ಸಾದರ ಸ್ವಾಮಿಗಳ ನಿವೃತ್ತಿಗೆ ಸಮಾಜ ಆಗ್ರಹ

ಸಾದರ ಸ್ವಾಮಿಗಳ ನಿವೃತ್ತಿಗೆ ಸಮಾಜ ಆಗ್ರಹ

ದಾವಣಗೆರೆ, ಅ. 4 – ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸ್ವಯಂ ನಿವೃತ್ತಿ ಘೋಷಿಸಿಕೊಂಡು ಉತ್ತರಾಧಿಕಾರಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ತರಳಬಾಳು ಜಗದ್ಗುರುಗಳು ರೂಪಿಸಿಕೊಂಡಿರುವ ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದುಗೊಳಿಸಬೇಕು. ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ರೂಪಿಸಿದ್ದ ಬೈಲಾ ಯಥಾವತ್ತಾಗಿ ಜಾರಿಗೆ ತರಬೇಕು. ಇದಕ್ಕೆ ಒಪ್ಪದಿದ್ದರೆ ಭಕ್ತರು ಪಾದಯಾತ್ರೆ ಮೂಲಕ ಪ್ರತಿಭಟಿಸಲಿದ್ದಾರೆ ಎಂದು ನಿರ್ಧರಿಸಲಾಗಿದೆ.

ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಅಪೂರ್ವ ರೆಸಾರ್ಟ್‌ನಲ್ಲಿ ನಡೆದ ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ತರಳಬಾಳು ಜಗದ್ಗುರು ಹಾಗೂ ಸಾಣೇಹಳ್ಳಿ ಸ್ವಾಮೀಜಿಗಳಿಬ್ಬರೂ ಉತ್ತರಾಧಿಕಾರಿ ನೇಮಿಸಿ ನಿವೃತ್ತರಾಗಬೇಕು. ಈ ಬಗ್ಗೆ ತರಳಬಾಳು ಜಗದ್ಗುರುಗಳ ಬಳಿ ಮಾತನಾಡಲು ಆಗಸ್ಟ್ 18ರಂದು ತಮ್ಮ ನೇತೃತ್ವದ ನಿಯೋಗದಲ್ಲಿ ತೆರಳಲಾಗುವುದು ಎಂದು ತಿಳಿಸಿದರು.

ಮಠವು ಸಮಾಜದ ಆಸ್ತಿ. ತಮ್ಮ ಕಾಲಾ ನಂತರ ಈ ರೀತಿ ನಡೆಯಬೇಕು ಎಂದು ಯಾರೂ ಹೇಳಲಿಕ್ಕಾಗದು. ಉತ್ತರಾಧಿಕಾರಿ ನೇಮಿಸಿ ಪದತ್ಯಾಗ ಮಾಡಬೇಕು ಎಂದು ನಿಯೋಗದಲ್ಲಿ ತೆರಳಿ ತಿಳಿಸುತ್ತೇವೆ. ಅದಕ್ಕೆ ಒಪ್ಪದೇ, ಹಠ ಮಾಡಿ ನಾನೇ ಇರುತ್ತೇನೆ ಎಂದರೆ ಮುಂದಿನ ಉಪಾಯ ಮಾಡೋಣ ಎಂದು ಎಸ್ಸೆಸ್ ತಿಳಿಸಿದರು.

ಹತ್ತು ವರ್ಷಗಳ ಹಿಂದೆಯೇ ಪದತ್ಯಾಗ ಮಾಡುವುದಾಗಿ ತರಳಬಾಳು ಶ್ರೀಗಳು ಹೇಳಿದ್ದರು. ಆಗ ಹಳ್ಳಿಯ ಮುಗ್ಧ ಜನ ಪದತ್ಯಾಗ ಮಾಡುವುದು ಬೇಡ ಎಂದಿದ್ದರು. ನಂತರ ಶ್ರೀಗಳು ಎಂದೂ ಪದತ್ಯಾಗದ ಮಾತನಾಡಿಲ್ಲ. ಈಗ ಶ್ರೀಗಳ ಏಕವ್ಯಕ್ತಿ ಟ್ರಸ್ಟ್ ಡೀಡ್ ಬಗ್ಗೆ ಜನರಿಗೆ ಗೊತ್ತಾಗಿ ಪ್ರಶ್ನಿಸುತ್ತಿದ್ದಾರೆ ಎಂದರು.

