ನಾಲೆಗಳ ದುರಸ್ತಿ, ಸ್ವಚ್ಛತೆ ಕುರಿತು ಭದ್ರಾ ಕಾಡಾ ಸಭೆಯಲ್ಲಿ ಚರ್ಚೆ
ಶಿವಮೊಗ್ಗ, ಜು. 29- ಭದ್ರಾ ಅಚ್ಚುಕಟ್ಟ್ಟಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಇಂದು ರಾತ್ರಿಯಿಂದಲೇ ಭದ್ರಾ ಜಲಾಶಯದಿಂದ ನೀರು ಹರಿಸಲು ಸೋಮವಾರ ನಡೆದ ಭದ್ರಾ ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲ್ಲಿಗೆ ಸಮೀಪದ ಮಲವಗೊಪ್ಪದಲ್ಲಿರುವ ಭದ್ರಾ ಕಾಡಾ ಕಛೇರಿಯಲ್ಲಿ ಕರೆದಿದ್ದ 85ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಅವರು ಭದ್ರಾ ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಪ್ರಕಟಿಸಿದರು.
ಸಭೆಯಲ್ಲಿ ನಾಲೆಗಳಲ್ಲಿ ನೀರು ದುರಸ್ತಿ, ಕಾಲುವೆಗಳಲ್ಲಿ ತುಂಬಿಕೊಂಡಿ ರುವ ಹೂಳು ತೆಗೆಸುವ ಕುರಿತು ಮತ್ತು ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವ ವಿಚಾರ, ನೀರಿನ ನಿರ್ವಹಣೆ, ಸೌಡಿಗಳಿಗೆ ವೇತನ, ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ನೀರನ್ನು ಲಿಫ್ಟ್ ಮಾಡಿಕೊಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ ಭದ್ರಾ ಕಾಡಾ ನೂತನ ಅಧ್ಯಕ್ಷ ಡಾ. ಅಂಶುಮಂತ್ ಅವರು ಮಾತನಾಡಿ, ಮಳೆ ಕೊರತೆ ಯಿಂದಾಗಿ ಕಳೆದ ವರ್ಷ ಅಚ್ಚುಕಟ್ಟಿನ ರೈತರಿಗೆ ತೊಂದರೆ ಆಗಿರುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮತ್ತು ಈ ವರ್ಷ ವರುಣನ ಕೃಪೆಯಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಭದ್ರಾ ಜಲಾಶಯವು ಭರ್ತಿಯಾಗುತ್ತಿರುವುದರಿಂದ ಅಚ್ಚುಕಟ್ಟಿನ ರೈತರು 2 ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಎಲ್ಲಾ ಜನ ಪ್ರತಿನಿಧಿಗಳ, ರೈತ ಮುಖಂಡರ ಸಹಕಾರ ಪಡೆದುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುವ ಭರವಸೆ ನೀಡಿದರು.
ಭಾರತೀಯ ರೈತ ಒಕ್ಕೂಟದ ಶಾಮನೂರು ಹೆಚ್.ಆರ್. ಲಿಂಗರಾಜ್ ಮಾತನಾಡಿ, ಡ್ಯಾಂ ತುಂಬಿರುವುದರಿಂದ ಈ ಕ್ಷಣದಿಂದಲೇ ನಾಲೆಗಳಿಗೆ ನೀರು ಹರಿಸಬೇಕು ಮತ್ತು ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ಸರ್ಕಾರದ ದಿಟ್ಟ ಕ್ರಮವನ್ನು ಸ್ವಾಗತಿಸುತ್ತೇವೆ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಡ್ಯಾಂ 186 ಅಡಿ ಮಟ್ಟದವರೆಗೂ ನದಿಗೆ ನೀರನ್ನು ಹರಿಸಬೇಡಿ, ಡ್ಯಾಂ ಸಂಪೂರ್ಣ ಭರ್ತಿಯಾಗಲು ಇನ್ನೂ 6 ಟಿ.ಎಂ.ಸಿ ನೀರು ಬೇಕು. ಮೊದಲು ಅದನ್ನು ತುಂಬಿಸಿ ಎಂದರು.
