ಮಗುವನ್ನು ಚಿವುಟಿ ಜೋಗುಳ ಹಾಡುವ ಜನ

ಮಗುವನ್ನು ಚಿವುಟಿ ಜೋಗುಳ ಹಾಡುವ ಜನ

ಅನಧಿಕೃತ ಸಭೆ : ಬೃಹನ್ಮಠದ ಕಾರ್ಯದರ್ಶಿ

ಸಿರಿಗೆರೆ, ಆ. 4 – ದಾವಣಗೆರೆಯಲ್ಲಿ ಇಂದು ನಡೆದ ಸಭೆಯ ಸಂಬಂಧ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ಮಠದ ಶಿಷ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಾಗಲೀ, ಚನ್ನಗಿರಿ ಶಾಸಕರಾದ ಶಿವಗಂಗಾ ಬಸವರಾಜು ಅವರಾಗಲೀ, ನಮ್ಮ ಸಮಾಜದ ವಿವಿಧ ರಾಜಕೀಯ ಪಕ್ಷಗಳ ಇನ್ನಿತರೆ ಶಾಸಕರಾಗಲೀ, ಮಂತ್ರಿಗಳಾಗಲೀ, ನಮ್ಮ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಒಂದು ನೂರು ವರ್ಷಗಳ ಇತಿಹಾಸವುಳ್ಳ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಈಗಿನ ಅಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪನವರಾಗಲೀ ಮತ್ತು ರಾಜ್ಯಾದ್ಯಂತ ಇರುವ ಸಮಾಜದ ಪ್ರಮುಖ ಶಿಷ್ಯರಾಗಲೀ ಭಾಗವಹಿಸಿರುವುದಿಲ್ಲ.

ಇದೊಂದು ಅನಧಿಕೃತ ಸಭೆ. ಇದರಲ್ಲಿ ಪ್ರಸ್ತಾಪಿಸಿದ ಅನೇಕ ಸಂಗತಿಗಳು ಸತ್ಯಕ್ಕೆ ಬಾಹಿರವಾಗಿವೆ. ಸಭೆಯಲ್ಲಿ ಮಾತನಾಡಿದವರು ಯಾರೂ ನಮ್ಮ ಸಂಘದ ಬೈಲಾವನ್ನು ಸರಿಯಾಗಿ ಓದಿಕೊಂಡಂತೆ ಕಾಣುವುದಿಲ್ಲ. ನಮ್ಮ ಸಂಘ ಸ್ಥಾಪನೆಯಾಗಿದ್ದು ನೂರು ವರ್ಷಗಳ ಹಿಂದೆ ಅಂದರೆ 1923 ರಲ್ಲಿ. ಆಗಿನ ನಮ್ಮ ಸಮಾಜದ ಹಿರಿಯರು ಸಂಘ ಸ್ಥಾಪನೆ ಮಾಡುವಾಗ ರಚಿಸಿದ ಬೈಲಾಕ್ಕೆ ತಿದ್ದುಪಡಿ ತಂದವರು ದೊಡ್ಡ ಗುರುಗಳು. 1977 ರಲ್ಲಿ ದೊಡ್ಡ ಗುರುಗಳು ಪರಿಷ್ಕರಿಸಿ ಜಾರಿಗೆ ತಂದ ಈ ಬೈಲಾದಲ್ಲಿ ಈಗಿನ ಗುರುಗಳು ಒಂದು ಅಕ್ಷರವನ್ನೂ ಬದಲಾವಣೆ ಮಾಡಿರುವುದಿಲ್ಲ. ಲಿಂಗೈಕ್ಯ ಗುರುವರ್ಯರ ಕಾಲದಲ್ಲಿ ಇದ್ದಂತೆಯೇ ಈಗಲೂ ಇದೆ. 

