`ಮಕ್ಕಳ ಪಂಚಮಿ’ ಸರ್ಕಾರದಿಂದಲೇ ಆಚರಿಸಬೇಕು

`ಮಕ್ಕಳ ಪಂಚಮಿ’ ಸರ್ಕಾರದಿಂದಲೇ ಆಚರಿಸಬೇಕು

`ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಸಪ್ತಾಹದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ, ಆ. 7- ನಾಗರ ಪಂಚಮಿ ಯನ್ನು `ಮಕ್ಕಳ ಪಂಚಮಿ’ಯನ್ನಾಗಿ ಸರ್ಕಾರದ ವತಿಯಿಂದಲೇ ಆಚರಿಸುವಂತಾಗಬೇಕು. ಸರ್ಕಾರ ಕೂಡ ಈ ಬಗ್ಗೆ ಚಿಂತನೆ ನಡೆಸ ಬೇಕೆಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜೆಎಂ ಹಾಗೂ ಜಿ.ಎನ್.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲಾ ಆವರಣದಲ್ಲಿ 2024-25 ನೇ ಸಾಲಿನ ಶಾಲಾ ಸಂಸತ್ ಪದಗ್ರಹಣ ಹಾಗೂ ನಾಗರ ಪಂಚಮಿ ಪ್ರಯುಕ್ತ ಹಮ್ಮಿಕೊಂಡಿದ್ದ 26 ನೇ ವರ್ಷದ `ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಎಂಬ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾಗರ ಪಂಚಮಿ ದಿನಂದು ನೆಪ ಮಾತ್ರಕ್ಕೆ ಕಲ್ಲು ನಾಗರಕ್ಕೆ ಹಾಕುವ ಹಾಲನ್ನು ಸ್ವಲ್ಪವೇ ಹಾಲನ್ನು ನೈವೇದ್ಯ ಮಾಡಿ, ಉಳಿದದ್ದನ್ನು ದೈವ ಸ್ವರೂಪದ ತಮ್ಮ ಮಕ್ಕಳಿಗೆ, ನೆರೆಹೊರೆಯ ಮಕ್ಕಳಿಗೆ ಅಥವಾ ಅನಾಥ, ಅಂಗವಿಕಲ ಮಕ್ಕಳಿಗೆ, ಕುಷ್ಠರೋಗಿಗಳಿಗೆ ನೀಡಿದರೆ ಪೌಷ್ಠಿಕ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಿದಂತಾ ಗುತ್ತದೆ ಮತ್ತು ಹಬ್ಬದ ಆಚರಣೆಗೂ ಸಾರ್ಥಕತೆ ಬರುತ್ತದೆ ಎಂದರು.

ನಮ್ಮ ಪೂರ್ವಜರು ಆಯಾ ಕಾಲಮಾನಕ್ಕೆ ಅನುಗುಣವಾಗಿ ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುತ್ತಾ ಬರುತ್ತಿದ್ದಾರೆ. ಇಡೀ ಪ್ರಕೃತಿ ಹೊಸ ಜೀವ ಕಳೆಯಿಂದ ತುಂಬಿರುತ್ತದೆ ಹಾಗಾಗಿ ಯುಗಾದಿ ಆಚರಿಸ ಲಾಗುತ್ತದೆ. ದೀಪಗಳ ಬೆಳಗಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಸಂದೇಶ ರವಾನೆ ಮಾಡಲು ದೀಪಾವಳಿ ಆಚರಣೆ ಮಾಡಲಾಗುತ್ತದೆ ಎಂದು ಉದಾಹರಿಸಿದರು.

ನಮ್ಮ ಸುತ್ತಮುತ್ತಲೇ ಇರುವ ವಿಷದ ಮನಸ್ಸಿರುವವರನ್ನು ಶುದ್ಧ ಹಾಲಿನಿಂದ ಸ್ವಚ್ಛಗೊಳಿಸುವ ಸಲುವಾಗಿ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ. ಹಬ್ಬಗಳ ಆಚರ ಣೆಗೂ ವೈಜ್ಞಾನಿಕ ಕಾರಣಗಳಿವೆ. ಅದರೊಟ್ಟಿಗೆ ಮೂಢನಂಬಿಕೆಗಳು ಸಹ ಆಚರಣೆಗೆ ಬಂದವು. ಕಾಲಕ್ರಮೇಣ ಹಬ್ಬಗಳು ಮಾರ್ಪಾಡಾದವು ಎಂದು ಹೇಳಿದರು.