ಈ ವರ್ಷ 2 ಬೆಳೆಗಳಿಗೆ ನೀರು ಸಿಗು ವುದರಲ್ಲಿ ಯಾವುದೇ ಅನುಮಾನವಿಲ್ಲ. ರೈತರು ನೀರನ್ನು ವೇಸ್ಟ್ ಮಾಡದೇ ಮಿತವಾಗಿ ಬಳಸಬೇಕು. ಕಾಲುವೆಗಳಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಇಷ್ಟರೊಳಗೆ ಸ್ವಚ್ಛ ಮಾಡಿಸಬೇಕಿತ್ತು. ಆದರೆ ಈ ಬಗ್ಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಗಮನ ಹರಿಸದೇ ಇರುವುದು ಬೇಸರದ ಸಂಗತಿ ಎಂದು ಬಸವರಾಜಪ್ಪ ಹೇಳಿದರು.
ಅಪ್ಪರ್ ಭದ್ರಾ ಯೋಜನೆಗೆ ತುಂಗಾದಿಂದಲೇ 29 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ಲಿಫ್ಟ್ ಮಾಡಿ ಹರಿಸ ಬೇಕೆಂದು ಅವರು ಆಗ್ರಹಿಸಿದರು.
ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಶನಿವಾರ ಜಲಾಶಯದಿಂದ ನದಿಗೆ ನೀರು ಹರಿಸುವ ಬದಲು ನಾಲೆಗಳಿಗೆ ಹರಿಸಿದ್ದರೆ ಕೆರೆಗಳಿಗೆ ನೀರನ್ನು ತುಂಬಿಸಬಹುದಿತ್ತು.
ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ನಿರ್ಧಾರ ತೆಗೆದುಕೊಳ್ಳುವುದನ್ನು ಬಿಟ್ಟು ರೈತರ, ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿ ಎಂದ ಗಂಗಾಧರ್ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಭದ್ರಾ ಕಾಲುವೆಗಳ ದುರಸ್ತಿ ಮತ್ತು ಸ್ವಚ್ಚತೆ ಕಾಮಗಾರಿ ಮಾಡಲು ಪಿಡಿಓಗಳು ನಿರ್ಲಕ್ಷ್ಯ ಮಾಡುತ್ತಿದ್ದು, ಈ ಬಗ್ಗೆ ಡಿಸಿಗಳು ಕ್ರಮ ಕೈಗೊಳ್ಳಬೇಕೆಂದರು.
ಜಲಾಶಯದ ಸುರಕ್ಷತೆಯ ಬಗ್ಗೆಯೂ ಕಾಡಾ ಸಭೆ ಚರ್ಚಿಸಬೇಕು ಮತ್ತು ಅದರ ಬಗ್ಗೆ ನಿಗಾ ವಹಿಸಬೇಕೆಂದು ಕೆ.ಟಿ. ಗಂಗಾಧರ್ ಒತ್ತಾಯಿಸಿದರು.
ಭದ್ರಾ ಎಡದಂಡೆ ನಾಲೆಯ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಘುನಾಥ್ ಅವರು, ಡಿಸೆಂಬರ್ ತಿಂಗಳಲ್ಲೂ ಎಡದಂಡೆ ನಾಲೆಗೆ ನೀರು ಹರಿಸಿ, ತೋಟಗಳನ್ನು ಉಳಿಸಿ ಎಂದರು.
ದಾವಣಗೆರೆಯ ಹಿರಿಯ ವಕೀಲ ಆವರಗೆರೆ ಪರಮೇಶ್ವರ್ ಮಾತನಾಡಿ, ಆವರಗೆರೆಯಲ್ಲಿರುವ 95 ಎಕರೆ ವಿಸ್ತೀರ್ಣದ ಕೆರೆಗೆ ನೀರಾವರಿ ಇಲಾಖೆಯಿಂದಲೇ ನೀರು ತುಂಬಿಸುವಂತೆ ಸಭೆಯ ಗಮನ ಸೆಳೆದರು.
