ಸಂಶೋಧನೆಗಳನ್ನು ಹೊಲಗಳಲ್ಲಿ ಅನುಷ್ಠಾನ ಮಾಡುತ್ತಿವೆ : ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್
ದಾವಣಗೆರೆ, ಆ. 9 – ಕೃಷಿ ವಿಜ್ಞಾನ ಕೇಂದ್ರಗಳು ಜ್ಞಾನ ಭಂಡಾರವಾಗಿವೆ. ಇವುಗಳು ಸಂಶೋಧನೆಗಳು ಹಾಗೂ ತಂತ್ರಜ್ಞಾನವನ್ನು ರೈತರಿಗೆ ತಿಳಿಸುತ್ತಿವೆ. ಪ್ರಾತ್ಯಕ್ಷಿಕೆ ಮೂಲಕ ಹೊಲಗಳಲ್ಲಿ ಅನುಷ್ಠಾನ ಮಾಡುತ್ತಿವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಐ.ಸಿ.ಎ.ಆರ್. – ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ದೀಪದ ಸ್ವೀಕಾರ ಮತ್ತು ಅಭಿಮಾನದ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿಗಳಲ್ಲಿ ಹಲವು ತಂತ್ರಜ್ಞಾನಗಳು ರೂಪುಗೊಳ್ಳುತ್ತವೆ. ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಈ ತಂತ್ರಜ್ಞಾನ ಒದಗಿಸುವ ಕೆಲಸ ಮಾಡುತ್ತಿವೆ ಎಂದರು.
ಕೃಷಿ ವಿಜ್ಞಾನ ಕೇಂದ್ರಗಳು ಕೃಷಿ, ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲ ವಲಯಗಳ ಪರಿಣಿತರನ್ನು ಹೊಂದಿದೆ. ಆ ಮೂಲಕ ಸಮಗ್ರ ಕೃಷಿಗೆ ನೆರವು ನೀಡುತ್ತಿವೆ ಎಂದು ಇಟ್ನಾಳ್ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಐ.ಸಿ.ಎ.ಆರ್. – ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ್ದ ಸುವರ್ಣ ಮಹೋತ್ಸವ ದೀಪವನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಸ್ವೀಕರಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಐಸಿಎಆರ್ – ಟಿ.ಕೆ.ವಿ.ಕೆ. ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕೃಷಿಯಲ್ಲೂ ಕೋಟಿ ಗಳಿಸಿ
ಕೃಷಿಯಲ್ಲಿ ಹೆಚ್ಚು ಆದಾಯವಿಲ್ಲ ಎಂದು ಯುವಕರು ಕೃಷಿ ವಲಯದ ಕಡೆ ಆಸಕ್ತಿ ತೋರುತ್ತಿಲ್ಲ. ಆದರೆ, ಕೃಷಿ ವಲಯದಲ್ಲೂ ಕೋಟಿಗಳನ್ನು ಗಳಿಸಲು ಅವಕಾಶ ಇದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.
ವೇದಿಕೆಯ ಮೇಲಿರುವ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಹೆಚ್.ಬಿ. ಮುರುಗೇಶಪ್ಪ ಅವರು ಕೃಷಿಯಲ್ಲಿ ಕೋಟಿಗಟ್ಟಲೆ ಆದಾಯ ಪಡೆದಿದ್ದಾರೆ ಎಂದರು.
ಈಗಿನ ಯುವ ಜನತೆಗೆ ಕೃಷಿಯ ಬಗ್ಗೆ ಆಸಕ್ತಿ ಕಡಿಮೆ. ಆದರೆ, ಕೃಷಿಯಿಂದಲೇ ಕೋಟ್ಯಾಧೀಶರಾಗಿರುವವರೂ ಇದ್ದಾರೆ ಎಂಬುದನ್ನು ಯುವಕರು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಇಟ್ನಾಳ್ ತಿಳಿಸಿದರು.
