ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ವೀರಗೋಟ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ
ದಾವಣಗೆರೆ, ಆ. 9- ಆದಿವಾಸಿಗಳ ಸಂಸ್ಕೃತಿ ಮಾತೃ ಪ್ರಧಾನ ಸಂಸ್ಕೃತಿಯಾಗಿದ್ದು, ಆದರೆ ಪಿತೃ ಪ್ರಧಾನ ಸಂಸ್ಕೃತಿಯಾಗಿ ವೈಭವೀಕರಿಸಲ್ಪಡುತ್ತಿದೆ ಎಂದು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ತಿಂಥಿಣಿ ಬ್ರಿಡ್ಜ್ ವೀರಗೋಟ ಕನಕ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಆರ್‌ಎಂಸಿ ರಸ್ತೆಯ ಬಂಬೂಬಜಾರ್‌ನಲ್ಲಿನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂದಿರದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಬೆಂಗಳೂರು, ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ ವೀರಗೋಟ, ತಿಂಥಿಣಿ ಬ್ರಿಡ್ಜ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 30 ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶಿಷ್ಟ ಬದುಕು ಹಾಗೂ ಆಚರಣೆ ಹೊಂದಿರುವ ಆದಿವಾಸಿಗಳು ಭಾರತದ ವೈವಿಧ್ಯತೆಯ ಪ್ರತೀಕವಾಗಿದ್ದು, ಸರ್ಕಾರದಿಂದ ಆದಿವಾಸಿಗಳಿಗೆ ಸಿಗಬೇಕಾದ ಹಕ್ಕುಗಳು ಮತ್ತು ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಸರ್ಕಾರ ಆದಿವಾಸಿಗಳ ಬಗ್ಗೆ ವಿಶೇಷ ಗಮನಹರಿಸಬೇಕೆಂದು ಆಗ್ರಹಪೂರ್ವಕ ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆನೆಪದರದವರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎಂದು ಸುಪ್ರಿಂ ಕೋರ್ಟ್ ಸಲಹೆ ನೀಡಿದ್ದು, ಇದರಿಂದ ಅನ್ಯಾಯವಾಗಲಿರುವ ಕಾರಣ ಮರು ಪರಿಶೀಲನೆ ಮಾಡುವುದು ಒಳಿತು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಮಾತನಾಡಿ, ತೀರಾ ಹಿಂದುಳಿದಿರುವ ಆದಿವಾಸಿ ಸಮುದಾಯವನ್ನು ಸರ್ಕಾರ ಸರಿಯಾದ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರುವ ಬಹುತೇಕ ಯೋಜನೆಗಳು ಯಶಸ್ವಿಯಾಗಿಲ್ಲ. ಸಮುದಾಯದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಒಟ್ಟಾಗಿ ಆದಿವಾಸಿಗಳಿಗೆ ಸಿಗಬೇಕಾದ ಹಕ್ಕುಗಳನ್ನು ಕೊಡಿಸುವಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು.
ಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ ನಾನಾ ಯೋಜನೆಗಳಿಗಾಗಿ ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸುವ ಸರ್ಕಾರ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸುತ್ತದೆ.
ಆದರೀಗ ಎತ್ತಂಗಡಿಯಾದ ಜನರ ಭೂಮಿ, ಕುಡಿಯುವ ನೀರಿನ ಸಮಸ್ಯೆ ಇದುವರೆಗೂ ಬಗೆಹರಿದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕೇಂದ್ರ ಸರ್ಕಾರ ಆದಿವಾಸಿ ಸಮುದಾಯದ ಅಭಿವೃದ್ಧಿಗಾಗಿ 24 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಹರಿಹರ ತಾಲ್ಲೂಕು ರಾಜಗೊಂಡ ಆದಿವಾಸಿಗಳಿಗೆ ಸೂರು ಕಲ್ಪಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಆದಿವಾಸಿ ಸಮುದಾಯದ ಪಿಹೆಚ್‌ಡಿ ಪದವಿ ಪಡೆದ 24 ಜನರಿಗೆ `ಆದಿವಾಸಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಂಪಿ ಕನ್ನಡ ವಿವಿಯ ಬುಡುಕಟ್ಟು ಅಧ್ಯಯನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಕೆ.ಎಂ. ಮೇತ್ರಿ ಅವರನ್ನು ಗೌರವಿಸಲಾಯಿತು.
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ನ ಎಂ. ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೇಶ್, ಮುಖಂಡರಾದ ಜಯಣ್ಣ, ಮೇದಾರ ಎಂ. ಚಂದ್ರಶೇಖರ್, ಜಿಲ್ಲಾಧ್ಯಕ್ಷ ರವಿಕುಮಾರ್ ಎಂ. ಮೇದಾರ್, ಕಾನೂನು ಸಲಹೆಗಾರ ಕೆ.ಎಸ್.ಮಧುಕುಮಾರ್, ಕುಮುದಾ, ಸೋಮಶೇಖರ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ಮಠದ್ ಮತ್ತಿತರರು ಉಪಸ್ಥಿತರಿದ್ದರು.