ರೈತ ಮುಖಂಡ ಆವರಗೊಳ್ಳದ ಬಿ.ಎಂ. ಷಣ್ಮುಖಯ್ಯ ಮಾತನಾಡಿ, ಈ ಹಿಂದೆ ಇದ್ದ ಚಾನಲ್‌ಗಳು ಈಗ ಸಣ್ಣ ಕಾಲುವೆಗಳಾಗಿವೆ. ಸರ್ಕಾರ ತಕ್ಷಣ ಸಣ್ಣ-ಸಣ್ಣ ಕಾಲುವೆಗಳ ಆಧುನೀಕರಣಕ್ಕೆ ಮುಂದಾಗಬೇಕು.
ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ರಚಿಸಿರುವ ಕಠಿಣ ಕಾನೂನು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕೆಂದು ಷಣ್ಮುಖಯ್ಯ ಹೇಳಿದರು.
ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಮಾತನಾಡಿ, 120 ದಿನ ಸತತವಾಗಿ ನೀರು ಹರಿಸಬೇಕು. ನೀರಿನ ನಿರ್ವಹಣೆ ಮಾಡುವ ವಿಚಾರದಲ್ಲಿ ಇಂಜಿನಿಯರ್‌ಗಳು ಶ್ರಮವಹಿಸಬೇಕು. ಸೌಡಿಗಳಿಗೆ ಪ್ರತಿ ತಿಂಗಳೂ ವೇತನ ನೀಡಬೇಕು ಮತ್ತು ಬೇಸಿಗೆ ವೇಳೆ ಕಾಲುವೆಗಳ ದುರಸ್ತಿ ಮಾಡಿಸಲು ಈಗಿನಿಂದಲೇ ಯೋಜನೆ ಸಿದ್ಧಪಡಿಸಿ ಎಂದು ಸಭೆಯ ಗಮನ ಸೆಳೆದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಡ್ಯಾಂ ತುಂಬಿದೆ ಆದರೆ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ನೀರು ಮುಂದಕ್ಕೆ ಬರದಂತಾಗಿದೆ ಎಂದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತು ಹೇಳಿದರು.
ಭದ್ರಾ ಕಾಲುವೆಗಳ ದುರಸ್ತಿಗೆ ಆಯಾ ಭಾಗದ ಶಾಸಕರು ತಮ್ಮ ಅನುದಾನ ಬಳಸಬೇಕೆಂದು ಮನವಿ ಮಾಡಿದ ತೇಜಸ್ವಿ ಪಟೇಲ್ ಅವರು, ಡ್ಯಾಂಗೆ ಬಾಗಿನ ಅರ್ಪಿಸುವ ಜೊತೆಗೆ ನಮ್ಮ ಭಾಗದ ಕಾಲುವೆಗಳಲ್ಲಿ ನೀರು ಬಂದಾಗ ಪೂಜೆ ಸಲ್ಲಿಸುವಂತಾಗಲಿ ಎಂದರು.
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಮಾತನಾಡಿ, ನೀರು ನಿರ್ವಹಣೆ ವೇಳೆ ಇಂಜಿನಿಯರ್‌ಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಶಿಸ್ತು ಕ್ರಮ ಗ್ಯಾರಂಟಿ ಎಂಬ ಎಚ್ಚರಿಕೆ ನೀಡಿದರು.
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರು ಕಾಲುವೆಗಳ ದುರಸ್ತಿಗಾಗಿ ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳನ್ನು ಸಡಿಲಗೊಳಿಸುವಂತೆ ಎಲ್ಲರೂ ಸೇರಿ ಸರ್ಕಾರಕ್ಕೆ ಮನವಿ ಮಾಡೋಣ ಎಂದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಭದ್ರಾ ನಾಲೆಗಳ ಆಧುನೀಕರಣ ಆಗಿರುವುದರಿಂದಲೇ ನೀರು ಸ್ವಲ್ಪ ಮಟ್ಟಿಗೆ ನಮ್ಮ ಭಾಗಕ್ಕೆ ನೀರು ಬರುತ್ತಿದೆ. ಇಲ್ಲದಿದ್ದರೆ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ನಾಲೆಗಳ ದುರಸ್ತಿಗೆ ಅನುದಾನ ನೀಡುವಂತೆ ಪಕ್ಷಾತೀತವಾಗಿ ನೀರಾವರಿ ಸಚಿವರನ್ನು ಭೇಟಿ ಮಾಡೋಣ ಎಂದಾಗ ಸಭೆ ಬೆಂಬಲಿಸಿತು.
ಕುಂಬಳೂರಿನಲ್ಲಿ ಉದ್ಯೋಗ ಖಾತ್ರಿಯಿಂದ ನಾಲೆ ಸ್ವಚ್ಛ ಮಾಡಿಸಿದ್ದಾರೆ. ಆದರೆ ಬೇರೆ ಕಡೆಗಳಲ್ಲಿ ಪಿಡಿಓಗಳು ನಿರ್ಲಕ್ಷ್ಯ ಮಾಡಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹರೀಶ್ ಆಗ್ರಹಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದರು.
ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ತಾಲ್ಲೂಕಿಗೆ ಕಳೆದ ವರ್ಷವೂ ನೀರು ಬಂದಿಲ್ಲ. ಬೇಸಿಗೆ ವೇಳೆಗೆ ತೋಟಗಳಿಗೆ ಬಿಟ್ಟ ನೀರೂ ಬರಲಿಲ್ಲ. ಈ ವರ್ಷ ಡ್ಯಾಂ ತುಂಬಿರುವುದರಿಂದ ನಮ್ಮ ಕ್ಷೇತ್ರದ ಹಿರೇಮೇಗಳಗೇರೆ, ಸತ್ತೂರು, ಶಿಂಗ್ರಿಹಳ್ಳಿ ಕೆರೆಗಳನ್ನು ಮೊದಲು ತುಂಬಿಸಿಕೊಡಿ ಎಂದು ಮನವಿ ಮಾಡಿದರು.
ಮಾಯಕೊಂಡ ಶಾಸಕ ಎಸ್.ಕೆ. ಬಸವಂತಪ್ಪ ಮಾತನಾಡಿ, ನಾಲೆಗಳ ದುರಸ್ತಿಯಾದಲ್ಲಿ ಅರ್ಧ ಸಮಸ್ಯೆ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲರೂ ಹೋಗಿ ಒತ್ತಡ ಹಾಕಿ ಅನುದಾನ ತರೋಣ ಎಂದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸೂಳೆಕೆರೆಗೆ ನಾಲೆಯ ಪೂರ್ತಿ ನೀರು ತುಂಬಿಸಿ ಎಂದರು.
ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಸಮಾಧಾನದಿಂದಲೇ ಆಲಿಸಿದ ಸಚಿವ ಮಧು ಬಂಗಾರಪ್ಪ ಅವರು, ಕೊನೆಯಲ್ಲಿ ಮಾತನಾಡಿ, ನಾವೆಲ್ಲರೂ ಅನ್ನ ತಿನ್ನುತ್ತೇವೆ ಎಂದರೆ, ಅದಕ್ಕೆ ರೈತರೇ ಕಾರಣ. ಅನ್ನ ಕೊಡುವ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ವರ್ಷ ಮಳೆ ಕೊರತೆಯಿಂದಾಗಿ ಅಚ್ಚುಕಟ್ಟಿನ ರೈತರಿಗೆ ನೀರಿನ ವಿಚಾರದಲ್ಲಿ ತೊಂದರೆ ಆಗಿರುವುದಕ್ಕೆ ನಮಗೂ ಬೇಸರವಿದೆ.
