೊಂದರೆಯಾಗದಂತೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಎಚ್ಚರಿಕೆ
ದಾವಣಗೆರೆ, ಆ.18- ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ ಶನಿವಾರ ಸಂಜೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರಾಷ್ಟ್ರವ್ಯಾಪ್ತಿ ವೈದ್ಯರು ಮುಷ್ಕರ ನಿರತರವಾಗಿರುವುದರಿಂದ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಸಾರ್ವಜನಿಕರ ಯೋಗಕ್ಷೇಮದ ಕುರಿತು ದಿಢೀರ್ ಭೇಟಿ ನೀಡಿ ರೋಗಿಗಳ ಕ್ಷೇಮ ವಿಚಾರಿಸಿದರು.
ವೈದ್ಯರ ಮುಷ್ಕರದ ಕಾರಣದಿಂದಾಗಿ ಯಾವುದೇ ಒಳರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದೆಂದು ಆಸ್ಪತ್ರೆಯಲ್ಲಿದ್ದ ವೈದ್ಯರು ಮತ್ತು ಇತರೆ ಸಿಬ್ಬಂದಿಯವರಿಗೆ ಈ ವೇಳೆ ಖಡಕ್ ಎಚ್ಚರಿಕೆ ನೀಡಿದರು. ಆಸ್ಪತ್ರೆ ಜಿಲ್ಲಾ ಸರ್ಜನ್ ಅವರಿಗೆ ಆಸ್ಪತ್ರೆಯ ಕಟ್ಟಡದ ಸ್ಥಿತಿಗತಿ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು. ಆಸ್ಪತ್ರೆಯ ಕಟ್ಟಡ ತುಂಬಾ ಹಳೆಯದಾಗಿದ್ದು ಕೆಲವು ಕಡೆಗಳಲ್ಲಿ ಶಿಥಿಲಾವಸ್ಥೆಯಲ್ಲಿ ಕಂಡು ಬಂದಿದ್ದರಿಂದ ಈ ಬಗ್ಗೆ ತುರ್ತಾಗಿ ಯೋಗ್ಯ ಕ್ರಮಗಳನ್ನು ಜರುಗಿಸಬೇಕೆಂದು ಅವರಿಗೆ ಸೂಚನೆ ನೀಡಿದರು.
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಜನರು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಈ ವ್ಯಕ್ತಿಗಳಿಗೆ ಹೊರೆಯಾಗದಂತೆ ಬಾಹ್ಯ ಮೂಲಗಳಿಂದ ಮಾತ್ರೆ, ಔಷಧಿಗಳನ್ನು ಮತ್ತು ಪರೀಕ್ಷಾ ವರದಿಗಳನ್ನು ತರುವಂತೆ ಸೂಚಿಸಬಾರದು ಎಂದು ಎಲ್ಲ ವೈದ್ಯರಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ನ್ಯಾಯಾಧೀಶರ ಮಾತಿಗೆ ಸ್ಪಂದಿಸಿದ ಜಿಲ್ಲಾ ವೈದ್ಯಾಧಿಕಾರಿಗಳು, ಎಲ್ಲಾ ವೈದ್ಯರು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಡಾ.ನಾಗೇಂದ್ರಪ್ಪ ಉಪಸ್ಥಿತರಿದ್ದರು.