ದಾವಣಗೆರೆ, ಆ. 2-ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಪ್ರಗತಿಪರ ಧ್ಯೇಯೋದ್ದೇಶಗಳು ಮಾನವ ಜೀವನದ ಉನ್ನತಿಗೆ ಸಹಕಾರಿ ಯಾಗಿವೆ ಎಂದು ರಂಭಾಪುರಿ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಅಭಿನವ ರೇಣುಕಾ ಮಂದಿರದ ಸಭಾಂಗಣದಲ್ಲಿ ಶ್ರೀಮದ್ವೀರಶೈವ ಸದ್ಬೋ ಧನಾ ಸಂಸ್ಥೆ ಸಂಘಟಿಸಿದ ಜನಜಾಗೃತಿ ಧರ್ಮ ಸಮಾವೇಶದ 4ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಬದುಕು ಉಜ್ವಲಗೊಳ್ಳುತ್ತದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ ಎಂದರು.
ಸಂಪತ್ತು ಬೆಳೆದಂತೆ ಸಂಸ್ಕೃತಿ ಬೆಳೆಯಬೇಕು. ಮನುಷ್ಯನ ಬುದ್ಧಿ ಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಲಾರದ್ದೇ ಇಂದಿನ ಎಲ್ಲಾ ಅವಾಂತರಗಳಿಗೆ ಕಾರಣ ವೆಂದರೆ ತಪ್ಪಾಗದು ಎಂದು ಹೇಳಿದರು.
ಮನುಷ್ಯ ಜೀವನದಲ್ಲಿ ಬದಲಾವಣೆ, ಬೆಳವಣಿಗೆ ಎರಡೂ ಅವಶ್ಯಕ. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ `ಸಂಸ್ಕಾರ’ ಬಹುದೊಡ್ಡ ಲೋಪವಾಗಿದೆ. ಸಂಸ್ಕಾರ ಉಳಿಸಿ, ಬೆಳೆಸುವಲ್ಲಿ ತಾಯಂದಿರ ಪಾತ್ರ ಅಪಾರವಾದುದು ಎಂದರು.
ಒತ್ತಾಯ, ಒತ್ತಡದ ಬದುಕಿನಲ್ಲಿ ಮಕ್ಕಳಿದ್ದಾರೆ. ನೈತಿಕ ಶಿಕ್ಷಣ ಬಿತ್ತುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ರಂಭಾಪುರಿ ಶ್ರೀಗಳು ತಾಯಿ ಹೃದಯ ಹೊಂದಿದವರು, ಸಹಾಯ ಕೇಳಿ ಅವರ ಬಳಿ ಹೋದವರಿಗೆ ಇಲ್ಲಾ ಎಂದು ವಾಪಸ್ ಕಳಿಸಿದ ಉದಾಹರಣೆಗಳೇ ಇಲ್ಲ. ಕೇವಲ ಧಾರ್ಮಿಕ ಕಾರ್ಯಗಳನ್ನಲ್ಲದೇ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಸಂಸ್ಕಾರ, ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಮಾತನಾಡಿ, ಇಡೀ ರಾಜ್ಯದ ಎಲ್ಲಾ ವೀರಶೈವ ಮಠಾಧೀಶರನ್ನು ಒಂದೇ ಸೂರಿನಡಿ ಸೇರಿಸಿ, ವೀರಶೈವ ಮತ್ತು ಲಿಂಗಾಯತ ಎಂಬ ಗೊಂದಲ ನಿವಾರಣೆ ಜೊತೆಗೆ ಎಲ್ಲಾ ಒಳಪಂಗಡಗಳನ್ನು ಒಗ್ಗೂಡಿಸುವ ಅನಿವಾರ್ಯತೆ ಇದೆ. ಇದಕ್ಕೆ ರಂಭಾಪುರಿ ಜಗದ್ಗುರುಗಳು ಮನಸ್ಸು ಮಾಡಬೇಕೆಂದು ಮನವಿ ಮಾಡಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಮಾತನಾಡಿ, ಇಂದಿನ ಟಿ.ವಿಗಳಲ್ಲಿ ಬಿತ್ತರಗೊಳ್ಳುವ ಧಾರಾವಾಹಿಗಳು ಸಂಸಾರಗಳನ್ನು ಒಂದುಗೂ ಡಿಸುವ ಬದಲು ಬಾಂಧವ್ಯ ಕದಡುವ ಕೆಲಸ ಮಾಡುತ್ತಿವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ, ಸದ್ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕೆಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್ ಮಾತನಾಡಿ, ಒಗ್ಗಟ್ಟಿನ ಕೊರತೆಯಿಂದಾಗಿ ವೀರಶೈವ ಲಿಂಗಾಯತರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಶಿವಗಂಗಾ ಶ್ರೀನಿವಾಸ್ ಅವರಿಗೆ ‘ಶ್ರಮ ಸೇವಾ ಸಂಜೀವಿನಿ’ ಎಂಬ ಬಿರುದನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ತಾವರಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಜೀವನದಲ್ಲಿ ಧರ್ಮ, ದೇವರು ಮತ್ತು ಗುರುವನ್ನು ಮರೆಯಬಾರದೆಂದರು. ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹನುಮಾಪುರದ ಸೋಮಶೇಖರ ಶಿವಾಚಾರ್ಯರು, ನಂದಿತಾವರೆ ಸಿದ್ಧಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ವೈದ್ಯೆ ಡಾ.ಎಸ್.ಎಸ್.ನೇತ್ರಾವತಿ, ಜಾನ ಪದ ಕಲಾವಿದ ಮಹೇಶ್ವರಗೌಡ ಲಿಂಗದಹಳ್ಳಿ, ಎಸ್.ಪರಮೇಶ್ವರಪ್ಪ ಬಣಕಾರ, ಜಿ.ಹೆಚ್.ನಾಗರಾಜಪ್ಪ, ವಿರೂಪಾಕ್ಷಪ್ಪ ಅಣಜಿ, ಕೆ.ವಿ.ಗುರುರಾಜ್, ವೀರಮ್ಮ ಆವರಗೊಳ್ಳ, ಪುಷ್ಪ ಆವರಗೊಳ್ಳ, ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು.
ಟಿ.ಜಿ.ಸುರೇಶ ಸ್ವಾಗತಿಸಿದರು. ಪಂಚಾಕ್ಷರಯ್ಯ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಹರಿಹರದ ಕಾಂತರಾಜ-ವೀರೇಶ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು.
ಪ್ರೊ.ಮಲ್ಲಯ್ಯ ನಿರೂಪಿಸಿದರು.
ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತು ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಅವರು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.