ಇಂದು ರಕ್ಷಾಬಂಧನ ಆಕರ್ಷಿಸುತ್ತಿವೆ ಬಗೆ ಬಗೆ ರಾಖಿಗಳು
ದಾವಣಗೆರೆ, ಆ. 18- ಸಹೋದರ-ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಸಂಕೇತಿಸುವ ರಕ್ಷಾಬಂಧನ ಹಬ್ಬವನ್ನು ಇಂದು ಸೋಮವಾರ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಿಸಲಾಗುತ್ತದೆ. ಹುಣ್ಣಿಮೆಯ ಈ ಶುಭ ದಿನದಂತೆ ಸಹೋದರಿಯರು ತಮ್ಮ ಸಹೋದರರ ಹಣೆಗೆ ತಿಲಕ ಇಟ್ಟು, ಆರತಿ ಬೆಳಗಿ, ಕೈಗೆ ರಾಖಿ ಕಟ್ಟಿ ದೀರ್ಘಾಯುಷ್ಯ ಹಾಗೂ ಉನ್ನತಿಗಾಗಿ ಪ್ರಾರ್ಥಿಸುತ್ತಾರೆ.
ಆಕರ್ಷಿಸುತ್ತಿವೆ ರಾಖಿಗಳು: ಪ್ರತಿ ವರ್ಷದಂತೆ ಈ ವರ್ಷ ಅಂಗಡಿಗಳಲ್ಲಿ ವಿವಿಧ ಬಗೆಯ ಆಕರ್ಷಕ ರಾಖಿಗಳನ್ನು ಮಾರಾಟಕ್ಕೆ ಇಡಲಾಗಿದೆ. ನೂಲಿನ ರಾಖಿ 10 ರೂ.ಗಳಿಂದ 1 ಸಾವಿರ ರೂ. ವರೆಗೆ ಬೆಲೆ ಬಾಳುವ ಬೆಳ್ಳಿಯ ರಾಖಿಗಳು ಕೂಡ ಮಾರಾಟಕ್ಕಿವೆ.
ಹಲವು ಬಗೆಯ ರಾಖಿಗಳು ಅಂಗಡಿ ಮುಂಗಟ್ಟನ್ನು ಸಿಂಗರಿಸಿವೆ. ಚಾವಣಿಯಿಂದ ಇಳಿಬಿದ್ದ ಹಗ್ಗಗಳಲ್ಲಿ ಗೊಂಚಲಿನಂತೆ ನೇತಾಡುತ್ತಾ ಕಣ್ಮನ ಸೆಳೆಯುತ್ತಿವೆ. ಸ್ಪಂಜ್, ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ, ಹರಳು ಪೋಣಿಸಿರುವ ರಾಖಿಗಳು ಹೆಚ್ಚಾಗಿ ಕಾಣುತ್ತಿವೆ. ಮಕ್ಕಳಿಗೆ ಇಷ್ಟವಾಗುವ ನಕ್ಷತ್ರಾಕಾರಾದ ರಾಖಿ ಹೆಚ್ಚಾಗಿ ಮಾರಾಟವಾಗುತ್ತಿವೆ.
ಈಗಾಗಲೇ ದೂರದ ಊರುಗಳಲ್ಲಿರುವ ಸಹೋದರರಿಗೆ ಅಂಚೆ ಮೂಲಕ ಸಹೋದರಿಯರು ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ.
ದರ ಏರಿಕೆ ಬಿಸಿ ಮಧ್ಯೆಯೂ ಮಹಿಳೆಯರು, ಯುವತಿಯರು ರಾಖಿ ಖರೀದಿಯಲ್ಲಿ ಹಿಂದೆ ಬೀಳುತ್ತಿಲ್ಲ. ಕಳೆದ ಬಾರಿಗೆ ಹೋಲಿಸಿದರೆ, ಈ ವರ್ಷವೂ ರಾಖಿ ಮಾರಾಟ ಹೆಚ್ಚಾಗಿದೆ. ಬಣ್ಣದ ರಾಖಿಗಳ ಖರೀದಿಗೆ ಮುಗಿಬೀಳುತ್ತಿರುವ ಹೆಣ್ಣು ಮಕ್ಕಳಿಂದ ಫ್ಯಾನ್ಸಿ ಸ್ಟೋರ್‌ಗಳು ಸಂಜೆ ವೇಳೆಗೆ ತುಂಬಿ ಹೋಗುತ್ತಿವೆ.
ಕಾರ್ಟೂನ್ ಶೋಗಳ ಪಾತ್ರಗಳು, ವಾಟ್ಸಾಪ್ ಇಮೋಜಿಗಳೂ ರಾಖಿ ವಿನ್ಯಾಸಗಳಾಗಿ ರೂಪುಗೊಂಡು ಮಾರುಕಟ್ಟೆಗೆ ಬಂದಿವೆ. ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಛೋಟಾ ಭೀಮ್, ಡೊರೆಮಾನ್ ಚಿತ್ರದ ರಾಖಿ ಮಕ್ಕಳ ಮನಸೆಳೆಯುತ್ತಿದೆ. ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ಬಂದು ಖರೀದಿಯಲ್ಲಿ ತೊಡಗುತ್ತಿದ್ಧಾರೆ.