ಕಲಾಕುಂಚದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹಿರಿಯ ಸಾಹಿತಿ ನಾಗಲೇಖ
ದಾವಣಗೆರೆ, ಜು. 28- ಪ್ರಶಸ್ತಿಗಳು ಸಜ್ಜನರಿಗೆ, ಸಾಧಕರಿಗೆ ಸಿಗಬೇಕೇ ಹೊರತು, ಸಮಯ ಸಾಧಕರಿಗಲ್ಲ ಎಂದು ಬೆಂಗಳೂರಿನ ಜನಸಿರಿ ಫೌಂಡೇಶನ್ ಸಂಸ್ಥಾಪಕರೂ, ಸಾಹಿತಿಯೂ ಆದ ನಾಗಲೇಖ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕಲಾಕುಂಚ ಸಾಂಸ್ಕೃತಿ ಸಂಸ್ಥೆ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ-ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿ ಕೊಂಡಿದ್ದ `ಕನ್ನಡ ಕೌಸ್ತುಭ’, ಸರಸ್ವತಿ ಪುರಸ್ಕಾರ’ ರಾಜ್ಯ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿ, ಗುರು-ಹಿರಿಯರಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆ. ಇಂದಿನ ಯುವ ಶಕ್ತಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದರು.
ಸಮಾಜದಲ್ಲಿ ನೈತಿಕ ಮೌಲ್ಯಗಳು ಬಹುಮುಖ್ಯ. ಶರಣ ಪರಂಪರೆ, ಶರಣ ಸಂಸ್ಕೃತಿ, ಸಂಸ್ಕಾರ, ಸಭ್ಯತೆ ಮೈಗೂಡಿಸಿಕೊಂಡು ಮುನ್ನಡೆ ಯಬೇಕಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ತಂದೆ-ತಾಯಿ, ಗುರು-ಹಿರಿಯರಿಗೆ ನೋವುಂಟು ಮಾಡದ ರೀತಿಯಲ್ಲಿ ಗೌರವಯುತ ಬದುಕನ್ನು ಬದುಕಬೇಕೆಂದು ಕರೆ ನೀಡಿದರು.
ಮನೆ ಮೇಲೆ ಮನೆಗಳನ್ನು ಕಟ್ಟುತ್ತಿರುವ ಈ ಸಮಾಜದಲ್ಲಿ ಮನಸ್ಸುಗಳನ್ನು ಕಟ್ಟುವ ಕೆಲಸ ಆಗುತ್ತಿಲ್ಲ. ಸಮಾಜದಲ್ಲಿ ಹಣವಂತರ ಕೊರತೆಯಿಲ್ಲ. ಗುಣವಂತರ ಕೊರತೆ ಇದೆ ಎಂದು ವಿಷಾದಿಸಿದರು.
ಜೀವನದಲ್ಲಿ ಮರೆಯಲಾಗದ ಮಾಣಿಕ್ಯಗಳು ತಂದೆ-ತಾಯಿ. ಅವರಿಗೆ ಮೊದಲು ಗೌರವ ಕೊಡಬೇಕು. ಅವರಿಗೆ ನೋವು ಉಂಟು ಮಾಡದ ರೀತಿಯಲ್ಲಿ ನಮ್ಮ ನಡವಳಿಕೆ ಇರಬೇಕೆಂದರು.
ಮೊಬೈಲ್ ಬಳಕೆಯಿಂದ ದೂರವಿರಬೇಕು. ಇದು ಸಮಾಜಕ್ಕೆ ಕಂಟಕ ಪ್ರಾಯವಾಗಿದೆ. ಒಳ್ಳೆಯ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಕನ್ನಡ ಸಾಹಿತ್ಯ ಅತ್ಯಂತ ಶ್ರೇಷ್ಠವಾದ ಸಾಹಿತ್ಯ.
ಅಗ್ರಮಾನ್ಯ ಭಾಷೆ ಕನ್ನಡ ಭಾಷೆ. ಬದುಕು ಬದಲಾಯಿಸುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ. ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಸತ್ಪ್ರಜೆಗಳಾಗುತ್ತೇವೆ ಎಂಬ ಪಣವನ್ನು ಇಂದು ತೊಡಬೇಕಾಗಿದೆ ಎಂದು ಕರೆ ನೀಡಿದರು.
