ತುಂಗಭದ್ರಾ ಜಲಾಶಯದ ಗೇಟ್ ಕುಸಿತ

ತುಂಗಭದ್ರಾ ಜಲಾಶಯದ ಗೇಟ್ ಕುಸಿತ

ಬೆಂಗಳೂರು, ಆ. 11 – ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಗೇಟ್ ಕುಸಿದಿದ್ದು, ಜಲಾಶಯದ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಹೋಗಿದೆ. ಕ್ರಸ್ಟ್‌ ಗೇಟ್‌ನ ಚೈನ್‌ಲಿಂಕ್ ಬೆಸುಗೆ ಬಿಟ್ಟುಕೊಂಡ ಕಾರಣ ಗೇಟ್ ಸಂಪೂರ್ಣ ಕುಸಿದಿದೆ. 

ಶನಿವಾರ ರಾತ್ರಿ 10.50ಕ್ಕೆ ಗೇಟ್ ಮುರಿ ದಿತ್ತು. 105.788 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಇಂತಹ ಸಂದರ್ಭದಲ್ಲೇ ಆಗಿರುವ ಅನಾಹುತ ದಿಂದ ಪ್ರವಾಹ ಭೀತಿ ಉಂಟಾಗಿರುವ ಜೊತೆಗೆ ರೈತರಿಗೆ ಸಂಕಷ್ಟವೂ ಎದುರಾಗಿದೆ.

ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿ ರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಕೊಪ್ಪಳ, ರಾಯಚೂರು, ವಿಜಯ ನಗರ, ಬಳ್ಳಾರಿ 4 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗೇಟ್ ದುರಸ್ತಿ ಜವಾಬ್ದಾರಿ ಅನುಭವಿ ಸಂಸ್ಥೆಗೆ ವಹಿಸಲಾಗಿದೆ. ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ್‌ ಕಂಪನಿಗೆ ಜಲಾಶಯದ ವಿನ್ಯಾಸ ನೀಡಲಾಗಿದೆ. ತಾಂತ್ರಿಕ ತಂಡದವರು ನಿನ್ನೆ ರಾತ್ರಿಯೇ ಇಲ್ಲಿಗೆ ಬಂದು ತಕ್ಷಣ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಇದು ತಾಂತ್ರಿಕ ವಿಷಯವಾಗಿದ್ದು, ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದ್ದು. ಬೇರೆ ಟೀಕೆ ಟಿಪ್ಪಣೆ ಗಿಂತ ಮೊದಲು ಗೇಟ್ ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ಹೊಸ ಗೇಟ್ ಅಳವಡಿಕೆ ಮಾಡ ಬೇಕಾದರೆ 50 ರಿಂದ 60 ಟಿಎಂಸಿ ನೀರನ್ನು ನದಿಗೆ ನೀರು ಬಿಡಬೇಕಾಗಿರುವುದರಿಂದ ಸದ್ಯ ಎಲ್ಲ ಗೇಟ್ ಮೂಲಕ 98 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ ಎಂದು ಹೇಳಿದರು.

ರೈತರಿಗೆ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನಿಸಲಾಗಿದೆ. ರೈತ ರನ್ನು ಬದುಕಿಸಲು ಬೇಕಾದ ಕ್ರಮ ತೆಗೆದು ಕೊಳ್ಳಲಾಗುವುದು. ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದ್ದು, ಜನಪ್ರತಿನಿಧಿಗಳು ಸೇರಿದಂತೆ ಇತರರನ್ನು ಬಿಡುವಂತಿಲ್ಲ ಎಂದು ತಿಳಿಸಿದರು.

ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 12 ಲಕ್ಷ ಎಕರೆ ನೀರಾವರಿಗೆ ಜಲಾಶಯದ ನೀರು ಅಗತ್ಯವಾಗಿ ಬೇಕಾಗಿದೆ. ಶನಿವಾರ ರಾತ್ರಿ ಹತ್ತು ಗೇಟ್ ಮೂಲಕ ನೀರು ಬಿಟ್ಟಾಗ ಅದರಲ್ಲಿ 19ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಮೂಲಕ ನೀರು ಬಿಡಲಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ. ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಅಡಿ ಕೊಡಬೇಕಿದೆ. ರೈತರು ಗಾಬರಿಯಾಗುವ ಅಗತ್ಯವಿಲ್ಲ ಎಂದವರು ಹೇಳಿದರು.

ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವುದರಿಂದ ನದಿಗೆ ಸದ್ಯ 1 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಬಿಡಲಾಗುತ್ತಿದ್ದು, ಆ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟೆಯನ್ನು ಗರಿಷ್ಠ 6.5 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಹೀಗಾಗಿ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ನದಿ ಪಾತ್ರದ ಜನರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ
ಒ.ಆರ್‌.ಕೆ.ರೆಡ್ಡಿ ಹೇಳಿದ್ದಾರೆ.

error: Content is protected !!