25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ

25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ

ಪ್ರೇರಣಾ ಯುವ ಸಂಸ್ಥೆಯಿಂದ ರಾಯಲ್ ಎನ್‌ಫೀಲ್ಡ್ ಬೈಕ್ ರ‍್ಯಾಲಿ

ದಾವಣಗೆರೆ, ಜು. 26- 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಪ್ರೇರಣಾ ಯುವ ಸಂಸ್ಥೆ ವತಿಯಿಂದ `ರಾಯಲ್ ರ‍್ಯಾಲಿ ಫಾರ್ ರಾಯಲ್ ವಿಕ್ಟರಿ’ ಎನ್ನುವ ರಾಯಲ್ ಎನ್‌ಫೀಲ್ಡ್ ಬೈಕ್ ರ‍್ಯಾಲಿವಿಜೃಂಭಣೆಯಿಂದ ನಡೆಯಿತು.

ಸ್ಥಳೀಯ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಅವರು ಬೈಕ್‌ ರಾಲಿಗೆ ಚಾಲನೆ ನೀಡಿ ಮಾತನಾಡಿ, 1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭೀಕರ ಯುದ್ಧವಾಗಿತ್ತು. ಈ ಯುದ್ಧವು ಕಾರ್ಗಿಲ್ ಪ್ರಾಂತ್ಯದಲ್ಲಿ ನಡೆದ ಕಾರಣಕ್ಕಾಗಿ `ಕಾರ್ಗಿಲ್ ಯುದ್ಧ’ ಎಂದು ಕರೆಯಲ್ಪಟ್ಟಿತ್ತು. ಕಾರ್ಗಿಲ್ ಯುದ್ಧವು ಭಾರತಕ್ಕೆ ಜಯ ತಂದುಕೊಟ್ಟಿತ್ತಾದರೂ ಈ ಸಮರದಲ್ಲಿ ಕೆಲವು ಯೋಧರು ಹುತಾತ್ಮ ರಾಗಿದ್ದಾರೆ ಎಂದರು.

ಕಾರ್ಗಿಲ್ ಯುದ್ಧದ ಗೆಲುವನ್ನು ಸಂಭ್ರಮಿಸುವ ಮತ್ತು ಹುತಾತ್ಮ ಯೋಧರಿಗೆ ಗೌರ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ಹೇಳಿದರು.

ಬೈಕ್ ರಾಲಿ ನೇತೃತ್ವ ವಹಿಸಿದ್ದ ಪ್ರೇರಣ ಯುವ ಸಂಸ್ಥೆ ಅಧ್ಯಕ್ಷ ಎಸ್.ಟಿ. ವೀರೇಶ್ ಮಾತನಾಡಿ, ಪಾಕಿಸ್ತಾನದ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳ ವಿಜಯ ಸಾಧಿಸಿದ ಸಂಕೇತವಾಗಿ ಜುಲೈ 27 ಅನ್ನು ಕಾರ್ಗಿಲ್ ವಿಜಯ ದಿವಸ್ ಅಥವಾ ವಿಜಯೋತ್ಸವ ಎಂದು ಆಚರಿಸಲಾಗುತ್ತಿದೆ ಎಂದರು.

ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಸೈನಿಕರು ವೀರ ಮರಣವನ್ನು ಹೊಂದುತ್ತಾರೆ. ಸುಮಾರು 1363 ಮಂದಿ ಗಾಯಗೊಂಡಿದ್ದರು. 1999 ಮೇ ತಿಂಗಳಿನಿಂದ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ 26 ರವರೆಗೆ ನಡೆದು ಅಂತಿಮವಾಗಿ ಈ ಯುದ್ಧದಲ್ಲಿ ಲೇಹ್ ಹೆದ್ದಾರಿವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೈನ್ಯ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಬೈಕ್ ರಾಲಿಯು ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಆರಂಭವಾಗಿ ಆರಂಭವಾಗಿ ರಾಜ ಬೀದಿಗಳ ಮುಖಾಂತರ ಮೇಜರ್ ರವೀಂದ್ರನಾಥ್ ವೃತ್ತವನ್ನು ಹಾಯ್ದು ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ ಜವಾನ್ ಉದ್ಯಾನವನದ ಬಳಿ ಸಮಾಪನೆಗೊಂಡಿತು.

ಬೈಕ್ ರ‍್ಯಾಲಿಯಲ್ಲಿ ಯೋಧ ಚಂದ್ರಪ್ಪ, ಮಾಜಿ ಯೋಧರಾದ ಸತ್ಯಪ್ರಕಾಶ್, ಮಂಜಾನಾಯ್ಕ, ಪಾಲಿಕೆ ಸದಸ್ಯ ಆರ್.ಎಲ್. ಶಿವಪ್ರಕಾಶ್, ಮಾಯಕೊಂಡ ಕ್ಷೇತ್ರದ ಬಿಜೆಪಿ ಮುಖಂಡ ಜಿ.ಎಸ್. ಶ್ಯಾಂ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!