ಎಸ್ಸೆಸ್ ಕೊಂಡಿ ಮಂಚಣ್ಣನಂತೆ

ಎಸ್ಸೆಸ್ ಕೊಂಡಿ ಮಂಚಣ್ಣನಂತೆ

ಮಕ್ಕಳಿಗೆ ಸಂಸ್ಕಾರ ಕಲಿಸಲಿ : ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ, ಜು. 30 – ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕೊಂಡಿ ಮಂಚಣ್ಣನಂತೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಗನ ಜಿಂಕೆ ಪ್ರಕರಣದಲ್ಲಿ ಕಣ್ಣೀರು ಹಾಕಿದ್ದಾರೆ. ಅವರು ಮೊದಲು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಲಿ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಕಿಡಿ ಕಾರಿದ್ದಾರೆ.

ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಈ ಹಿಂದೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ಟ್ರಾಪ್ ಪ್ರಕರಣದಲ್ಲಿ ಸಿಲುಕಿಸಿದ್ದು ನಾನೇ ಎಂದು ಅಪಪ್ರಚಾರ ಮಾಡಿದರು. ಈ ಟ್ರಾಪ್ ಬಗ್ಗೆ ಈ ಗಂಗೆ ಸತ್ಯವಾಗಲೂ ನನಗೆ ಗೊತ್ತಿಲ್ಲ. ಸಂಬಂಧವೂ ಇಲ್ಲ ಎಂದರು.

ಈಗ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಾನು ಮಾತನಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಕೊಂಡಿ ಮಂಚಣ್ಣನಂತಹ ಕೆಲಸ ಎಂದು ಸಿದ್ದೇಶ್ವರ ಕಿಡಿ ಕಾರಿದರು.

ರಾಜ್ಯ ಹಾಗೂ ಜಿಲ್ಲೆಯ ಕೆಲ ನಾಯಕರಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಹೇಳಿದ್ದೇನೆ. ಆದರೆ, ಯಾರ ಹೆಸರೂ ಹೇಳಿಲ್ಲ. ಅಲ್ಲದೇ, ಯಡಿಯೂರಪ್ಪನವರು ರಾಷ್ಟ್ರೀಯ ನಾಯಕರೇ ಹೊರತು ರಾಜ್ಯ ನಾಯಕರಲ್ಲ. ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರಾಧ್ಯಕ್ಷರಾಗಿದ್ದರೋ, ಅದೇ ರೀತಿ ಯಡಿಯೂರಪ್ಪ ರಾಷ್ಟ್ರೀಯ ನಾಯಕರು ಎಂದರು.

ಯಡಿಯೂರಪ್ಪ ಹಾಗೂ ಅವರ ಮಕ್ಕಳು ಜೈಲಿಗೆ ಹೋಗುತ್ತಾರೆ ಎಂದು ಈ ಹಿಂದೆ ಅವರು ಹೇಳಿದ್ದರು. ಅದು ಚೆನ್ನಾಗಿತ್ತಾ? ಸಚಿವ ಎಂ.ಬಿ. ಪಾಟೀಲರು ಅವರ ಮನೆಗೆ ಬಂದಾಗ ಯಾವ ರೀತಿ ಬೈದು ಕಳಿಸಿದಿರಿ ಎಂಬುದು ಪತ್ರಿಕೆ – ಟಿವಿಗಳಲ್ಲಿ ಬಂದಿದೆ. ಮೊದಲು ನಿಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ ಎಂದೂ ಟಾಂಗ್ ನೀಡಿದರು.

ಶಿವಶಂಕರಪ್ಪನವರು ಹೇಳಿದಂತೆ ನಾನೇನೂ ಧೃತಿಗೆಟ್ಟಿಲ್ಲ, ಕಣ್ಣೀರೂ ಹಾಕಿಲ್ಲ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜಿಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪನವರು ಯಾರ ಮುಂದೆ ಅತ್ತಿದ್ದಾರೆ ಎಂಬುದನ್ನು ಅವರೇ ನೆನಪಿಸಿಕೊಳ್ಳಬೇಕು ಎಂದೂ ಸಿದ್ದೇಶ್ವರ ಹೇಳಿದರು.

ಭೀಮಸಮುದ್ರದಿಂದ ಏನು ತಂದಿದ್ದೇನೆ ಎಂದು ಶಿವಶಂಕರಪ್ಪನವರು ಕೇಳಿದ್ದಾರೆ. ಆದರೆ, ಶಾಮನೂರಿ ನಿಂದ ಅವರೇನು ತಂದಿದ್ದಾರೆ? ಎಂಬುದನ್ನು ಅವರೇ ತಿಳಿದುಕೊಳ್ಳಬೇಕು.  ಶಿವಶಂಕರಪ್ಪನವರಿಗೆ 93 ವರ್ಷ ವಯಸ್ಸಾಗಿದೆ. ನನಗೆ 73 ವರ್ಷ ವಯಸ್ಸಾಗಿದೆ. ಹುಡು ಗಾಟಿಕೆಯ ಮಾತನಾಡಬಾರದು ಎಂದು ಹೇಳಿದರು.

ಜನರು ನನ್ನನ್ನು ನಾಲ್ಕು ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ನನ್ನ ಪತ್ನಿ ಗಾಯತ್ರಿ ಅವರಿಗೆ 6.10 ಲಕ್ಷ ಮತ ನೀಡಿದ್ದಾರೆ. ಅದನ್ನು ಜೀವನದಲ್ಲಿ ಎಂದೂ ಮರೆಯುವುದಿಲ್ಲ. ನಿರಂತರವಾಗಿ ಕಾರ್ಯಕರ್ತರ ಜೊತೆ ಇರುತ್ತೇನೆ, ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ಸಿದ್ದೇಶ್ವರ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ನವೀನ್, ಪ್ರೊ. ಲಿಂಗಣ್ಣ, ಚನ್ನಗಿರಿ ಶಿವಕುಮಾರ್, ಐರಣಿ ಅಣ್ಣೇಶ್, ಸತೀಶ್, ಯಶೋದಮ್ಮ ಎಗ್ಗಪ್ಪ, ಎಸ್.ವಿ. ರಾಮಚಂದ್ರ,  ಹನಗವಾಡಿ ವೀರೇಶ್,  ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!