ನಾಡಿನ ಅನೇಕ ನದಿಗಳು ಮೈದುಂಬಿ ಹರಿಯುತ್ತಿದ್ದು, ಈ ವೇಳೆ ಬಾಗಿನ ಅರ್ಪಿಸುವ ಸಂಪ್ರದಾಯ ರೂಢಿಯಲ್ಲಿದೆ. ಆದರೆ ನಾವುಗಳು ವಿನೂತನ ರೀತಿಯಲ್ಲಿ ಬಾಗಿನ ಅರ್ಪಿಸುವ ಕೆಲಸ ಮಾಡುತ್ತಿದ್ದು, ನಾವು ಕೂಡಲ ಸಂಗಮದಲ್ಲಿ ಬೆಲೆ ಬಾಳುವ ಸೀರೆ, ಮೇದಾರ ಹೆಣೆದಿರುವ ಬುಟ್ಟಿ, ಧಾನ್ಯಗಳನ್ನು ನದಿಯಲ್ಲಿ ಬಿಡುವ ಬದಲು ರೈತ ಮಹಿಳಾ ಕಾರ್ಮಿಕರಿಗೆ ಬಾಗಿನ ಅರ್ಪಿಸಿ, ಗೌರವಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ಪ್ರತಿ ವರ್ಷ 51 ರೈತ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದು,  ದುಬಾರಿ ದರದ ಸೀರೆ, ಬುಟ್ಟಿ, ಧಾನ್ಯಗಳನ್ನು ವ್ಯರ್ಥ ಮಾಡುವುದು ಬೇಡ ಎಂಬ ಸದುದ್ಧೇಶದಿಂದ ಈ ರೀತಿ ವಿನೂತನ ಬಾಗಿನ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.

ಡಿಡಿಪಿಐ ಜಿ. ಕೊಟ್ರೇಶ್ ಮಕ್ಕಳಿಗೆ ಹಾಲು ಮತ್ತು ಬನ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಕ್ಕಳಲ್ಲಿ ಮನದಟ್ಟು ಮಾಡುವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಶಾಲಾ ಸಂಸತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಶಾಂತಿ ಮನೋಭಾವನೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಸಂಸತ್ ಭವನದಲ್ಲಿ ನಡೆಯುವ ಚರ್ಚೆಗಳನ್ನು ಶಾಲೆಗಳಲ್ಲಿ  ಅಣಕು ಸಂಸತ್ ಕಲಾಪ ನಡೆಸುವ ಮೂಲಕ ಮಾಹಿತಿ ನೀಡಬೇಕೆಂದರು.

ಮೂಢನಂಬಿಕೆಗಳನ್ನು ಮಕ್ಕಳಲ್ಲಿ ಬಿತ್ತದೇ ಹಾಲು ಸದೃಢ ಆರೋಗ್ಯ ಪೂರಕ. ಅತ್ಯಂತ ಪೌಷ್ಠಿಕ ಆಹಾರ. ಆದ್ದರಿಂದ ಕಲ್ಲು ನಾಗರಕ್ಕೆ ಹಾಕಿ ವ್ಯರ್ಥ ಮಾಡದೇ ಮಕ್ಕಳ ಪಾಲಾಗುವಂತೆ ನೋಡಿಕೊಳ್ಳಬೇಕು. ಕಲ್ಲು ನಾಗರಕ್ಕೆ ಸ್ವಲ್ಪ ನೈವೇದ್ಯ ಮಾಡಿ ಉಳಿದ ಹಾಲನ್ನು ಮಕ್ಕಳಿಗೆ ಕೊಡಬೇಕೆಂದು ಕರೆ ನೀಡಿದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯೆ ವಾಣಿ ಬಕ್ಕೇಶ್, ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಎಲ್.ಹೆಚ್. ಸಾಗರ್, ಮುಖಂಡ ಚನ್ನಬಸವನಗೌಡ, ರುದ್ರಮ್ಮ ಮಲ್ಲಿಕಾರ್ಜುನಪ್ಪ, ಕೆ.ಎಲ್.ಇ. ಟ್ರಸ್ಟ್ ಕಾರ್ಯದರ್ಶಿ ಅಗಡಿ ಮಂಜುನಾಥ್, ಜ್ಯೋತಿ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!