ಬೂಚಿ ಕ್ರೀಡೆ ಉದ್ಘಾಟಿಸಿದ ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ರಾಜ್ಯಾಧ್ಯಕ್ಷೆ ಶಶಿಕಲಾ ಜೊಲ್ಲೆ
ದಾವಣಗೆರೆ, ಜು. 29- ದಿವ್ಯಾಂಗರೂ ಸಹ ಸಾಮಾನ್ಯ ಕ್ರೀಡಾಪಡುಗಳ ರೀತಿಯಲ್ಲೇ ಸಾಧನೆ ಮಾಡಿ, ದೇಶಕ್ಕೆ ಕೀರ್ತಿ ತರುವ ಸಾಮರ್ಥ್ಯ ಹೊಂದಿ ದ್ದಾರೆ ಎಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ್- ಕರ್ನಾಟಕ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಸುಭಾಶ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಮಕ್ಕಳ ರಾಜ್ಯಮಟ್ಟದ `ಬೂಚಿ’ ತಂಡದ ಆಯ್ಕೆ ಕ್ರೀಡಾಕೂಟದ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಮಕ್ಕಳಲ್ಲಿ ಏನೇ ಸಮಸ್ಯೆ ಇದ್ದರೂ ಅವರಲ್ಲಿ ಆರನೇ ಸೆನ್ಸ್ ಅಥವಾ ದಿವ್ಯ ಜ್ಞಾನ ವೊಂದಿರುತ್ತದೆ. ಹೀಗಾಗಿ ಅವರನ್ನು `ದಿವ್ಯಾಂಗರು’ ಎಂದು ಕರೆಯಲಾಗುತ್ತದೆ. ಅವರಿಗೆ ಅನುಕಂಪದ ಬದಲು ಅವಕಾಶ ನೀಡಿದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದರು.
ಕೇದ್ರದಲ್ಲಿ ಮಲ್ಲಿಕಾ ನಡ್ಡಾ ಅವರು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತ ದೇಶ ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ ಅಧಿಕವಾ ಗಿದೆ. ಕಳೆದ ವರ್ಷ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು 205 ಪದಕಗಳ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಕಳೆದ ಒಂದು ವರ್ಷದಿಂದ ಈಚೆಗೆ ನಡೆದ ರಾಷ್ಟ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟಗಳಲ್ಲಿ ಕರ್ನಾಟಕದ ವಿಶೇಷ ಕ್ರೀಡಾಪಟುಗಳು ಒಟ್ಟು 35 ಚಿನ್ನ, 25 ಬೆಳ್ಳಿ ಹಾಗೂ 15 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಮಕ್ಕಳಿಗೆ ನೀಡುವ ಪ್ರೋತ್ಸಾಹ ಇದೇ ರೀತಿ ಮುಂದುವರಿಯಲಿದೆ ಎಂದರು.
2027ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶೇಷ ಒಲಿಂಪಿಕ್ಸ್ ರಾಜ್ಯದಿಂದ ಅತಿ ಹೆಚ್ಚು ಕ್ರೀಡಾಪಟುಗಳನ್ನು ಕಳಿಸಿಕೊಡಲು ತಯಾರಿ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿರುವ ದಿವ್ಯಾಂಗ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರಿಗೆ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ರಾಜ್ಯದ 28 ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ನಾನಾ ಜಿಲ್ಲೆಗಳಿಂದ 8 ವರ್ಷ ಮೇಲ್ಪಟ್ಟ 25 ಬಾಲಕರು, 18 ಬಾಲಕಿಯರು ಸೇರಿ 43 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಪೈಕಿ ತಲಾ ನಾಲ್ಕು ಸದಸ್ಯರನ್ನು ಒಳಗೊಂಡ ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಲಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ್, ಎಸ್‌ಒಬಿಕೆ ವಲಯ ನಿರ್ದೇಶಕ ಅಮರೇಂದ್ರ ಅಂಜನಪ್ಪ, ಉಪಾಧ್ಯಕ್ಷ ರೂಪಾಸಿಂಗ್, ಖಜಾಂಚಿ ಆನಂದ್, ಕ್ರೀಡಾ ನಿರ್ದೇಶಕ ನಾರಾಯಣ್, ಶಾಂತಲಾ ಭಟ್, ಇರಾವತಿ, ಡಾ.ಎನ್.ಪಿ.ಸುರೇಂದ್ರನಾಥ್, ರಮಣಲಾಲ್ ಸಾಂಘ್ವಿ ಇತರರಿದ್ದರು.