ಆಷಾಢದಲ್ಲಿ ಗುರುದರ್ಶನ ಮಾಡಿ ಭಾಗ್ಯ ಪಡೆಯೋಣ

ಆಷಾಢದಲ್ಲಿ ಗುರುದರ್ಶನ ಮಾಡಿ ಭಾಗ್ಯ ಪಡೆಯೋಣ

ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್

ದಾವಣಗೆರೆ, ಜು. 31- ಆಶಾಢ ಮಾಸದಲ್ಲಿ ಗುರುಗಳ ದರ್ಶನ ಮಾಡಿ, ಆಶೀರ್ವಾದ ಪಡೆದು ನಮ್ಮೆಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಭಾಗ್ಯವಂತರಾಗೋಣ ಎಂದು ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಹೇಳಿದರು.

ಅವರು ಬುಧವಾರ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 2ನೇ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ವಿಷ್ಣು ನಾಲ್ಕು ತಿಂಗಳು ಚಿರನಿದ್ರೆಗೆ ಜಾರುವುದರಿಂದ ಯಾವುದೇ ಸಮಾರಂಭಗಳು ಶುಭವಾಗುವುದಿಲ್ಲ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ ಎಂದರು.

ಇನ್ನು ಗಂಗೆ ಭೂಮಿಗೆ ಉತ್ತರಾಭಿಮುಖ ವಾಗಿ ಹರಿದದ್ದು ಇದೇ ಮಾಸದಲ್ಲಿ. ಆದ್ದರಿಂದಲೇ ಭಾಗೀರಥಿ ಎಂದು ಗಂಗೆ ಪೂಜೆ ಮಾಡಲಾಗುತ್ತದೆ. ವೇದವ್ಯಾಸರ ಜನ್ಮದಿನವೂ ಇದೇ ಮಾಸದಲ್ಲಿ ಬರುತ್ತದೆ. ಅದನ್ನು ಗುರುಪೌರ್ಣಿಮೆ ಎಂದು ಆಚರಿಸಲಾಗುತ್ತದೆ. 

ಪುರಿ ಜಗನ್ನಾಥ ಯಾತ್ರೆ, ಅಮರನಾಥ ಯಾತ್ರೆಯೂ ಇದೇ ಮಾಸದಲ್ಲಿ ನಡೆಯುತ್ತದೆ. ಶಿವನು ಪಾರ್ವತಿಗೆ ಅಮರತ್ವ ತಿಳಿಸಿದ ಮಾಸವೂ ಇದೆ. ಹೀಗಾಗಿ ಆಷಾಢ ಮಾಸವನ್ನು ಕೆಲವರು ಅಶುಭ ಎಂದರೆ, ಮತ್ತೆ ಕೆಲವರು ಶುಭ ಎನ್ನುತ್ತಾರೆ. 

ಭಾರತ ಕೃಷಿ ಪ್ರಧಾನ ದೇಶ. ಈ ಮಾಸದಲ್ಲಿ ಮಳೆ ಅಧಿಕವಾಗಿ ಬೀಳುತ್ತದೆ. ಈ ವೇಳೆ ರೋಗ ರುಜಿನಗಳು ಹೆಚ್ಚು. ಈ ಕಾರಣಕ್ಕಾಗಿ ಯಾವುದೇ ಸಮಾರಂಭಗಳನ್ನು ಮಾಡಬಾರದೆಂಬ ವೈಜ್ಞಾ ನಿಕ ಕಾರಣವೂ ಇದೆ ಎಂದು ವಿವರಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ದೇವರೇ ಇಲ್ಲ ಎನ್ನುವ ನಾಸ್ತಿಕರು ಹಾಗೂ ದೇವರಿದ್ದಾನೆ, ಅವನು ಕೋಪಗೊಂಡಿದ್ದಾನೆ ಎಂದು ಬೆದರಿಸಿ ಲಾಭ ಮಾಡಿಕೊಳ್ಳುವ ಎರಡು ರೀತಿಯ ಜನರು ನಮ್ಮ ನಡುವೆ ಇದ್ದಾರೆ ಎಂದರು.

ಇತ್ತೀಚೆಗೆ ಇಸ್ರೋ ವಿಜ್ಞಾನಿಗಳು ರಾಕೆಟ್ ಲಾಂಚ್ ಮಾಡುವ ವೇಳೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ, ತಮ್ಮ ಕಾರ್ಯದ ಯಶಸ್ಸಿಗೆ ಬೇಡಿಕೊಂಡಿದ್ದರು. ಅದಕ್ಕಾಗಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಅವರು ವಿಜ್ಞಾನಿಗಳಾಗಿ ತಮ್ಮೆಲ್ಲಾ ಜ್ಞಾನವನ್ನು ಧಾರೆ ಎರೆದಿದ್ದರೂ ಯಶಸ್ಸಿಗಾಗಿ ದೇವರಿಗೆ ಬೇಡಿಕೊಂಡಿದ್ದು ತಪ್ಪೇನಿಲ್ಲ ಎಂದರು.