ಈಗಿನ ಗುರುವರ್ಯರು ಮಠಕ್ಕೆ ಐ.ಟಿ ಪರಿಣತರ ಸಲಹೆ ಮೇರೆಗೆ ನಿಯಮಾನುಸಾರ ತೆರಿಗೆ ವಿನಾಯತಿಯನ್ನು ಪಡೆಯುವ ಸಲುವಾಗಿ ದೊಡ್ಡ ಗುರುಗಳು ಬದುಕಿದ್ದಾಗಲೇ ಅವರ ಗಮನಕ್ಕೆ ತಂದು, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಆಗಿನ ಅಧ್ಯಕ್ಷರಾಗಿದ್ದ ಆರೂಢ ದಾಸೋಹಿ ಮಾಗನೂರು ಬಸಪ್ಪನವರು ಮತ್ತು ಸಮಾಜದ ನೂರಾರು ಪ್ರಮುಖರ ಸಭೆಯನ್ನು ಕರೆದು ಎಲ್ಲರ ಒಪ್ಪಿಗೆಯನ್ನು ಪಡೆದು 1990 ರಲ್ಲಿ ಮಠದ ಟ್ರಸ್ಟ್ ಡೀಡ್  ರಿಜಿಸ್ಟರ್ ಮಾಡಿಸಿರುತ್ತಾರೆ.  ಆಗಿನ ಕೇಂದ್ರ ಸರ್ಕಾರದ ಅನುಮೋದನೆಯನ್ನೂ ಪಡೆದಿರುತ್ತಾರೆ.  ಈ ತೆರಿಗೆ ವಿನಾಯಿತಿಯು ಭಾರತದ ಗೆಜೆಟ್ ನಲ್ಲಿ ಪ್ರಕಟವಾಗಿರುತ್ತದೆ.

ನಿಜ ಸಂಗತಿ ಹೀಗಿದ್ದರೂ ಈಗಿನ ಶ್ರೀ ಜಗದ್ಗುರುಗಳವರು ಮಠದ ಎಲ್ಲಾ ಆಸ್ತಿಪಾಸ್ತಿಗಳನ್ನು ತಮ್ಮ ಸ್ವಂತ ಹೆಸರಿಗೆ ಮಾಡಿಕೊಂಡಿದ್ದಾರೆಂದೂ, ಕಳೆದ 35 ವರ್ಷಗಳಿಂದ ಯಾರ ಗಮನಕ್ಕೂ ತರದೆ ಟ್ರಸ್ಟ್ ಡೀಡನ್ನು ಮುಚ್ಚಿಟ್ಟುಕೊಂಡಿದ್ದಾರೆಂದೂ ಕೆಲವರು ಮಿಥ್ಯಾರೋಪ ಮಾಡಿ ಅಪಪ್ರಚಾರ ನಡೆಸುತ್ತಿದ್ದಾರೆ. ವಾಸ್ತವವಾಗಿ ಮಠದ ಟ್ರಸ್ಟ್ ಡೀಡ್ ನ 12 ನೆಯ ಕಲಂನಲ್ಲಿ ಯಾವುದೇ ಆಸ್ತಿ/ಹಣ ಪೀಠಾಧಿಪತಿಗಳ, ಶಾಖಾಮಠದ ಸ್ವಾಮಿಗಳ ಅಥವಾ ಮಠದಿಂದ ವ್ಯವಹರಿಸಿದ ಯಾವ ವ್ಯಕ್ತಿಯ ಹೆಸರಿಗಿದ್ದರೂ ಅದೆಲ್ಲವೂ ಮಠಕ್ಕೇ ಸೇರಿದ್ದೆಂದೂ, ಯಾರ ವೈಯಕ್ತಿಕ ಆಸ್ತಿ ಅಲ್ಲವೆಂದೂ ಸ್ಪಷ್ಟವಾಗಿ ಬರೆಯಲಾಗಿದೆ.

ಮಠದ ಟ್ರಸ್ಟ್ ಡೀಡ್ ನಲ್ಲಿ ಸಂಘದ ಬೈಲಾಕ್ಕೆ ಪೂರಕವಾದ ನಿಯಮಗಳು ಇವೆಯೇ ಹೊರತು ವಿರುದ್ಧವಾದ ಯಾವ ನಿಯಮವೂ ಇಲ್ಲ. ಮಠದ ಉತ್ತರಾಧಿಕಾರಿಯ ಆಯ್ಕೆಯನ್ನು ಸಂಘದವರು ಮಾಡಿ ಶ್ರೀ ಜಗದ್ಗುರುಗಳವರ ಒಪ್ಪಿಗೆಯನ್ನು ಪಡೆಯಬೇಕೆಂಬ ನಿಯಮ ಸಂಘದ ಬೈಲಾದಲ್ಲಿದೆ. ಮಠದ ಟ್ರಸ್ಟ್ ಡೀಡ್ ನಲ್ಲಿಯೂ ಸಹ ಇದೇ ನಿಯಮವಿದೆ. ಶ್ರೀ ಜಗದ್ಗುರುಗಳವರು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಟ್ರಸ್ಟ್ ಡೀಡ್ ನಲ್ಲಿ ಇಲ್ಲವೇ ಇಲ್ಲ. ಅಲ್ಲದೆ ಪೀಠಾಧಿಪತಿಗಳ ಮೇಲೆ ಏನಾದರೂ ಆರೋಪಗಳು ಬಂದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಸಂಘಕ್ಕೆ ಇದೆ ಎಂದು ಟ್ರಸ್ಟ್ ಡೀಡ್ ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.