ಟಿ.ಕೆ.ವಿ.ಕೆ.ಗೆ ಮೂರು ರಾಷ್ಟ್ರೀಯ ಪ್ರಶಸ್ತಿ
ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಈಗ 20 ವರ್ಷ ತುಂಬಿದ್ದು, ಮೂರು ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ವಲಯ ಮಟ್ಟದ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ, ಪರಿಸರ ಸಂಬಂಧಿಸಿದ ನಿಕ್ರಾ ಪ್ರಶಸ್ತಿ ಹಾಗೂ ಬಾಳೆ ಅತ್ಯುತ್ತಮ ತಂತ್ರಜ್ಞಾನ ಅಭಿಯಾನಕ್ಕಾಗಿ ಪ್ರಶಸ್ತಿ ದೊರೆತಿವೆ. ಈ ಸಾಧನೆ ಮಾಡಿರುವ ದೇಶದ ಮೊದಲ ಕೃಷಿ ವಿಜ್ಞಾನ ಕೇಂದ್ರ ಇದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಎಂ.ಜಿ. ಬಸವನಗೌಡ ಹೇಳಿದರು.
ದೇಶದಲ್ಲಿ ಒಟ್ಟು 731 ಕೃಷಿ ವಿಜ್ಞಾನ ಕೇಂದ್ರಗಳಿವೆ. ಈ ಪೈಕಿ ತರಳಬಾಳು ಕೆ.ವಿ.ಕೆ. ಮೊದಲ 50 ಸ್ಥಾನಗಳಲ್ಲಿದೆ ಎಂದವರು ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅನ್ವಯ ಕೃಷಿ ಸಖಿ ಹಾಗೂ ಪಶು ಸಖಿ ಹುದ್ದೆಗಳನ್ನು ರೂಪಿಸಲಾಗಿದೆ. ಈ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಇವರ ಮೂಲಕ ಸಂಶೋಧನೆಯನ್ನು ರೈತರಿಗೆ ತಲುಪಿಸುವ ಕೆಲಸವನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಕೈಗೊಳ್ಳುತ್ತಿವೆ ಎಂದರು.
ಜಿಲ್ಲೆಯಲ್ಲಿ 17 ರೈತ ಉತ್ಪಾದಕ ಕಂಪನಿಗಳಿವೆ. ಇವುಗಳ ಜೊತೆ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಭಾಗಿಯಾಗಿವೆ ಎಂದು ಇಟ್ನಾಳ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿರಿಗೆರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಹೆಚ್.ಬಿ. ಮುರುಗೇಶಪ್ಪ, ರೈತರು ಪ್ರಯೋಗಶೀಲರಾದಾಗ ಹಾಗೂ ಬಹು ಬೆಳೆ ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ಆದಾಯ ಹೆಚ್ಚಿಸಲು ಸಾಧ್ಯ ಎಂದರು.
ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಇಟಗಿ ಶಿವಣ್ಣ ಮಾತನಾಡಿ, ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಮಕ್ಕಳಿಗೆ ಕೃಷಿ ಮಾಹಿತಿ ನೀಡಬೇಕಿದೆ. ಮಕ್ಕಳಿಗೆ ಕೃಷಿಯ ಬಗ್ಗೆ ತಿಳಿಸಿದಾಗ ಮಾತ್ರ ಈ ವಲಯದ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಎಂ.ಜಿ. ಬಸವನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಸಿರಿಗೆರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಕೆ.ಜಿ. ಈಶ್ವರಪ್ಪ, ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ದ ಮುಖ್ಯಸ್ಥ ಡಾ. ಆನಂದ್ ಕುಮಾರ್, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ್, ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಅಭಿಜ್ಞ ಪ್ರಾರ್ಥಿಸಿದರು. ಐಸಿಎಆರ್ – ಟಿ.ಕೆ.ವಿ.ಕೆ. ವಿಷಯ ತಜ್ಞ ಹೆಚ್.ಎಂ. ಸಣ್ಣಗೌಡ್ರ ಸ್ವಾಗತಿಸಿದರು. ವಿಷಯ ತಜ್ಞರಾದ ಡಾ. ಜಿ.ಕೆ. ಜಯದೇವಪ್ಪ ಹಾಗೂ ಡಾ. ಟಿ.ಜೆ. ಅವಿನಾಶ್ ನಿರೂಪಿಸಿದರು. ವಿಷಯ ತಜ್ಞ ಬಿ.ಒ. ಮಲ್ಲಿಕಾರ್ಜುನ ವಂದಿಸಿದರು.