ಸಿದ್ದೇಶ್ವರ ವಿರುದ್ಧ ಕಿಡಿಕಾರಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ, ಜು. 30 – `ಅವರು ಮೊದಲು ಸಂಸ್ಕಾರ ಕಲಿಯಲಿ. ಅವರ ಮಕ್ಕಳಿಗೆ ಕಲಿಸಲಿ’ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಿಡಿಕಾರಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಸ್.ಎ. ರವೀಂದ್ರನಾಥ್ ಅವರು ಹಿರಿಯರು ಅವರಿಗೆ ಬೆಲೆ ಕೊಡಬೇಕು ಎಂದು ನಮ್ಮ ತಂದೆ ಸರಿಯಾಗಿಯೇ ಹೇಳಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿಯ ಯಾವ ನಾಯಕ, ಮುಖಂಡರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ಪಕ್ಷದ ಎಲ್ಲ ಶಾಸಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಗೆಲುವು ನಮ್ಮದಾಗಿದೆ.
ಯಡಿಯೂರಪ್ಪ ಅವರು ಹೊಂದಾಣಿಕೆ ಮಾಡಿಕೊಳ್ಳುವ ನಾಯಕರೇ? ಹೊನ್ನಾಳಿಯಲ್ಲಿ ರೇಣುಕಾ ಚಾರ್ಯ ಹಾಗೂ ಡಿ.ಜಿ. ಶಾಂತನಗೌಡ್ರು ಹೊಂದಾಣಿಕೆ ಮಾಡಿಕೊಳ್ಳುವಂಥವರೇ? ಸೋತ ಮೇಲೆ ಮನಬಂದಂತೆ ಆರೋಪ ಮಾಡಬಾರದು ಎಂದರು.
ನಾನು ಹಾಗೂ ಎಂ.ಬಿ. ಪಾಟೀಲ್ 30 ವರ್ಷದ ಸ್ನೇಹಿತರು. ಏಕವಚನದಲ್ಲಿಯೇ ಮಾತನಾಡುತ್ತೇವೆ. ಸಂಸ್ಕಾರದ ಬಗ್ಗೆ ಬೇರೆಯವರ ಹತ್ತಿರ ಹೇಳಿಸಿಕೊಳ್ಳಬೇಕಿಲ್ಲ ಎಂದರು. ಅಧಿಕಾರಿಗಳ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತ್ತೀಚೆಗೆ ಬಂದ ಹೊಸ ಅಧಿಕಾರಿಗಳಿಗೆ ಶಾಸಕರ ಬಗ್ಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿ ಎಂದರು.