ಮಕ್ಕಳನ್ನು ಪದವೀಧರರನ್ನಾಗಿಸಿ : ಸಚಿವ ಜಿ. ಪರಮೇಶ್ವರ್‌

ಮಕ್ಕಳನ್ನು ಪದವೀಧರರನ್ನಾಗಿಸಿ : ಸಚಿವ ಜಿ. ಪರಮೇಶ್ವರ್‌

ಛಲವಾದಿ ಸಮಾಜದಿಂದ ಪ್ರತಿಭಾ ಪುರಸ್ಕಾರ

ದಾವಣಗೆರೆ, ಜು. 28- `ಜ್ಞಾನ ಲಭಿಸದ ಹೊರತು, ಪ್ರಶ್ನಿಸುವ ಶಕ್ತಿ ಬರುವುದಿಲ್ಲ’ ಎಂದು ಡಾ.ಅಂಬೇಡ್ಕರ್ ಹೇಳಿದ್ದರು. ಅದಕ್ಕಾಗಿ ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ನಿಮ್ಮ ಮಕ್ಕಳನ್ನು ಕನಿಷ್ಠ ಪದವೀಧರನ್ನಾಗಿ ಮಾಡಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಕರೆ ನೀಡಿದರು.

ಜಿಲ್ಲಾ ಛಲವಾದಿ ಮಹಾಸಭಾದಿಂದ ನಗರದ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಛಲವಾದಿ ಮಹಾಸಭಾದಿಂದ ಕುರ್ಚಿಗಾಗಿ ಜಗಳವಾಡುವುದು ಬೇಡ.  ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಆಂದೋಲನ ನಡೆಯಬೇಕು. ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ ದಾರಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ವಿದೇಶಗಳಲ್ಲಿ ಜಾತಿ ವ್ಯವಸ್ಥೆ ಇಲ್ಲ. ದುಡಿಮೆ ವ್ಯವಸ್ಥೆ ಇದೆ. ಆದರೆ ನಮ್ಮ ದೇಶದಲ್ಲಿರುವ ಜಾತಿ ವ್ಯವಸ್ಥೆ ಸಂಪೂರ್ಣ ಹೋಗುತ್ತದೆ ಎಂಬ ವಿಶ್ವಾಸವಿಲ್ಲ. ಆದ್ದರಿಂದ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ನಾವು ಉತ್ತಮ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಮಾತನಾಡುತ್ತಾ, ವೈಚಾರಿಕತೆ, ವೈಜ್ಞಾನಿಕತೆ ಬದುಕಿಗೆ ಮೂಲ. ಮಕ್ಕಳನ್ನು ಇವುಗಳನ್ನು ಬೆಳೆಸುವ ಕಾರ್ಯವನ್ನು ಛಲವಾದಿ ಮಹಾಸಭಾ ಮಾಡಲಿ ಎಂದರು.

ನಾಗರಿಕ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅದನ್ನು ತಡೆಯಲು ಶಿಕ್ಷಣ ಒಂದೇ ದಾರಿ. ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ಎಲ್ಲರೂ ಸಂಘಟಿರಾಗುವಂತೆ ಕರೆ ನೀಡಿದರು.

ದೇಶದಲ್ಲಿ ಇನ್ನೂ ಸಮಾನತೆ ಸಿಕ್ಕಿಲ್ಲ. ಈ ವಿಚಾರದಲ್ಲಿ ಅರ್ಧದಾರಿ ಮಾತ್ರ ಸವೆಸಿದ್ದೇವೆ. ಇನ್ನೂ ಸಾಕಷ್ಟು ಸಾಮಾಜಿಕ ಬದಲಾವಣೆಗಳಾಗಬೇಕಿದೆ. ಅಸಮಾನತೆಯನ್ನು ಹೇಗೆ ತೊಡೆಯಬೇಕೆಂದು ವಿಶ್ವಕ್ಕೇ ತೋರಿಸಿದವರು ಅಂಬೇಡ್ಕರ್. ನಾವೆಲ್ಲಾ ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.

ಪ್ರತಿಭೆ ಯಾರ ಸ್ವತ್ತೂ ಅಲ್ಲ. ಯಾವ ಸವಲತ್ತುಗಳೂ ಇಲ್ಲದೆ ಅಂಬೇಡ್ಕರ್ ಜ್ಞಾನ ಸಂಪಾದಿಸಿದರು. ಜೊತೆಗೆ ಶೋಷಿತರ ಜೀವನ ಸುಧಾರಣೆಗೆ ಸಂವಿಧಾನದಲ್ಲಿ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಸಮಾಜದವರು ಸಂವಿಧಾನದಡಿ ಸೌಲಭ್ಯ ಬಳಸಿಕೊಂಡು ಓದಿಗೆ ಮಹತ್ವ ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡುತ್ತಾ, ಸಮಾಜ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಆಶೀ ರ್ವದಿಸುತ್ತಾ ಬಂದಿದೆ. ಛಲವಾದಿ ಸಮಾಜ ದವರು ತಮ್ಮ ಕುಲಕಸುಬುಗಳ ಜೊತೆ ಆಧುನಿಕತೆಗೆ ತಕ್ಕಂತೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದರು.

ಈ ಹಿಂದೆಯೂ ನಾನು ಸಚಿವನಾಗಿದ್ದಾಗ ಕೆ. ಶಿವರಾಮು ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿಕೊಂಡಿದ್ದೆ. ಸಾಕಷ್ಟು ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ನೆರವಾಗಿದ್ದರು ಎಂದು ನೆನಪಿಸಿಕೊಂಡರು.

ಹೆಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದರು. ಆದರೆ ಅವೆಲ್ಲಾ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಈಗ ಅವೆಲ್ಲವನ್ನೂ ಪೂರ್ಣಗೊಳಿಸಬೇಕಿದೆ. ಅದಕ್ಕಾಗಿ ಮತ್ತಷ್ಟು ಅನುದಾನದ ಅಗತ್ಯವಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವರು ವಿಶೇಷ ಸಭೆ ನಡೆಸಿ, ಅರ್ಧ ಆಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಭಾ ಪುರಸ್ಕೃತರಿಗೆ ಅಭಿನಂದಿಸಿ ಮಾತ ನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪರಸ್ಪರ ಜಾತಿ, ಪಕ್ಷ ಭೇದ ಬಿಟ್ಟು ನಾವೆಲ್ಲಾ ಭಾರತೀಯರಾಗಿ ನಡೆದುಕೊಂಡರೆ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿದರು. ಮೈಸೂರಿನ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಎಸ್.ಹೆಚ್. ಕೃಷ್ಣಮೂರ್ತಿ ಸಾಸ್ವೆಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎನ್. ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಿಜಯಕುಮಾರ್, ಮಾಜಿ ಶಾಸಕ ಡಾ.ಎಸ್. ರಾಮಪ್ಪ, ಎಸ್ಪಿ ಉಮಾ ಪ್ರಶಾಂತ್,  ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಮುಖಂ ಡರುಗಳಾದ ಹೊದಿಗೆರೆ ರಮೇಶ್, ಎನ್.ಜಿ. ಪುಟ್ಟಸ್ವಾಮಿ, ಬಿ.ಹೆಚ್. ವೀರಭದ್ರಪ್ಪ, ಹೆಚ್.ಕೆ. ಬಸವರಾಜ್, ಬಿ.ಡಿ. ಸಾವಕ್ಕನವರ್, ಹೆಚ್.ಸಿ. ನಿರಂಜನಮೂರ್ತಿ ಇತರರು ಉಪಸ್ಥಿತರಿದ್ದರು.

error: Content is protected !!