ದುರದೃಷ್ಟವಶಾತ್ ಪೀಠಾಧಿಪತಿಗಳು ಜೀವಂತವಾಗಿ ಇರದೇ ಇದ್ದ ಪಕ್ಷದಲ್ಲಿ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘವು ಮಠವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂಬ ವಿವರವಾದ ನಿಯಮಗಳನ್ನೂ ಟ್ರಸ್ಟ್ ಡೀಡ್ ನಲ್ಲಿ ರೂಪಿಸಲಾಗಿದೆ. ಇದಾವುದರ ಪರಿಜ್ಞಾನವೂ ಇಲ್ಲದ ಜನರು ಸುಳ್ಳು ಆರೋಪಗಳನ್ನು ಮಾಡಿ ಮಠದ ಗೌರವ ಘನತೆಗಳಿಗೆ ಮತ್ತು ದೇಶ ವಿದೇಶಗಳಲ್ಲಿರುವ ಅಪಾರ ಶಿಷ್ಯ ಸಮುದಾಯದ ಭಕ್ತಿ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ.

ಹಿರೇಕೆರೂರಿನ ಎಸ್.ಎಸ್. ಪಾಟೀಲ್ ಮತ್ತಿತರ 9 ಜನರು ಚಿತ್ರದುರ್ಗ ಕೋರ್ಟಿನಲ್ಲಿ ಶ್ರೀ ಜಗದ್ಗುರುಗಳವರು ಉತ್ತರಾಧಿಕಾರಿ ಆಯ್ಕೆಯನ್ನು ಮಾಡಬಾರದೆಂದು, ಟ್ರಸ್ಟ್ ಡೀಡ್ ರದ್ದುಪಡಿಸಬೇಕೆಂದು ಮಠದ ವಿರುದ್ಧ ಮೂರು ವರ್ಷಗಳ ಹಿಂದೆ ದಾಖಲಿಸಿರುವ ಕೇಸು ಇನ್ನೂ ವಿಚಾರಣೆಯ ಹಂತದಲ್ಲಿದೆ. ಇದೇ ಜನ ಇಂದು ನಡೆದ ಅನಧಿಕೃತ ಸಭೆಯ ವೇದಿಕೆ ಮೇಲೆ ವಿರಾಜಮಾನರಾಗಿದ್ದಾರೆ. ಇವರ ಉದ್ದೇಶ ಏನೆಂಬುದು ಭಕ್ತಾದಿಗಳಿಗೆ ಗೊತ್ತಿರದ ಸಂಗತಿ ಏನೂ ಅಲ್ಲ.

ಇಂದಿನ ಸಭೆಯಲ್ಲಿ ಮಾತನಾಡಿದವರು ಮಗುವನ್ನು ಚಿವುಟಿ ಜೋಗುಳ ಹಾಡುವ ಕೆಲಸವನ್ನು ಮಾಡಿದ್ದಾರೆ. ಸಂಘದ ಅಧ್ಯಕ್ಷರು ನಿನ್ನೆಯ ದಿನ ಪ್ರಕಟಣೆ ಹೊರಡಿಸಿದಂತೆ ಮಠದ ಆಡಳಿತದಲ್ಲಿ ಏನಾದರೂ ದೋಷಗಳಿದ್ದರೆ ಸಂಘಕ್ಕೆ ಲಿಖಿತ ದೂರು ಸಲ್ಲಿಸಲಿ, ಸಂಘದವರು ವಿಚಾರಣೆ ನಡೆಸಲಿ ಎಂದು ಜಗದ್ಗುರುಗಳು ಆದೇಶಿಸಿದ್ದಾರೆ.

error: Content is protected !!