ಹೆಚ್ಚುತ್ತಲೇ ಇದೆ ಬೀದಿ ನಾಯಿಗಳ ಹಾವಳಿ

ಹೆಚ್ಚುತ್ತಲೇ ಇದೆ ಬೀದಿ ನಾಯಿಗಳ ಹಾವಳಿ

ಗಂಭೀರವಾಗಿ ಪರಿಗಣಿಸದ ಪಾಲಿಕೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ

ದಾವಣಗೆರೆ: ನಗರದ ಪ್ರತಿ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ.

ಐದರಿಂದ  ಹತ್ತು  ನಾಯಿಗಳ ಹಿಂಡು ನಗರದ ಪ್ರಮುಖ ಬೀದಿಗಳಲ್ಲಿ ಓಡಾ ಡುವ ಮೂಲಕ ಭಯ ಹುಟ್ಟಿಸುತ್ತಿವೆ. ಬೀದಿನಾಯಿಗಳು ಜನರ ಮೇಲೆ ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹಾಗೂ ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿವೆ. ಎಷ್ಟೋ ಬಾರಿ ದ್ವಿಚಕ್ರ ವಾಹನ ಸವಾರರು ನಾಯಿ ದಾಳಿಗೆ ಹೆದರಿ ರಸ್ತೆ ಮೇಲೆ ಬಿದ್ದು ಗಾಯಗೊಳ್ಳುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ.

 ಕಸದ ತೊಟ್ಟಿಗಳಲ್ಲಿ ಸಾರ್ವಜನಿಕರು ಹಾಕಿದ ಕಸವನ್ನು ರಸ್ತೆಗೆ ಎಳೆದು ತಂದು ತಿನ್ನುತ್ತಿದ್ದು, ಇದರಿಂದ ಆ ರಸ್ತೆಗಳಲ್ಲಿ ಓಡಾಡುವುದು ಕಷ್ಟಕರವಾಗುತ್ತಿದೆ. ಪ್ರಾಣಿ ಸಂರಕ್ಷಣೆದಾರರು ಮತ್ತು ನಗರ ಪಾಲಿಕೆಗಳ ನಡುವಿನ ಹಗ್ಗಜಗ್ಗಾಟವು ಬೀದಿನಾಯಿಗಳ ಸಂಖ್ಯೆ ಮತ್ತು ನಾಯಿಗಳ ದಾಳಿಯ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ಪ್ರಾಣಿಗಳಿಗೆ ಆಹಾರ ನೀಡುವವರು ಮತ್ತು ಇತರರ ನಡುವೆ ಘರ್ಷಣೆಗಳು ನಡೆದಿದೆ.

ನಾಯಿಗಳ ಸಮಸ್ಯೆ ಹಳ್ಳಿಗಳಿಗಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇಲ್ಲಿನ ಜನಸಾಂದ್ರತೆಯೇ ನಾಯಿಗಳ ಉಪಟಳಕ್ಕೆ ಕಾರಣ ಎಂಬುದು ಕೆಲವರ ಅಭಿಪ್ರಾಯ. ಪ್ರಾಣಿಗಳ ಆರೋಗ್ಯ ಕ್ಷೇಮ ಮತ್ತು ನಿಯಂತ್ರಣದ ಬಗ್ಗೆ ನಿಗದಿತ ವ್ಯವಸ್ಥೆ ಇಲ್ಲ. ಪ್ರಾಣಿಗಳ ನಿಯಂತ್ರಣಕ್ಕೂ ನಿಗದಿತ ವ್ಯವಸ್ಥೆ ಇಲ್ಲದಿರುವುದರಿಂದ ನಾಯಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 

ಹೆಚ್ಚುತ್ತಿರುವ ನಾಯಿಗಳಿಗೆ ಸಿಗಬೇಕಾದ ಆಹಾರವೂ ಸಿಗುತ್ತಿಲ್ಲ. ಇಂಥ ವೇಳೆ ಸಿಟ್ಟಿಗೆದ್ದ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಜತೆಗೆ ಹಲ ವಾರು ಸೋಂಕಿಗೂ ಕಾರಣವಾಗುತ್ತಿವೆ.

ಭಾರತದಲ್ಲಿರುವ ಕಾನೂನುಗಳು ಬೀದಿ ನಾಯಿಗಳ ಪರವಾಗಿಯೇ ಇವೆ.  ಬೀದಿ ನಾಯಿಗೆ ಬೀದಿಯಲ್ಲಿ ವಾಸಿಸುವ ಎಲ್ಲ ಹಕ್ಕುಗಳಿವೆ. ಭಾರತದಲ್ಲಿ 2001 ರಿಂದಲೂ ಬೀದಿ ನಾಯಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಅಂದ ಹಾಗೆ 2008ರಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಬೀದಿ ನಾಯಿಗಳನ್ನು ಹತ್ಯೆ ಮಾಡಲು ಮುಂದಾಗಿತ್ತು. ಇದಕ್ಕೆ ಬಾಂಬೆ ಹೈಕೋರ್ಟ್‌ ಒಪ್ಪಿಗೆಯನ್ನೂ ನೀಡಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

ಭಾರತೀಯ ಸಂವಿಧಾನದ ಆರ್ಟಿಕಲ್‌ 51ಎ(ಜಿ) ಪ್ರಕಾರ, ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿಯನ್ನು ಕಾಪಾಡಬೇಕು ಮತ್ತು ಇತರೆ ಜೀವವಿರುವ ಪ್ರಾಣಿಗಳ ಬಗ್ಗೆ ದಯೆ ಹೊಂದಿರಬೇಕು.  ಇದರ ಜತೆಗೆ ಬೀದಿ ನಾಯಿಗಳಿಗೆ ಆಹಾರ ಒದಗಿಸುವುದು ಕಾನೂನು ಬದ್ಧವಾಗಿಯೇ ಇದೆ.

ಕಾನೂನಿನ ಪ್ರಕಾರ, ಬೀದಿ ನಾಯಿಗಳನ್ನು ಅವುಗಳಿರುವ ಆವಾಸ ಸ್ಥಾನದಿಂದ ತೆರವು ಗೊಳಿಸುವಂತಿಲ್ಲ. ಆದರೆ ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಅಥವಾ ಸರ್ಕಾರೇತರ ಸಂಸ್ಥೆಗಳು ಅವುಗಳನ್ನು ತೆಗೆದುಕೊಂಡು ಹೋಗಿ, ಅವುಗಳಿಗೆ ಜನನ ನಿಯಂತ್ರಣ ಚುಚ್ಚುಮದ್ದು ಹಾಕಿಸಿ, ಅವುಗಳು ಎಲ್ಲಿದ್ದವೋ ಅಲ್ಲಿಗೇ ತಂದು ಬಿಡಬೇಕು ಎಂಬ ಕಾನೂನು ಇದೆ.

ಆದರೆ ಈ ವಿಚಾರದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಬೀದಿ ನಾಯಿಗಳ ಹಾವಳಿಯನ್ನು ಇಲ್ಲಿಯವರೆಗೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

error: Content is protected !!