ಕ್ರಿಸ್ಟಿಯಾನ್ ಬರ್ನಾರ್ಡ್ ಎಂಬ ವೈದ್ಯನಿಗೆ ತಾನು ಮಾಡುವ ಶಸ್ತ್ರ ಚಿಕಿತ್ಸೆಗಳೆಲ್ಲವೂ ಯಶಸ್ವಿಯಾಗುತ್ತವೆ. ನಾನು ಜನರಿಗೆ ಜೀವ ದಾನ ಮಾಡುತ್ತೇನೆ ಎಂಬ ಅಹಂಕಾರವಿತ್ತು. ಒಮ್ಮೆ 7 ವರ್ಷದ ಮಗುವಿಗೆ ಚಿಕಿತ್ಸೆ ಮಾಡಬೇಕಾಗಿತ್ತು. ಚಿಕಿತ್ಸೆಗೂ ಮೊದಲು ಮಗು ತನಗೆ ಹಸಿವಾಗಿದ್ದು, ಒಂದು ಪೀಸ್ ಬ್ರೆಡ್ ಬೇಕೆಂದು ಬರ್ನಾರ್ಡ್‌ಗೆ ಕೇಳಿತು. ಆದರೆ ಶಸ್ತ್ರ ಚಿಕಿತ್ಸೆಗೂ ಮುನ್ನ ತಿನ್ನಲು ಏನೂ ಕೊಡುವುದಿಲ್ಲ. ಚಿಕಿತ್ಸೆ ನಂತರ ನಾನು ಜೀವ ದಾನ ಮಾಡುತ್ತೇನೆ. ನಂತರ ತಿನ್ನುವಂತೆ ಎಂದು ವೈದ್ಯ ಶಸ್ತ್ರ ಚಿಕಿತ್ಸೆ ನಡೆಸಿದ. ಆದರೆ ಆ ಮಗು ಮರಣ ಹೊಂದಿತು. ಆಗ ಬರ್ನಾರ್ಡ್‌ಗೆ ಪಾಪ ಪ್ರಜ್ಞೆ ಕಾಡಲಾರಂಭಿತು.  ಇದಾದ ಕೆಲ ದಿನಗಳ ನಂತರ ಆತ ನಾನು ಕರ್ತವ್ಯ ಮಾಡುತ್ತೇನೆ. ಜೀವದಾನ ಮಾಡುವುದು ದೇವರು ಎಂದು ತನ್ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಎಂಬ ಕಥೆಯನ್ನು ಜಾಧವ್ ವಿವರಿಸಿದರು.

ದೇವರ ಪೂಜೆಗೆ ಯಾವ ದಿನವೂ ಅಶುಭವಲ್ಲ. ಶುದ್ಧ ಮನಸ್ಸಿನಿಂದ ಪೂಜಿಸಿದರೆ ಎಂದಿಗೂ ಒಳ್ಳೆಯದಾಗುತ್ತದೆ. ಅದರಲ್ಲೂ ಆಷಾಢ ಅಶುಭ ಎನ್ನುವುದು ಸುಳ್ಳು ಎಂದರು.

ಇದೇ ಸಂದರ್ಭದಲ್ಲಿ ಮಲೇಬೆನ್ನೂರಿನ ಕೈಗಾರಿಕೋದ್ಯಮಿ ಬಿ.ಚಿದಾನಂದಪ್ಪ ಅವರಿಗೆ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ,  ಹರಿಹರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಇತರರು ಉಪಸ್ಥಿತರಿದ್ದರು.

ಬಿಜೆಪಿ ಮುಖಂಡ ಕೊಂಡಜ್ಜಿ ಜಯಪ್ರಕಾಶ್, ನಿವೃತ್ತ ಪ್ರಾಂಶುಪಾಲ ದೇವರಾಜ್ ಶೀಲವಂತ, ನಾಗರಾಜ್, ಕೆ.ತಿಪ್ಪೇಶ್, ಹುಲಿಕಟ್ಟೆ ರಾಜೇಶ್ ಇತರರು ಗುರುರಕ್ಷೆ ಪಡೆದರು.

ಗಿರೀಶ್ ದೇವರಮನೆ ಸ್ವಾಗತಿಸಿದರು. ಸೌಭಾಗ್ಯ ಹಿರೇಮಠ ನಿರೂಪಿಸಿದರು. ವೀರಶೈವ ಲಿಂಗಾಯತ ಮಹಾಸಭಾ ಮುಖಂಡ ಟಿಂಕರ್ ಮಂಜಣ್ಣ ಶ್ರೀಗಳಿಗೆ ಗೌರವ ಮಾಲಾರ್ಪಣೆ ಮಾಡಿದರು. 

ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತು ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಅವರು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.

error: Content is protected !!