ಸಮಾಜದ ಮುಖಂಡ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ವಿಲ್ ಬರೆಯುವ ಮೂಲಕ ಮಠದ ಉತ್ತರಾಧಿಕಾರಿ ನೇಮಿಸಲಾಗದು. ಮಠದ ಚಿಂತನೆ ಹಾಗೂ ಸದ್ಭಕ್ತರ ಬಗ್ಗೆ ಉತ್ತರಾಧಿಕಾರಿಗೆ ತಿಳಿದಿರಬೇಕು. ಇದನ್ನೆಲ್ಲ ತಿಳಿಯಲು ಉತ್ತರಾಧಿಕಾರಿಗೆ ಸಮಯ ಬೇಕು. ಹೀಗಾಗಿ ತಕ್ಷಣವೇ ಉತ್ತರಾಧಿಕಾರಿ ನೇಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಧು ವೀರಶೈವ ಸಮಾಜದ ಮುಖಂಡ ಅಣಬೇರು ರಾಜಣ್ಣ, ತರಳಬಾಳು ಜಗದ್ಗುರುಗಳು ಉತ್ತರಾಧಿಕಾರಿ ನೇಮಕ ಹಾಗೂ ಏಕವ್ಯಕ್ತಿ ಟ್ರಸ್ಟ್‌ ಡೀಡ್ ರದ್ದುಗೊಳಿಸಲು ಒಪ್ಪದೇ ಇದ್ದರೆ ಸಮಾಜದ 50 ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಮಠಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

1990ರ ವೇಳೆಯೇ ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಳ್ಳಲಾಗಿತ್ತು. ಈ ವಿಷಯ ಇತ್ತೀಚೆಗೆ ಸಮಾಜದ ಮುಖಂಡರಿಗೆ ತಿಳಿದಿದೆ ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಟಿ. ಗುರುಸಿದ್ದನಗೌಡ್ರು, ವಡ್ನಾಳ್ ರಾಜಣ್ಣ, ಶಿವಮೊಗ್ಗದ ರುದ್ರೇಗೌಡ ಹಾಗೂ ಬೆನಕಪ್ಪ, ಬ್ಯಾಡಗಿ ಮಾಜಿ ಶಾಸಕ ಸುರೇಶ್ ಪಾಟೀಲ್, ಶಿವಮೊಗ್ಗದ ಮಾಜಿ ಶಾಸಕ ಚಂದ್ರಶೇಖರಪ್ಪ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಆನಗೋಡು ನಂಜುಂಡಪ್ಪ, ಹೆಚ್.ಎಂ. ಓಂಕಾರಪ್ಪ, ಮಹೇಶ್ ಚಟ್ನಹಳ್ಳಿ, ಜೆ.ಆರ್. ಷಣ್ಮುಖಪ್ಪ, ಮಾಜಿ ಕುಲಪತಿ ಕೆ.ಬಿ. ಸಿದ್ದಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ, ಶ್ರೀನಿವಾಸ ಮೆಳ್ಳೇಕಟ್ಟೆ, ಸಂತೋಷ್ ಮೆಳ್ಳೇಕಟ್ಟೆ, ನಾಗರಾಜ ಬಣಕಾರ ಕುರುಡಿ, ವಿಶ್ವನಾಥ ಮಂಡಲೂರು, ಚೇತನ್ ಎಲೆಬೇತೂರು, ಬಸವಲಿಂಗಪ್ಪ ಕಲಪನಹಳ್ಳಿ, ನಾಗರಾಜ ಪಲ್ಲಾಗಟ್ಟೆ, ಹಿರೇಮೇಗಳಗೇರಿ ಟಿ.ಎಂ. ಶಿವಮೂರ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!