ಸಿದ್ಧಗಂಗಾ ಶಿವಕುಮಾರ ಶ್ರೀ, ಸಿದ್ದೇಶ್ವರ ಶ್ರೀ, ಪುಟ್ಟರಾಜ ಕವಿ ಗವಾಯಿಗಳು ನಮಗೆಲ್ಲಾ ಆದರ್ಶವಾಗಬೇಕಿದೆ. ಆಳವಾದ ಜ್ಞಾನ ತಿಳಿಯದಿದ್ದರೂ ಹಾಳು ಮಾಡುವ ಜ್ಞಾನ ಬೆಳೆಸಿಕೊಳ್ಳಬಾರದು. ಶೋಕಿ, ಸ್ಟೈಲುಗಳನ್ನು ಬಿಟ್ಟು ಸಂಸ್ಕೃತಿ, ಸಂಸ್ಕಾರ, ಸಭ್ಯತೆ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತಂದೆ-ತಾಯಿಯ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳುವವರು, ಯಾರು ಆರೋಗ್ಯವಾಗಿ, ನೆಮ್ಮದಿಯಿಂದ ನಿದ್ದೆ ಮಾಡುತ್ತಾರೋ ಅವರು ಕೋಟ್ಯಾಧಿಪತಿಗಳು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಕಳೆದ ಮೂವತ್ತೈದು ವರ್ಷಗಳಿಂದ ಕಲಾಕುಂಚ ಸಂಸ್ಥೆ ಮೂಲಕ ಕನ್ನಡ ನುಡಿ ಸೇವೆ ಮಾಡುತ್ತಾ ಬಂದಿರುವ ಸಾಲಿಗ್ರಾಮ ಗಣೇಶ್ ಶೆಣೈ ಅವರ ಸೇವೆ ಅಮೋಘವಾದುದು ಎಂದರು.
ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗಿಂತ ಆಂಗ್ಲ ಮಾಧ್ಯಮ ಶಾಲೆಗಳಿಗೇ ಹೆಚ್ಚು ಅನುಮತಿ ನೀಡುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ. ಕನ್ನಡ ಅತ್ಯಂತ ಪ್ರಾಚೀನ ಭಾಷೆ, ವಿಶ್ವದಲ್ಲೇ ಮಾನ್ಯತೆ ಪಡೆದ ಮತ್ತು ಲಿಪಿಗಳ ರಾಣಿ ಕನ್ನಡ ಎಂದು ಹೇಳಿದರು.
ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಕಲಾಕುಂಚ ಕೇರಳ ಗಡಿ ಶಾಖೆಯ ಸಹ ಕಾರ್ಯದರ್ಶಿಗಳೂ, ಹಿರಿಯ ಸಾಹಿತಿ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ, ಜಯಲಕ್ಷ್ಮಿ ಕಾರಂತ್, ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷೆ ವಸಂತಿ ಮಂಜುನಾಥ್, ಕರ್ನಾಟಕದ ಪ್ರಥಮ ಶೈಕ್ಷಣಿಕ ಸಾಧಕಿ ಟಿ.ಎಸ್. ಭಾವನ, ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಜ್ಯೋತಿ ಗಣೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಸಾಧಕಿ ಟಿ.ಎಸ್. ಭಾವನ ಸೇರಿದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ಕನ್ನಡ ಕೌಸ್ತುಭ’, `ಸರಸ್ವತಿ ಪುರಸ್ಕಾರ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂದನ್ ಹೆಬ್ಬಾರ್ ಪ್ರಾರ್ಥಿಸಿದರು. ಕವಿತಾ ವೀರೇಶ್ ಸ್ವಾಗತಿಸಿದರು. ರೇಖಾ ಪುರಾಣಿಕ್ ನಿರೂಪಿಸಿದರು. ಕಲಾಕುಂಚ ಕಾರ್ಯದರ್ಶಿ ಕೆ.ಸಿ. ಉಮೇಶ್, ಬೇಳೂರು ಸಂತೋಷ್ ಕುಮಾರ್, ರಾಜಶೇಖರ್, ಶಾಂತಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.