ಈ ವರ್ಷ ಡ್ಯಾಂ ತುಂಬಿರುವುದರಿಂದ ಎಲ್ಲಾ ರೈತರಿಗೆ ಸಮರ್ಪಕವಾಗಿ ನೀರು ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ನಿಟ್ಟಿನಲ್ಲಿ ನೀರು ನಿರ್ವಹಣೆಗೆ ಇಂಜಿನಿಯರ್‌ಗಳ ಜೊತೆಗೆ ಡಿಸಿ, ಎಸ್ಪಿಗಳೂ ಗಮನ ಹರಿಸಬೇಕು. ಎಲ್ಲಿ ಕಾಲುವೆಗಳಲ್ಲಿ ಬಹಳ ತೊಂದರೆ ಆಗಿದೆಯೋ ಅಲ್ಲಿ ಕೂಡಲೇ ಆಯಾ ಗ್ರಾ.ಪಂ.ನಿಂದ ಉದ್ಯೋಗ ಖಾತ್ರಿ ಮೂಲಕ ತುರ್ತು ಕೆಲಸ ಮಾಡಿಸಬೇಕು. ಪಿಡಿಓಗಳು ಸ್ಪಂದಿಸದಿದ್ದರೆ ಸಸ್ಪೆಂಡ್ ಮಾಡಿ ಎಂದು ಡಿಸಿಗಳಿಗೆ ಮಧು ಬಂಗಾರಪ್ಪ ಸೂಚಿಸಿದರು.
ಸೌಡಿಗಳಿಗೆ ಪ್ರತಿ ತಿಂಗಳು ವೇತನ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ಎಲ್ಲರ ಸಹಕಾರ ಬೇಕು. ತುಂಗಾ-ಭದ್ರಾ ಯೋಜನೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಇಲ್ಲಿಗೆ ನೀರಾವರಿ ಸಚಿವರನ್ನು ಕರೆಸಿ ಅವರ ಗಮನ ಸೆಳೆಯುವ ಕೆಲಸವನ್ನು ಅತಿ ಶೀಘ್ರದಲ್ಲೇ ಮಾಡುತ್ತೇನೆ. ಅಂದಿನ ಸಭೆಗೆ ಎಲ್ಲಾ ಶಾಸಕರು ಬರಬೇಕೆಂದರು.
ಆವರಗೆರೆ ಕೆರೆಗೆ, ಸೂಳೆಕೆರೆಗೆ ಮತ್ತು ಹರಪನಹಳ್ಳಿ ಕೆರೆಗಳಿಗೆ ಹಾಗೂ ಕುಡಿಯುವ ನೀರು ಪೂರೈಸುವ ಕೆರೆಗಳಿಗೆ ಕೂಡಲೇ ನೀರು ತುಂಬಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಮಧು ಬಂಗಾರಪ್ಪ ಅವರು, ನಮ್ಮ ಸರ್ಕಾರ ಟೇಕಾಫ್ ಆಗಿದ್ದು, ಇನ್ಮುಂದೆ ಎಲ್ಲಾ ಅಭಿವೃದ್ಧಿ ಕೆಲಸಗಳು ಸುಲಲಿತವಾಗಿ ನಡೆಯಲಿದ್ದು, ರೈತರ ಹಿತ ಕಾಯುತ್ತೇವೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಭಾನು, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್, ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಭದ್ರಾ ಎಸ್ ಇ ಸುಜಾತ, ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಕಾಡಾ ಪ್ರಭಾರ ಆಡಳಿತಾಧಿಕಾರಿ ನಾಗೇಶ್, ಭದ್ರಾವತಿ ಇಇ ರವಿಕುಮಾರ್, ದಾವಣಗೆರೆ ಇಇ ಮಂಜುನಾಥ್, ಮಲೇಬೆನ್ನೂರು ಎಇಇ ಧನಂಜಯ್, ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರ, ನೀರು ಬಳಕೆದಾರರ ಮಹಾಮಂಡಳದ ನಿರ್ದೇಶಕರಾದ ಬೆಳಲಗೆರೆ ದೇವೇಂದ್ರಪ್ಪ, ಶಿರಮಗೊಂಡನಹಳ್ಳಿ ಎ.ಬಿ.ಕರಿಬಸಪ್ಪ, ಎ.ಎಂ. ಮಂಜುನಾಥ್, ಆವರಗೆರೆ ಜಿ. ಸುರೇಶ್, ಹೊಳೆಸಿರಿಗೆರೆ ರುದ್ರಪ್ಪ, ಹೂವಿನಮಡು ಪ್ರಭು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.