ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್
ದಾವಣಗೆರೆ, ಆ. 1 – ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನ ಬದ್ಧತೆಯ ಆಶಯವಾಗಿದ್ದು, ಅದನ್ನು ಕಾರ್ಯ ರೂಪಕ್ಕೆ ತರಬೇಕಾದದ್ದು ಆಳುವವರ ಜವಾಬ್ಧಾರಿಯೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ರಗ್ಗು, ಹೊದಿಕೆ ಇತರೆ ಸಾಮಗ್ರಿ ವಿತರಣಾ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಂದು ಅಭೂತಪೂರ್ವ ಬದಲಾವಣೆ ತಂದಿದ್ದು, ಶಿಕ್ಷಣದಿಂದ ದೂರವಿದ್ದಂತಹ ಪರಿಶಿಷ್ಟ ಮಕ್ಕಳೂ ಈಗ ಶೈಕ್ಷಣಿಕ ಸಾಧನೆ ಮಾಡುತ್ತಿರುವುದು ಗಮನಾರ್ಹ ಎಂದರು.
ಸಮುದಾಯವೂ ಇಂತಹ ಶೈಕ್ಷಣಿಕ ಕಾರ್ಯಕ್ಕೆ ಕೈಜೋಡಿಸಬೇಕು. ಹಿರಿಯರು, ದಾನಿಗಳು, ಸಮಾಜದ ಮುಖಂಡರ ನೆರವಿನಿಂದ ಇಂತಹ ಕಾರ್ಯ ಕೈಗೊಂಡಿದ್ದು ಇತರರಿಗೂ ಪ್ರೇರಣೆ ಯಾಗಿದೆ. ಮಕ್ಕಳ ಭವಿಷ್ಯ ಬೇರೆ ಯಾರ ಕೈಯ್ಯಲ್ಲೂ ಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ತಮ್ಮ ಭವಿಷ್ಯ ತಮ್ಮ ಕೈಯ್ಯಲ್ಲೇ ಇದೆಯೆಂಬುದನ್ನು ಅರ್ಥ ಮಾಡಿಕೊಂಡು, ಉನ್ನತ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಂಘದ ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಹರಿಜನ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಕಲ್ಪದೊಂದಿಗೆ ಇಲ್ಲಿನ ಹಿರಿಯರಿಗೆ ಷರತ್ತು ವಿಧಿಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1934ರಲ್ಲಿ ದಾವಣಗೆರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಂದಿದ್ದರು. ಅಂದು ಗಾಂಧೀಜಿ ಚೌಕಾಕಾರದಲ್ಲಿ ಸಾಗಿದ ಜಾಗವೇ ಇಂದು ಸಂಸ್ಥೆಯ ಕಾಂಪೌಂಡ್ ಇರುವ ಜಾಗ. ಅಷ್ಟೂ ಜಾಗವನ್ನು ಹರಿಜನರ ಮಕ್ಕಳ ಶೈಕ್ಷಣಿಕ ಕಾರ್ಯಕ್ಕಾಗಿ ಕೊಡಿಸಿದ ಮಹಾತ್ಮ ಗಾಂಧೀಜಿ ಸಂಕಲ್ಪ ಸಾಕಾರಗೊಳ್ಳುತ್ತಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಎಸ್.ವಿಜಯಕುಮಾರ್, ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಉಪಾ ಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಂಟಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ.ಚಂದ್ರಣ್ಣ, ಸದಸ್ಯರಾದ ಗಂಗಾಧರಪ್ಪ, ಬಿ.ಎಂ.ಈಶ್ವರಪ್ಪ, ಎಲ್.ಎಂ.ಎಚ್.ಸಾಗರ್, ಹಿರಿಯ ವಕೀಲ ಮಂಜಪ್ಪ ಹಲಗೇರಿ, ನಾಗರಾಜಪ್ಪ ಆದಾಪುರ, ಜಿ.ಎನ್.ಸಂತೋಷ, ಯುವ ಮುಖಂಡ ರಾಕೇಶ ಇತರರು ಇದ್ದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅವರುಗಳನ್ನು ಸಂಸ್ಥೆ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸನ್ಮಾನಿಸಿದರು.