ಹಿಂದೂ ಮಹಾ ಗಣಪತಿ ಉತ್ಸವಕ್ಕೆ ಹಂದರಗಂಬ ಪೂಜೆಯಲ್ಲಿ ಗಣ್ಯರು
ಈ ವಾರದಲ್ಲಿ ಭದ್ರಾ ಡ್ಯಾಂ ಪೂಜೆ ಮಾಡಲು ಹೋಗುತ್ತಿದ್ದೇವೆ. ಜಲಾಶಯದಿಂದ ಜಿಲ್ಲೆಗೆ ಕುಡಿಯುವ ನೀರು ಸಮಗ್ರವಾಗಿ ಸಿಗಲಿ ಎನ್ನುವುದು ನನ್ನ ಆಶಯ. ನಾಳೆ ಕಾಡಾ ಸಭೆ ಕರೆಯುತ್ತಿದ್ದಾರೆ. ಸಭೆ ಮುಗಿದ ನಂತರ ರಾತ್ರಿ ನಾಲೆಗೆ ನೀರು ಬಿಡುವವರೆಂಬ ನಂಬಿಕೆ ಇದೆ. – ಎಸ್.ಎ. ರವೀಂದ್ರನಾಥ್
ದಾವಣಗೆರೆ, ಜು.28- ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಕಾಶಿ ಕಾರಿಡಾರ್ ಮಾದರಿಯಲ್ಲಿ ಮಹಾ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದರು.
ಗಣೇಶ ಮಹೋತ್ಸವ ಆಚರಣೆ ಅಂಗವಾಗಿ ಟ್ರಸ್ಟಿನ 7ನೇ ವರ್ಷದ ಗಣೇಶೋತ್ಸವಕ್ಕೆ ಭಾನುವಾರ ಹಂದರಗಂಭದ ಪೂಜೆ ನೆರವೇರಿಸಲಾಯಿತು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಸ್.ಎ ರವೀಂದ್ರನಾಥ್ ಸೇರಿದಂತೆ ರಾಜಕೀಯ ನಾಯಕರು ಹಾಗೂ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.
100×200 ಅಡಿ ಅಳತೆಯಲ್ಲಿ ಕಾಶಿ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಲು ನಿಶ್ಚಯ ಮಾಡಿದ್ದೇವೆ. ಆದ್ದರಿಂದ ಕಾಶಿಗೆ ಭೇಟಿ ನೀಡಿ ಅಲ್ಲಿನ ಗುರುಗಳನ್ನು ಸಂಪರ್ಕ ಮಾಡಿ ಫೋಟೋ ಹಾಗೂ ದೇಗುಲ ವಿನ್ಯಾಸವನ್ನು ವೀಕ್ಷಿಸಿ ಬಂದಿದ್ದೇವೆ ಎಂದು ಮಾಹಿತಿ ನೀಡಿದರು.
ಇಲ್ಲಿನ ಜನ ರಾಜ್ಯದ ಎಲ್ಲಾ ಕಡೆ ತೀರ್ಥಯಾತ್ರೆ ಮಾಡಿರುತ್ತಾರೆ. ಆದರೆ ಉತ್ತರ ಭಾರತದ ಪುಣ್ಯಕ್ಷೇತ್ರಗಳನ್ನು ಕೆಲವೇ ಜನ ನೋಡಿರುತ್ತಾರೆ. ಅಲ್ಲಿಗೆ ಹೋಗಲು ಆಗದಿರುವ ಜಿಲ್ಲೆಯ ಜನರಿಗೆ ಉತ್ತರ ಭಾರತದ ದೇಗುಲ ತೋರಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಮಂಟಪ ನಿರ್ಮಾಣ ಮಾಡಲು ಕಲ್ಕತ್ತಾದಿಂದ ಬರುತ್ತಿದ್ದು, ಬುಧವಾರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದಲ್ಲಿ ಮಳೆ-ಬೆಳೆ ಸಮೃದ್ಧವಾಗಿದ್ದರಿಂದ ರೈತರ ಮೊಗದಲ್ಲಿ ಸಂತಸ ಕಾಣುತ್ತಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಗಣೇಶ ಹಬ್ಬದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ಇಲ್ಲಿನ ಕಾರ್ಯಕರ್ತರು ಹಿಂದಿನಿಂದ ಉತ್ತಮವಾಗಿ ಗಣೇಶ ಹಬ್ಬ ಮಾಡುತ್ತಾ ಬಂದಿದ್ದಾರೆ, ಮುಂದೆ ಇನ್ನೂ ಚೆನ್ನಾಗಿ ಹಬ್ಬ ಮಾಡಲಿ ಎಂದು ಆಶಿಸಿದರು.
ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಕೆ.ಬಿ. ಶಂಕರ ನಾರಾಯಣ, ಶಿವನಹಳ್ಳಿ ರಮೇಶ್, ದಿನೇಶ್ ಕೆ. ಶೆಟ್ಟಿ, ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಕೆ.ಎಸ್. ರಮೇಶ್, ಶಿವನಗೌಡ ಪಾಟೀಲ್, ಮಂಜುನಾಥ್, ಟಿಂಕರ್ ಮಂಜಣ್ಣ, ಮಾಗಿ ಜಯಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.