ಮಲೇಬೆನ್ನೂರು, ಆ.9- ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕೆರೆ ಅಂಗಳದಲ್ಲಿ ಶುಕ್ರವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಹರಳಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ಕಾರಣಿಕೋತ್ಸವವು ಜಿಟಿ ಜಿಟಿ ಮಳೆಯ ನಡುವೆಯೂ ಜಾತ್ರೆ, ಸಂಭ್ರಮದೊಂದಿಗೆ ಜರುಗಿತು.
ಪ್ರತಿ ವರ್ಷ ನಾಗರ ಪಂಚಮಿ ಹಬ್ಬದ ಅಂಗವಾಗಿ ಈ ಕಾರಣಿಕೋತ್ಸವಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಜನ ಭಕ್ತರು ಸಾಕ್ಷಿಯಾಗುತ್ತಾರೆ.
ಹರಳಹಳ್ಳಿಯ ಶ್ರೀ ಆಂಜನೇಯ ಸ್ವಾಮಿ, ಹಾಲಿವಾಣದ ಏಳೂರು ಕರಿಯಮ್ಮ, ಯಕ್ಕನಹಳ್ಳಿಯ ಶ್ರೀ ಬಸವೇಶ್ವರ ಸ್ವಾಮಿ, ತಿಮ್ಲಾಪುರದ ಆಂಜನೇಯ ಸ್ವಾಮಿ, ಉಡಸಲಮ್ಮ, ದಿಬ್ಬದಹಳ್ಳಿಯ ಆಂಜನೇಯ ಸ್ವಾಮಿ, ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಮಲೇಬೆನ್ನೂರಿನ ಜೋಡಿ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ, ಗ್ರಾಮದೇವತೆ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ದುರ್ಗಾಂಬಿಕೆ ದೇವರುಗಳ ಸಾನ್ನಿಧ್ಯದಲ್ಲಿ ಈ ಕಾರಣಿಕ ನಡೆಯಿತು.
30 ಸೆಕೆಂಡ್ನಲ್ಲಿ ಹೇಳುವ ಈ ಕಾರಣಿಕಕ್ಕಾಗಿ ಸಾವಿರಾರು ಜನ ಗಂಟೆಗಟ್ಟಲೇ ಕಾತುರದಿಂದ ಕಾದು ನಿಂತಿರುತ್ತಾರೆ. ಆ 30 ಸೆಕೆಂಡ್ನಲ್ಲಿ ಹೇಳಿದ ಕಾರಣಿಕ ಈ ರೀತಿ ಇದೆ. ` ಮುತ್ತಿನ ರಾಶಿಗೆ ಸರ್ಪ ಸುತ್ತಿತಲೇ, ಸರ್ಪಕ್ಕೆ ಹದ್ದು ಹಾಲು ಉಣಿಸಿತಲೇ ಅನ್ನನೀರು ಸಂತೃಷ್ಠಿ’ ಈ ಕಾರಣಿಕಕ್ಕೆ ಮಳೆ, ಬೆಳೆ ಮತ್ತು ಜನರ ಸುಖ – ದುಃಖಕ್ಕೆ ಸಂಬಂಧಪಟ್ಟಿದ್ದು ಎನ್ನಲಾಗಿದೆ.
ಕಾರಣಿಕ ಹೇಳುವ ವ್ಯಕ್ತಿ ಬಾಣ ಏರುವ ಮೊದಲೇ ಸ್ವಲ್ಪ ಮಳೆ ಬಂತು. ಕಾರಣಿಕ ಹೇಳುವಾಗಲು ಸ್ವಲ್ಪ ಮಳೆ ಬಂತು. ಆದರೂ ಸಹ ಜನ ಮಾತ್ರ ಕದಡದೇ ನಿಂತಲ್ಲಿ ನಿಂತು ಕಾರಣಿಕ ಕೇಳಿದ್ದು, ಗಮನ ಸೆಳೆಯಿತು.
ಕಾರಣಿಕದ ನಂತರ ಜನ ಕಾರ-ಮಂಡಕ್ಕಿ-ಮಿರ್ಚಿ ಸವಿದು ಜಾತ್ರೆ ಕೆರೆಗೆ ಕಾಲ ಭಾಗದಷ್ಟು ನೀರು ಬಂದಿದ್ದು, ಕಾರಣಿಕಕ್ಕೆ ಮೆರೆಗು ತಂದಿತು.
ಪಿಎಸ್ಐಗಳಾದ ಪ್ರಭಾ ಕೆಳಗಿನ ಮಳಿ, ಮಹಾದೇವ ಅವರ ನೇತೃತ್ವದಲ್ಲಿ ಪೊಲೀಸರು ಹೆದ್ದಾರಿಯಲ್ಲಿ ಬಂದೋಬಸ್ತ್ ಕೈಗೊಂಡಿದ್ದರು.