ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರ ಶೌರ್ಯ ಸ್ಮರಣೀಯ

ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರ ಶೌರ್ಯ ಸ್ಮರಣೀಯ

ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ದೇವಸ್ಥಾನ ಸಮರ್ಥನಾ ಸೇವಾ ಸಮಿತಿ ಸಂಚಾಲಕ ಮುನಿಯಪ್ಪ

ದಾವಣಗೆರೆ, ಜು. 26-  ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಭಾರತೀಯ ಸೈನಿಕರ ಶೌರ್ಯಕ್ಕೆ ಗೌರವ ಸಲ್ಲಿಸಲೇ ಬೇಕಾಗುತ್ತದೆ. ಅವರ ಹೋರಾಟಮಯ ಜೀವನ ಸ್ಮರಣೀಯ. ಪ್ರತಿ ಜುಲೈ 26 ರಂದು ಆಚರಿಸಲಾಗುವ ಕಾರ್ಗಿಲ್ ವಿಜಯ ದಿವಸ ಮರೆಯಲಾಗದು ಎಂದು ದೇವಸ್ಥಾನ ಸಮರ್ಥನಾ ಸೇವಾ ಸಮಿತಿ ಸಂಚಾಲಕ ಮುನಿಯಪ್ಪ ಹೇಳಿದರು.

ನಗರದ ಶ್ರೀ ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರದಲ್ಲಿ ಪ್ರೇರಣ ಯುವ ಸಂಸ್ಥೆ, ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘ ಹಾಗೂ  ಜಿಲ್ಲಾ ಪ್ಯಾರಾ ಮಿಲಿಟರಿ ಕ್ಷೇಮಾಭಿವೃದ್ಧಿ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಪ್ರಮುಖ ಭಾಷಣ ಮಾಡಿದರು.

ಯಾವ ಭಾರತೀಯ ಕೂಡ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಭಾರತ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದಾರೆ. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಭಾರತೀಯರಿಗೆಲ್ಲರಿಗೂ ಸ್ಫೂರ್ತಿ ಎಂದರು.

ಭಾರತೀಯ ಸೇನೆ `ಆಪರೇಷನ್ ವಿಜಯ್’ ಎಂಬ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ್ದ ಭಾರತೀಯ ಯೋಧರು ಪಾಕಿಸ್ತಾನ ಸೈನ್ಯ ಹಾಗೂ ಉಗ್ರಗಾಮಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದರು. ಇದರ ಫಲವಾಗಿ ತನ್ನ ಭೂ ಪ್ರದೇಶದಲ್ಲಿ ಭಾರತ ಹಿಡಿತ ಸಾಧಿಸಿಕೊಂಡಿತ್ತು. 1999 ರ ಜುಲೈ 26 ರಂದು `ಟೈಗರ್ ಹಿಲ್’ ವಶಪಡಿಸಿಕೊಳ್ಳುವು ದರೊಂದಿಗೆ ಯುದ್ಧ ಅಂತ್ಯಗೊಂಡಿತು ಎಂದು ಹೇಳಿದರು.

ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ 527 ಭಾರತೀಯ ಯೋಧರು ಹುತಾತ್ಮರಾದರು. 1363 ಸೈನಿಕರು ಗಾಯಗೊಂಡಿದ್ದರು. ಆಕ್ರಮಿತ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರಿಂದ ಭಾರತಕ್ಕೆ ವಿಜಯವೆಂದು ಪರಿಗಣಿಸಲಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಯೋಧ ಡಾ. ಸುನೀಲ್ ಕುಮಾರ್ ಅವರು, ಸೈನಿಕರಿಗೆ ಸಲ್ಲಿಸಿದ ತಮ್ಮ ವೈದ್ಯಕೀಯ ಸೇವೆಯನ್ನು ವಿವರಿಸಿದರು. 

ಇಎನ್‌ಟಿ ತಜ್ಞ ಡಾ. ಶಿವಕುಮಾರ್ ಮಾತನಾಡಿ, ಯೋಧರಿಗೆ ಗೌರವ ಕೊಡುವುದಲ್ಲದೇ, ಆಯಾ ಕ್ಷೇತ್ರದಲ್ಲಿರುವ ನೌಕರ ವರ್ಗದವರು ತ್ವರಿತಗತಿಯಲ್ಲಿ ಯೋಧರ ಕೆಲಸಗಳನ್ನು ಮಾಡಿಕೊಡಬೇಕೆಂದು ಸಲಹೆ ನೀಡಿದರು.

ದೇಶ ರಕ್ಷಣೆಯಲ್ಲಿ ತೊಡಗಿರುವ ಯೋಧರ ಸೇವೆ ಮಾಡುವುದು ನಮ್ಮ ಸೌಭಾಗ್ಯ. ಜೀವದ ಹಂಗು ತೊರೆದು ದೇಶ ಸೇವೆಯಲ್ಲಿ ಭಾಗಿಯಾದ ಸೈನಿಕರನ್ನು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.

ಪ್ರೇರಣ ಯುವ ಸಂಸ್ಥೆ ಅಧ್ಯಕ್ಷ ಎಸ್.ಟಿ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಮಾಜಿ ಯೋಧರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.

ಮಾಜಿ ಯೋಧರಾದ ಮಂಜಾನಾಯ್ಕ, ಸಂಸ್ಥೆ ಪದಾಧಿಕಾರಿಗಳಾದ ಮಹೇಶ್ ಶೆಟ್ಟಿ, ಗಣೇಶ್, ಕಿರಣ್ ಸೇರಿದಂತೆ ಬಿಜೆಪಿ ಪ್ರಮುಖರಾದ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಕೆ. ಪ್ರಸನ್ನಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಸತ್ಯಪ್ರಕಾಶ್, ಅಶೋಕ್ ಮತ್ತಿತರರು ಭಾಗವಹಿಸಿದ್ದರು.

ಮಾನಸ, ಶ್ರೀಧರ್, ನಿಹಾರಿಕಾ ಮತ್ತು ಸಂಗಡಿಗರು ದೇಶಭಕ್ತಿ ಗೀತೆ ಹಾಡಿದರು.

error: Content is protected !!